×
Ad

ಕಾರ್ನಾಡು ಸದಾಶಿವ ರಾವ್ ಕೈಯಲ್ಲಿ ಚಿಕ್ಕಾಸು ಇಲ್ಲದೆ ನಿಧನರಾದ ಕೊಡುಗೈ ದಾನಿ: ಅರವಿಂದ ಚೊಕ್ಕಾಡಿ

Update: 2023-12-02 15:57 IST

ಮಂಗಳೂರು, ಡಿ. 2: ಅಗರ್ಭ ಶ್ರೀಮಂತರಾಗಿದ್ದ ಕಾರ್ನಾಡು ಸದಾಶಿವ ರಾವ್ ಕೈಯಲ್ಲಿ ಅರ್ಧ ಮಂಗಳೂರೇ ಇತ್ತು. ಆದರೆ ಅವೆಲ್ಲವನ್ನು ದಾನ ಮಾಡಿ ಕೈಯಲ್ಲಿ ಚಿಕ್ಕಾಸು ಇಲ್ಲದೆ ನಿಧನರಾದ ಕೊಡುಗೈ ದಾನಿ ಆಗಿದ್ದರು ಎಂದು ಗಾಂಧಿ ವಿಚಾರ ವೇದಿಕೆ ದಕ್ಷಿಣ ಕನ್ನಡ ಇದರ ಸಂಚಾಲಕ ಅರವಿಂದ ಚೊಕ್ಕಾಡಿ ಹೇಳಿದ್ದಾರೆ.

ರಾಷ್ಟ್ರೀಯ ಸಾಂಸ್ಕೃತಿಕ ಜಾಥಾ ಕರ್ನಾಟಕ ಇದರ ಅಂಗವಾಗಿ ಶನಿವಾರ ಟಾಗೋರ್ ಪಾರ್ಕ್ನಲ್ಲಿ ಮಹಾತ್ಮ ಗಾಂಧಿ ಶಾಂತಿಪ್ರತಿಷ್ಠಾನದ ಆಶ್ರಯದಲ್ಲಿ ನಡೆದ ದೇಶಭಕ್ತ ಕಾರ್ನಾಡು ಸದಾಶಿವ ರಾವ್ ನೆನಪು ಮತ್ತು ಸಂವಾದ ಕಾರ್ಯಕ್ರಮದಲ್ಲಿ ಅವರು ವಿಶೇಷ ಉಪನ್ಯಾಸ ನೀಡಿದರು.

ಕಾರ್ನಾಡು ಅವರ ತ್ಯಾಗದ ಧೋರಣೆಯನ್ನು ನಾವು ಅರ್ಥ ಮಾಡಿಕೊಳ್ಳಬೇಕಾಗಿದೆ. ಕಾರ್ನಾಡು ಮತ್ತು ಕುದ್ಮುಲ್ ಒಂದೇ ವ್ಯಕ್ತಿತ್ವದವರು. ಇಬ್ಬರೂ ಮಹಾ ದಾನಿಗಳು. ಯಾರಿಗಾದರೂ ಏನನ್ನಾದರೂ ಕೊಡುವಾಗ ಕಾರ್ನಾಡು ಯಾವುದೇ ಷರತ್ತು ಹಾಕಲಿಲ್ಲ. ಈ ಕಾರಣದಿಂದಾಗಿ ಅವರ ಕೊಟ್ಟ ದಾನಗಳು ಇವತ್ತು ನಮ್ಮ ಕಣ್ಣಿಗೆ ಕಾಣಿಸುತ್ತಿಲ್ಲ. ಕುದ್ಮುಲ್ ರಂಗರಾವ್ ಎಲ್ಲವನ್ನು ವ್ಯವಸ್ಥಿತ ಯೋಜನೆಯೊಂದಿಗೆ ನೀಡಿದ್ದರು ಎಂದು ಬಣ್ಣಿಸಿದರು.

ಕಾರ್ನಾಡು ಅಸ್ತಿತ್ವವನ್ನು ಆನೇಕ ನೆಲೆಗಳಲ್ಲಿ ಗುರುತಿಸಬೇಕಾಗಿದೆ. ಗಾಂಧೀಜಿ ದ. ಆಫ್ರಿಕಾದಿಂದ ಬಂದ ತಕ್ಷಣ ಭಾರತಕ್ಕೆ ನಿಮ್ಮ ಸೇವೆಯ ಅಗತ್ಯವಿದೆ. ನಿಮ್ಮ ಸತ್ಯಾಗ್ರಹದ ಹಿಂದೆ ಆಧ್ಯಾತ್ಮಿಕ ಶಕ್ತಿ ಇದೆ. ಈ ಕಾರಣದಿಂದಾಗಿ ನಿಮ್ಮ ಹೋರಾಟ ಅರ್ಥಪೂರ್ಣವಾಗುತ್ತದೆ ಎಂದು ಮೊದಲು ಪತ್ರ ಬರೆದವರು ಕಾರ್ನಾಡು. ಮಂಗಳೂರು ಭಾಗಕ್ಕೆ ಕಾಂಗ್ರೆಸ್ನ್ನು ಮೊದಲು ತಂದವರು, ದಕ್ಕಿಣ ಭಾರತದಿಂದ ಮೊದಲ ಬಾರಿ ಸತ್ಯಾಗ್ರಹದ ನಿರ್ಣಯಕ್ಕೆ ಸಹಿ ಹಾಕಿದವರು ಕಾರ್ನಾಡು ಸದಾಶಿವ ರಾಯರು ಎಂದರು.

ಮಹಾತ್ಮ ಗಾಂಧಿ ಶಾಂತಿ ಪ್ರತಿಷ್ಠಾನದ ಅಧ್ಯಕ್ಷ ಡಾ.ಎ.ಸದಾನಂದ ಶೆಟ್ಟಿ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.

ಸಾಂಸ್ಕೃತಿಕ ಜಾಥಾಧ ರಾಷ್ಟ್ರೀಯ ಮುಂದಾಳು ಹಿರಿಯ ಚಿಂತಕ ಪ್ರಸನ್ನ ಅವರು ಕಾರ್ನಾಡು ಸದಾಶಿವ ರಾವ್ ಭಾವಚಿತ್ರಕ್ಕೆ ಹಾರಾರ್ಪಣೆ ಮಾಡುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು.

ವಿಜಯಪುರದ ಅಕ್ಕಮಾದೇವಿ ಮಹಿಳಾ ವಿವಿ ವಿಶ್ರಾಂತ ಕುಲಪತಿ ಪ್ರೊ.ಸಬೀಹಾ ಭೂಮಿಗೌಡ, ಪ್ರತಿಷ್ಠಾನದ ಉಪಾಧ್ಯಕ್ಷ ಹಾಜಿ ಇಬ್ರಾಹೀಂ ಕೋಡಿಜಾಲ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಮಹಾತ್ಮ ಗಾಂಧಿ ಶಾಂತಿ ಪ್ರತಿಷ್ಠಾನದ ಕಾರ್ಯದರ್ಶಿ ಡಾ.ಇಸ್ಮಾಯೀಲ್ ಸ್ವಾಗತಿಸಿ, ವಂದಿಸಿದರು. ಕಲ್ಲೂರು ನಾಗೇಶ ಕಾರ್ಯಕ್ರಮ ನಿರೂಪಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News