ನರಿಂಗಾನ | ಸೇತುವೆ ಕುಸಿತ : ರಸ್ತೆ ಸಂಚಾರದಲ್ಲಿ ಬದಲಾವಣೆ
ನರಿಂಗಾನ: ಉಳ್ಳಾಲ ತಾಲೂಕಿನ ನರಿಂಗಾನ ಗ್ರಾಮದ ಕೊಲ್ಲರಕೋಡಿ ಎಂಬಲ್ಲಿ ಸೇತುವೆ ಕುಸಿದಿದ್ದು, ಹೊಸ ಸೇತುವೆ ನಿರ್ಮಾಣ ಕಾಮಗಾರಿ ನಡೆಯಲಿರುವುದರಿಂದ ಸಾರ್ವಜನಿಕರು ಬದಲಿ ಮಾರ್ಗವನ್ನು ಬಳಸುವಂತೆ ನರಿಂಗಾನ ಗ್ರಾಮ ಪಂಚಾಯತ್ ಸೂಚನೆ ನೀಡಿದೆ.
ಶುಕ್ರವಾರ ತಡರಾತ್ರಿ ಸುರಿದ ಭಾರಿ ಮಳೆಗೆ ಕೊಲ್ಲರಕೋಡಿಯಲ್ಲಿ ಸೇತುವೆ ಕುಸಿದಿದೆ. ಸ್ಥಳಕ್ಕೆ ಪಂಚಾಯತ್ ಅಧ್ಯಕ್ಷರಾದ ನವಾಝ್ ಎಂಬಿ, ತಹಶೀಲ್ಧಾರ್ ಪುಟ್ಟರಾಜು ಡಿಎಸ್, ಪಂಚಾಯತ್ ರಾಜ್ ಇಂಜಿನಿಯರ್ ವಿಭಾಗದ ತಾರನಾಥ್ ಸಾಲ್ಯಾನ್, ಜೂನಿಯರ್ ಇಂಜಿನಿಯರ್ ರವಿಚಂದ್ರ , ಪಿಡಿಒ ರಜನಿ ಗಟ್ಟಿ ಸೇರಿದಂತೆ ಅಧಿಕಾರಿಗಳು ತೆರಳಿ ಪರಿಶೀಲನೆ ನಡೆಸಿದ್ದಾರೆ.
ಅಧಿಕಾರಿಗಳು ಪರಿಶೀಲನೆ ಬಳಿಕ ನೀಡಿದ ಮಾಹಿತಿ ಆಧರಿಸಿ ಉಳ್ಳಾಲ ವಿಧಾನಸಭಾ ಕ್ಷೇತ್ರದ ಶಾಸಕರಾದ ಸ್ಪೀಕರ್ ಯುಟಿ. ಖಾದರ್ ಅವರು ಹೊಸ ಸೇತುವೆ ನಿರ್ಮಾಣಕ್ಕೆ ಸೂಚನೆ ನೀಡಿದ್ದಾರೆ.
ಉಳ್ಳಾಲ ತಾಲೂಕಿನ ಮಂಜನಾಡಿ, ಕೊಲ್ಲರಕೋಡಿ, ನೆತ್ತಿಲಪದವು, ಕೆದುಂಬಾಡಿ ರಸ್ತೆಯಲ್ಲಿ ಹಳೆಯ ಸೇತುವೆ ಕೆಡವಿ ಅದೇ ಸ್ಥಳದಲ್ಲಿ ಹೊಸ ಸೇತುವೆ ನಿರ್ಮಾಣ ಕಾಮಗಾರಿ ನಡೆಯಲಿದೆ.
ಹಾಲಿ ಸೇತುವೆಯ ಎರಡೂ ಬದಿ ತೆಂಗು, ಅಡಿಕೆ ತೋಟವಿರುವ ಕಾರಣ ಬದಲಿ ರಸ್ತೆ ನಿರ್ಮಿಸಲು ಅವಕಾಶ ಇರುವುದಿಲ್ಲ. ಹಳೆಯ ಸೇತುವೆಯನ್ನು ಕೆಡವಿ ನೂತನ ಸೇತುವೆ ನಿರ್ಮಿಸಲು ನಾಲ್ಕು ತಿಂಗಳು ಕಾಲಾವಕಾಶ ಬೇಕಾಗಿದೆ ಎಂದು ಹೇಳಲಾಗಿದೆ.
ಸಾರ್ವಜನಿಕರಿಗೆ ಬದಲಿ ಸಂಚಾರ ಮಾರ್ಗ ಬಳಸುವಂತೆ ಸೂಚನೆ :
ಸೇತುವೆ ಕಾಮಗಾರಿ ಹಿನ್ನೆಲೆ ಮಂಜನಾಡಿಯಿಂದ ಮಂಜೇಶ್ವರಕ್ಕೆ ಸಂಚರಿಸುವ ವಾಹನಗಳು ತೌಡುಗೋಳಿ, ಕೆದುಂಬಾಡಿ ಮೂಲಕ ಸಂಚರಿಸುವಂತೆ ನರಿಂಗಾನ ಪಂಚಾಯತ್ ತಿಳಿಸಿದೆ.