×
Ad

MRPLನಲ್ಲಿ ಮೃತಪಟ್ಟ ಕಾರ್ಮಿಕನ ಕುಟುಂಬಕ್ಕೆ ಪರಿಹಾರ, ತನಿಖೆಯ ಕುರಿತು ಕಾಳಜಿ ವಹಿಸುವಂತೆ ಡಿಸಿಗೆ ಮನವಿ: ಮುನೀರ್‌ ಕಾಟಿಪಳ್ಳ

Update: 2024-05-29 22:48 IST

ಮಂಗಳೂರು: MRPL ನ ಘೋರ ನಿರ್ಲಕ್ಷ್ಯ, ಗುತ್ತಿಗೆ ಕಾರ್ಮಿಕರ ಕುರಿತಾದ ಅಸಡ್ಡೆಯ ಧೋರಣೆಗಳಿಗೆ ಬಲಿಯಾದ ಜಾರ್ಖಂಡ್ ನ ಆದಿವಾಸಿ ವಲಸೆ ಕಾರ್ಮಿಕ ಮಂಗ್ರಾ ಓರೋನ್ ಪೋಸ್ಟ್ ಮಾರ್ಟಂ ಇಂದು ನಡೆಯಲಿದೆ. ಅವಘಡದ ಕುರಿತು ಮಾಹಿತಿ ನೀಡಿ, ಕಂಪೆನಿಯ ಹಾಗೂ ಗುತ್ತಿಗೆ ಏಜೆನ್ಸಿಯ ತಪ್ಪಿನಿಂದ ಮೃತ ಪಟ್ಟ ವಲಸೆ ಕಾರ್ಮಿಕನ ಕುಟುಂಬಕ್ಕೆ ಸಿಗಬೇಕಾದ ಪರಿಹಾರ, ತನಿಖೆಯ ಕುರಿತು ಕಾಳಜಿ ವಹಿಸುವಂತೆ ಜಿಲ್ಲಾಧಿಕಾರಿ, ಅಪರ ಜಿಲ್ಲಾಧಿಕಾರಿಯವರಲ್ಲಿ ನಿನ್ನೆಯೇ ವಿನಂತಿಸಲಾಯಿತು ಎಂದು ಡಿವೈಎಫ್‌ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ ತಿಳಿಸಿದ್ದಾರೆ.

MRPL ಕಾರ್ಮಿಕ ಸಂಘದ ಪದಾಧಿಕಾರಿಗಳು ನೀಡಿದ ಮಾಹಿತಿ ಪ್ರಕಾರ ವಿಮೆ, ಪಿಎಫ್ ಮೇಲಿನ ವಿಮೆ, ಅವಘಡದಲ್ಲಿ ಮೃತ ಪಟ್ಟಾಗ ಒಪ್ಪಂದದಂತೆ ನೀಡಬೇಕಾದ ಪರಿಹಾರ, ಗುತ್ತಿಗೆ ಏಜನ್ಸಿ ನೀಡಬೇಕಾದ ಪರಿಹಾರಗಳು ಸೇರಿ ಸುಮಾರು 25 ಲಕ್ಷ ರೂಪಾಯಿ ಮೃತ ಕಾರ್ಮಿಕನ ಕುಟುಂಬಕ್ಕೆ ದೊರಕಲಿದೆ. ಆದರೆ, ಇದು ಸಾಲದು. ಮೃತ ಕಾರ್ಮಿಕನಿಗೆ ಮಡದಿ ಹಾಗೂ ಎರಡು ಪುಟಾಣಿ ಮಕ್ಕಳಿದ್ದಾರೆ. ಅವಲಂಬಿತ ಕುಟುಂಬ ಇದೆ. ಕಂಪೆನಿಯ ನಿರ್ಲಕ್ಷ್ಯ, ನಿಯಮ ಪಾಲನೆಯ ಉಲ್ಲಂಘನೆಯಿಂದ ಈ ಸಾವು ಸಂಭವಿಸಿದೆ. ಈಗ ದೊರಕುತ್ತಿರುವ ಪರಿಹಾರದಲ್ಲಿ ಕಂಪೆನಿಯ ಕಡೆಯಿಂದ ದೊರಕುವ ಮೊತ್ತಗಳು ಯಾವುದೂ ಇಲ್ಲ. ವರ್ಷಕ್ಕೆ ಲಕ್ಷ ಕೋಟಿ ರೂಪಾಯಿಗಳ ವ್ಯವಹಾರ ನಡೆಸುವ ಕಂಪೆನಿಯು ತನ್ನ ಕಂಪೆನಿಗಾಗಿ ಪ್ರಾಣತ್ಯಾಗ ಮಾಡಿದ ವಲಸೆ ಕಾರ್ಮಿಕನ ಕುಟುಂಬವನ್ನು ನಡೆಸಿಕೊಳ್ಳುವ ರೀತಿ ಇದಲ್ಲ. ಆತನ ಪ್ರಾಣ ತ್ಯಾಗಕ್ಕೆ ಕಂಪೆನಿ ಬೆಲೆ ಕಟ್ಟಲಾಗದು. ಪ್ರಥಮವಾಗಿ ಮಂಗ್ರಾ ಓರೋನ್ ಮೃತ ದೇಹಕ್ಕೆ ಕಂಪೆನಿ ಗೌರವ ವಿದಾಯ ಸಲ್ಲಿಸಬೇಕು. ಮೃತ ದೇಹ ಹಾಗೂ ಕುಟುಂಬಸ್ಥರನ್ನು ಯಾವುದೇ ಸಮಸ್ಯೆಗಳು ಆಗದಂತೆ ಗೌರವ ಪೂರ್ವಕವಾಗಿ ಅವರ ಊರಿಗೆ ತಲುಪಿಸಬೇಕು. ಹಾಗೆಯೆ ಒಟ್ಟು ಒಂದು ಕೋಟಿ ರೂಪಾಯಿ ಪರಿಹಾರ ಧನ, ಆತನ ಹೆಂಡತಿಗೆ (ಅವರು ಬಯಸಿದರೆ) ಕನಿಷ್ಟ ಗುತ್ತಿಗೆ ಆಧಾರದಲ್ಲಾದರು ಉದ್ಯೋಗ ಒದಗಿಸಬೇಕು. ಮೃತನ ಮಕ್ಕಳಿಬ್ಬರ ವಿದ್ಯಾಭ್ಯಾಸದ ಹೊಣೆಯನ್ನು mrpl ಆಡಳಿತವೇ ವಹಿಸಿಕೊಳ್ಳಬೇಕು. ಇಷ್ಟಾಗದಿದ್ದಲ್ಲಿ ಕಂಪೆನಿ ಯಾವುದೇ ಕ್ಷಮೆಗೆ ಅರ್ಹ ಅಲ್ಲ.

ಇದರ ಜೊತೆಗೆ, ಮಂಗ್ರಾ ಓರೋನ್ ಸಾವಿನ ಅವಘಡದ ಕುರಿತು ಸರಿಯಾದ ತನಿಖೆ ನಡೆಯಬೇಕು. ಪೊಲೀಸ್ ತನಿಖೆಯ ಜೊತೆಯಲ್ಲಿ ಜಿಲ್ಲಾಡಳಿತ ಪ್ರತ್ಯೇಕ ತನಿಖೆ ನಡೆಸಬೇಕು. (ಈಗಾಗಲೆ ಮಂಗ್ರಾ ಸಾವಿನ ಪ್ರಕರಣದ ತನಿಖೆಯನ್ನು ಅಲ್ಲಿಂದಲ್ಲಿಗೆ ಸರಿಪಡಿಸಲು ಮಾತುಕತೆಗಳು ನಡೆಯುತ್ತಿದೆ ಎಂಬ ಗುಸು ಗುಸು ಹರಡಿದೆ) ಗುತ್ತಿಗೆದಾರ ಏಜನ್ಸಿ ನಿಯಮಗಳನ್ನು ಸರಿಯಾಗಿ ಪಾಲಿಸುತ್ತಿತ್ತೆ, ಕಂಪೆನಿಯ ಒಳಗಡೆ ಕಾರ್ಮಿಕರ ಸುರಕ್ಷತಾ ವ್ಯವಸ್ಥೆಯಲ್ಲಿ ಲೋಪ ಆಗಿತ್ತೆ ? ಎಂಬುದು ತನಿಖೆ ಆಗಲೇಬೇಕು. ಗುತ್ತಿಗೆ ಆಧಾರಿತ ವಲಸೆ ಕಾರ್ಮಿಕರನ್ನು ಶೆಡೌನ್ ಸಂದರ್ಭ 18, 20 ಗಂಟೆಗಳ ಕಾಲ ಸತತವಾಗಿ ದುಡಿಸುವ ಆರೋಪ ನಿಜವೆ ಎಂಬುದೂ ತನಿಖೆಯಾಗಬೇಕು. ಇದನ್ನೆಲ್ಲಾ ಖಾತರಿ ಪಡಿಸುವುದು ಜಿಲ್ಲಾಡಳಿತ, ಉಸ್ತುವಾರಿ ಸಚಿವರು, ಕಾರ್ಮಿಕ ಸಚಿವರ ಕರ್ತವ್ಯ.

ತುಳುನಾಡಿನ ಯುವಕರಿಗೆ ತಿಳಿದಿರಲಿ, ಇದೆಲ್ಲಾ ಸ್ಥಳೀಯ ಯುವಜನತೆಗೆ ಸಿಗಬೇಕಾದ ಉದ್ಯೋಗ. ಕಡಿಮೆ ವೇತನ, ಸವಲತ್ತುಗಳ ಮೂಲಕ ಅಗ್ಗಕ್ಕೆ ದುಡಿಸಿಕೊಳ್ಳಲಿಕ್ಕಾಗಿ ದೂರದ ರಾಜ್ಯಗಳಿಂದ ವಲಸೆ ಕಾರ್ಮಿಕರನ್ನು ಕರೆತಂದು ಅರೆ ಜೀತಗಾರಿಕೆಯ ಮೂಲಕ ಶೋಷಣೆ ಮಾಡಲಾಗುತ್ತಿದೆ. ಇದೆಲ್ಲದರ ವಿರುದ್ಧ ಧ್ವನಿ ಎತ್ತುವುದು ತುಳುನಾಡ (ಯುವ) ಜನತೆಯ ಪ್ರಧಾನ ಆದ್ಯತೆ. "ತುಳುನಾಡ ಅಭಿವೃದ್ದಿಡ್ ತುಳುವಪ್ಪೆ ಜೋಕುಲೆಗು ಮಲ್ಲ ಪಾಲ್" ಎಂಬುದು ಖಾತರಿಯಾಗುವಂತೆ ಬಲವಾದ ಧ್ವನಿ ಎತ್ತಲು ಇದು ಸಕಾಲ ಎಂದು ಮುನೀರ್ ಕಾಟಿಪಳ್ಳ ಅವರು ಪ್ರಕಟನೆಯಲ್ಲಿ ತಿಳಿಸಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News