ಜನತಾ ಕಾಲನಿ ಶಾಲೆಯ ಜಮೀನು ವಿವಾದವು ಕಂದಾಯ ನಿರೀಕ್ಷಕರು, ತಹಶಿಲ್ದಾರ್ ಯಡವಟ್ಟಿನಿಂದ ನಡೆದಿದೆ: ಗ್ರಾಮಸ್ಥರ ಆರೋಪ
ಸುರತ್ಕಲ್ : ಜನತಾ ಕಾಲನಿ ಶಾಲೆಯ ಜಮೀನು ವಿವಾದವು ಆಶ್ರಯ ಕಾಲನಿ ನಿವೇಶನ ಕಾಯ್ದಿರಿಸುವ ವೇಳೆ ಇದ್ದ ಕಂದಾಯ ನಿರೀಕ್ಷಕರು ಮತ್ತು ತಹಶಿಲ್ದಾರ್ ಅವರ ಯಡವಟ್ಟಿನಿಂದ ನಡೆದಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ಸದ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಉಪ ತಹಶೀಲ್ದಾರ್ ಅವರು ತನಿಖೆ ನಡೆಸಿ ವರದಿ ನೀಡಿದ್ದು, ಇದರಲ್ಲಿ ಕಾನ ಕಟ್ಲ ಜಿಲ್ಲಾ ಪಂಚಾಯತ್ ಹಿರಿಯ ಪ್ರಾಥಮಿಕ ಶಾಲೆ ಮತ್ತು ಆಟದ ಮೈದಾನದ ಸರ್ವೆ ನಂ. 16ಆಗಿದ್ದು, ಇಲ್ಲಿ 94ಸಿ ಅಡಿ 13 ನಿವೇಶನಗಳನ್ನು ಹಂಚಿಕೆ ಮಾಡಲಾಗಿದೆ ಎಂದು ತನ್ನ ವರದಿಯಲ್ಲಿ ತಿಳಿಸಿದ್ದಾರೆ ಎಂದು ತಿಳಿದು ಬಂದಿದೆ.
ಈ ನಿವೇಶನಗಳನ್ನು ಅಂದಿನ ಶಾಸಕ ಮೊಯ್ದೀನ್ ಬಾವ ಶಾಸಕರಾಗಿದ್ದ ಸಂದರ್ಭ ಮಂಜೂರಾತಿ ಪಡೆದು ಬಳಿಕ ಭರತ್ ಶೆಟ್ಟಿ ಶಾಸಕರಾದ ಪ್ರಥಮ ಅವಧಿಯಲ್ಲಿ ಕಾಮಗಾರಿ ಆರಂಭಿಸಲಾಗಿತ್ತು. ಹಲವು ವರ್ಷಗಳ ಕಾಲ ಸುರತ್ಕಲ್ ವಲಯ ದಲ್ಲಿ ಕಂದಾಯ ನಿರೀಕ್ಷಕರಾಗಿ ಕಾರ್ಯನಿರ್ವಹಿಸಿ ಮುಂಬಡ್ತಿ ಪಡೆದು ಸದ್ಯ ಸುರತ್ಕಲ್ ವಿಭಾಗದ ಉಪ ತಹಶಿಲ್ದಾರ್ ಆಗಿರುವ ನವೀನ್ ಅವರ ಕಂದಾಯ ನಿರೀಕ್ಷಕರಾಗಿದ್ದ ಸಮಯದಲ್ಲಿ ನಡೆದ ಎಡವಟ್ಟು ಕಾರಣ ಎಂದು ಗ್ರಾಮಸ್ಥರಾದ ಶರೀಫ್, ಐ. ಮುಹಮ್ಮದ್ ಮೊದಲಾದವರು ಆರೋಪಿಸಿದ್ದಾರೆ.
ಶಾಲೆಯ ಭೂ ಹಗರಣ ಸಂಬಂಧ ವದರಿಯಲ್ಲಿ ತಿಳಿಸಿರುವಂತೆ ಶಾಲೆಗೆ ಮಂಜೂರಾಗಿದ್ದ ಜಾಗದಲ್ಲಿ 94ಸಿ ಅಡಿ 13 ನಿವೇಶನಗಳನ್ನು ಹಂಚಲಾಗಿದೆ ಎಂದು ತಿಳಿದು ಬಂದಿದ್ದು, ಆಶ್ರಯ ಕಾಲನಿಯ ಸರ್ವೇ ನಂ. 161/1ಪಿ ಎಂದು ಅದರ ಆರ್‌ಟಿಸಿಯಲ್ಲಿ ನಮೂದಾಗಿದೆ. ಹಾಗಾದರೆ, ಉಪ ತಹಶೀಲ್ದಾರ್ ಅವರು ವರದಿಯಲ್ಲಿ ಹೇಳಿರುವ 13 ನಿವೇಶನಗಳು ಹಂಚಿಕೆಯಾಗಿರುವ ಭೂಮಿ ಯಾವುದು? ಜೊತೆಗೆ ಶಾಲೆಗೆ ಕಾಯ್ದಿರಿಸಿದ್ದ ಜಾಗದಲ್ಲಿ ಆಶ್ರಯ ಕಾಲನಿ ನಿರ್ಮಾಣ ವಾಗಿರುವುದಾದರೆ, ಅಂದಿನ ಕಂದಾಯ ನಿರೀಕ್ಷಕರು ಮತ್ತು ತಹಶೀಲ್ದಾರ್ ಅವರು ಎಡವಟ್ಟು ಮಾಡಿಕೊಂಡು ಶಾಲೆಯ ಜಾಗವನ್ನು ಆಶ್ರಯ ಕಾಲನಿಗೆ ನೀಡಿದರೇ ಎಂಬ ಪ್ರಶ್ನೆಯನ್ನೂ ಗ್ರಾಮಸ್ಥರು ಕೇಳುತ್ತಿದ್ದಾರೆ.
ಒಟ್ಟಾರೆಯಾಗಿ ಜನತಾ ಕಾಲನಿ ಸರಕಾರಿ ಶಾಲೆಯ ಭೂ ವಿವಾದದಲ್ಲಿ ಕಂದಾಯ ನಿರೀಕ್ಷರು ಮತ್ತು ತಹಶೀಲ್ದಾರ್ ಅವರ ಎಡವಟ್ಟುಗಳು ಎದ್ದು ಕಾಣುತ್ತಿದ್ದು, ಜಿಲ್ಲಾಡಳಿತ ಮಧ್ಯ ಪ್ರವೇಶಿಸಿ ಈ ವಿವಾದದವನ್ನು ಬಗೆಹರಿಸಿ ಪ್ರಸ್ತುತ ಇರುವ ಶಾಲೆ ಮತ್ತು ಆಟದ ಮೈದಾನವನ್ನು ಶಾಲೆಗೇ ನೀಡಬೇಕೆಂಬ ಬೇಡಿಕೆ ಗ್ರಾಮಸ್ಥರದ್ದು.
ಭೂ ಮಾಲಕರಿಗೇ ತಿಳಿದಿಲ್ಲದ ನಿವೇಶನ ! ತಿಳಿದಿದ್ದು ಹೇಗೆ?
ಜನತಾ ಕಾಲನಿ ಸರಕಾರಿ ಶಾಲೆಯ ಭೂ ವಿವಾದ ಏಳುವ 6ತಿಂಗಳ ಹಿಂದೆ ಪ್ರಸ್ತುತ ಶಾಲೆ ಇರುವ ಜಾಗದಲ್ಲಿನ ಭೂಮಿಯನ್ನು ಅಗೆದು ಯುಜಿಡಿಗೆ ಸಂಬಂಧಿಸಿದ ಪೈಪ್‌ಲೈನ್ ವೊಂದನ್ನು ಮಾಡಲಾಗಿತ್ತು. ಈ ಸಂಬಂಧ ಜಾಗವು ಸರಕಾರಿ ಭೂಮಿ ಎಂದೇ ಭಾವಿಸಿ ಕಾಮಗಾರಿಗಳನ್ನು ಆರಂಭಿಸಲಾಗಿತ್ತು. ಬಳಿಕ ಪರಿಹಾರ ವಿತರಣೆಯ ಸಂದರ್ಭ ಸರಕಾರಿ ಅಧಿಕಾರಿಗಳು ಜಾಗದ ಮಾಲಕ ಎಂದು ಸರಕಾರಿ ಭೂಮಿ ಕಬಳಿಸಿದ ಆರೋಪ ಎದುರಿಸುತ್ತಿರುವ ಸ್ಥಳೀಯ ರೊಬ್ಬರಿಗೆ ಮಾಹಿತಿ ನೀಡಿದ್ದಾರೆ ಎನ್ನಲಾಗಿದೆ. ಆ ಬಳಿಕ ಆತ ಭೂಮಿ ತನ್ನದೆಂದು ವಾದ ಆರಂಭಿಸಿ, ಶಾಲೆಗೆ ಸರಕಾರದ ವತಿಯಿಂದ ಕಟ್ಟಲಾಗಿದ್ದ ಕಾಂಪೌಂಡ್ ಗೋಡೆಯನ್ನೂ ಕೆಡವಿ ಮನೆ ನಿರ್ಮಿಸಿದ್ದಾನೆ ಎಂದು ಸ್ಥಳೀಯರು ದೂರಿದ್ದಾರೆ.
"ಉಪ ತಹಶಿಲ್ದಾರ್ ನವೀನ್ ಅವರು ನೀಡಿರುವ ವರದಿಯ ಮೇಲೆ ಗ್ರಾಮಸ್ಥರಿಗೆ ನಂಬಿಕೆ ಇಲ್ಲ. ಜಿಲ್ಲಾಧಿಕಾರಿಯವರ ನೇತೃತ್ವದಲ್ಲೇ ಗಂಭೀರ ಮತ್ತು ಸಮರ್ಪಕ ತನಿಖೆಯಾಗಬೇಕು. ಸರಕಾರಿ ಅಧಿಕಾರಿಗಳ ಎಡವಟ್ಟುಗಳಿಂದಾಗಿ ಗ್ರಾಮಸ್ಥರು ಪರದಾಡುವಂತಾಗಿದೆ. ಜಿಲ್ಲಾಧಿಕಾರಿಯವರ ತನಿಖೆಯ ಬಳಿಕ ಶಾಲೆ ಮತ್ತು ಆಟದ ಮೈದಾನ ಖಾಸಗಿ ಭೂಮಿ ಎಂದು ತಿಳಿದು ಬಂದರೆ, ಸರಕಾರಿ ಮೌಲ್ಯದಂತೆ ಭೂ ಮಾಲಕರಿಗೆ ಪರಿಹಾರ ನೀಡಿ ಶಾಲೆ ಮತ್ತು ಆಟದ ಮೈದಾನವನ್ನು ಜಿಲ್ಲಾಡಳಿತ ಉಳಿಸಬೇಕು. ಯಾವುದೇ ಕಾರಣಕ್ಕೂ ಶಾಲೆ ಮತ್ತು ಆಟದ ಮೈದಾನ ಬಿಟ್ಟು ಕೊಡುವ ಪ್ರಶ್ನೆಯೇ ಇಲ್ಲ".
- ಬಿ.ಕೆ. ಇಮ್ತಿಯಾಝ್
ಜನತಾ ಕಾಲನಿ ಸರಕಾರಿ ಶಾಲೆ ಉಳಿಸಿ ಹೋರಾಟ ಸಮಿತಿಯ ಸಂಚಾಲಕ