×
Ad

ಮಂಗಳೂರಿನಲ್ಲಿ ಕರಾವಳಿ ಉತ್ಸವಕ್ಕೆ ಅದ್ದೂರಿ ಚಾಲನೆ

Update: 2025-12-20 23:13 IST

ಮಂಗಳೂರು: ಮಂಗಳೂರಿನಲ್ಲಿ ಒಂದು ತಿಂಗಳು ನಡೆಯಲಿರುವ ಕರಾವಳಿ ಉತ್ಸವಕ್ಕೆ ರಾಜ್ಯ ಸರಕಾರ 2 ಕೋಟಿ ರೂ. ಅನುದಾನ ಮಂಜೂರು ಮಾಡಿದೆ ಎಂದು ದ.ಕ. ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂ ರಾವ್ ಹೇಳಿದ್ದಾರೆ.

ನಗರದ ಕರಾವಳಿ ಉತ್ಸವ ಮೈದಾನದಲ್ಲಿ ಶನಿವಾರ ಸಂಜೆ ದಕ್ಷಿಣ ಕನ್ನಡ ಜಿಲ್ಲಾಡಳಿತ , ಸ್ಥಳೀಯ ಸಂಘ ಸಂಸ್ಥೆ ಗಳ ಸಹಯೋಗದೊಂದಿಗೆ, ಸಾಂಸ್ಕೃತಿಕ, ಕ್ರೀಡಾ ಮತ್ತು ಮನರಂಜನಾ ಚಟುವಟಿಕೆಗಳ ಸಮಾಗವಾದ ‘ಕರಾವಳಿ ಉತ್ಸವಕ್ಕೆ 2025-26ಕ್ಕೆ ಚಾಲನೆ ನೀಡಿ ಮಾತನಾಡಿದರು.

ಪ್ರಥಮ ಬಾರಿಗೆ ರಾಜ್ಯ ಸರಕಾರ ಕರಾವಳಿ ಉತ್ಸಾವಕ್ಕೆ ದೊಡ್ಡ ಪ್ರಮಾಣದ ಅನುದಾನ ಕೊಟ್ಟಿದೆ. ಮುಖ್ಯ ಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯ ಮಂತ್ರಿ ಡಿ.ಕೆ. ಶಿವಕುಮಾರ್ ಕರಾವಳಿ ಉತ್ಸವದ ಸಮಾರೋಪಕ್ಕೆ ಆಹ್ವಾನಿಸಲಾಗುವುದು ಎಂದು ಗುಂಡೂ ರಾವ್ ಹೇಳಿದರು.

ಕರಾವಳಿ ಉತ್ಸಾವದಂತಹ ವೈವಿಧ್ಯಮಯವಾದ ಕಾರ್ಯಕ್ರಮ ನಡೆದಾಗ ಜನರಲ್ಲಿ ಸಹೋದರತೆ , ಪ್ರೀತಿ, ವಿಶ್ವಾಸ ಬೆಳೆಯುತ್ತದೆ ಎಂದು ನುಡಿದರು.

ಕರಾವಳಿ ಭಾಗದ ಸಂಸ್ಕೃತಿ, ಕ್ರೀಡೆ ಇದಕ್ಕೆಲ್ಲ ಭವ್ಯವಾದ ಇತಿಹಾಸ ಹಿನ್ನೆಲೆ ಇದೆ. ಜನರು ಇದರಲ್ಲಿ ಆಸಕ್ತಿಯಿಂದ ಉತ್ಸಾಹದಿಂದ ಭಾಗವಹಿಸುವ ಹಿನ್ನೆಲೆಯಲ್ಲಿ ಇಲ್ಲಿ ಯಾವುದೇ ಉತ್ಸವಗಳು ಯಶಸ್ವಿಯಾಗಿ ನಡೆಯುತ್ತಿದೆ ಎಂದರು.

ಕರಾವಳಿ ಉತ್ಸವದಿಂದಾಗಿ ಒಂದು ತಿಂಗಳುಗಳ ಕಾಲ ಮಂಗಳೂರು ಮತ್ತು ಸುತ್ತಮತ್ತಲಿನ ವಾತಾವರಣದಲ್ಲಿ ಹಬ್ಬದ ವಾತಾವರಣ ಇರುತ್ತದೆ. ಕರಾವಳಿ ಜಿಲ್ಲೆಗಳು ಕರ್ನಾಟಕದ ಕಲೆ , ಭಾಷೆ , ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಶ್ರಮಿಸುತ್ತಿದೆ. ಇಲ್ಲಿಯ ಜನರು ಪ್ರತಿಭಾವಂತರು ಕ್ರೀಡೆ ಸೇರಿದಂತೆ ಎಲ್ಲಾ ಕ್ಷೇತ್ರಗಳಲ್ಲೂ ಮಿಂಚುತ್ತಾರೆ. ರಾಜ್ಯಕ್ಕೆ ದೇಶಕ್ಕೆ ಮೆರಗು ನೀಡುತ್ತಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಮಂಗಳೂರು ದಕ್ಷಿಣ ಕ್ಷೇತ್ರದ ಶಾಸಕ ವೇದವ್ಯಾಸ ಕಾಮತ್ ಅಧ್ಯಕ್ಷತೆ ವಹಿಸಿದ್ದರು.

ವಿಧಾನ ಪರಿಷತ್ ಸದಸ್ಯರಾದ ಡಾ.ಮಂಜುನಾಥ ಭಂಡಾರಿ ಮತ್ತು ಐವನ್ ಡಿ ಸೋಜ,ಮೆಸ್ಕಾಂ ಅಧ್ಯಕ್ಷ ಹರೀಶ್ ಕುಮಾರ್, ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಂಎ ಗಫೂರ್, ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷೆ ಮಮತಾ ಗಟ್ಟಿ, ಕರ್ನಾಟಕ ಪರಿಸರ ಪವ್ರವಾಸೋದ್ಯಮ ಮಂಡಳಿ ಅಧ್ಯಕ್ಷೆ ಶಾಲೆಟ್ ಲವಿನಾ ಪಿಂಟೊ,ಕರ್ನಾಟಕ ರಾಜ್ಯ ಬೀಜ ಮತ್ತು ಸಾವಯವ ಪ್ರಮಾಣ ಸಂಸ್ಥೆಯ ಅಧ್ಯಕ್ಷೆ ಲಾವಣ್ಯ ಬಲ್ಲಾಳ್, ಅರೆ ಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಸದಾನಂದ ಮಾವಜಿ, ಗಾಣಿಗ ಅಭಿವೃದ್ಧಿ ನಿಗಮದ ಅಧ್ಯಕ್ಷ ವಿಶ್ವಾಸ್ ಕುಮಾರ್ ದಾಸ್, ರಾಜ್ಯ ಕಾರ್ಮಿಕ ಕನಿಷ್ಠ ವೇತನಾ ಸಲಹಾ ಮಂಡಳಿ ಅಧ್ಯಕ್ಷ ಟಿಎಂ ಶಹೀದ್, ಮಂಗಳೂರು ಪೊಲೀಸ್ ಆಯಕ್ತ ಸುಧೀರ್ ಕುಮಾರ್ ರೆಡ್ಡಿ , ದ.ಕ. ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ನಾರ್ವಡೆ ವಿನಾಯಕ ಕಾರ್ಬಾರಿ , ಉಪ ಅರಣ್ಯ ಸಂರಕ್ಷಣಾಧಿಕಾರಿ ಆ್ಯಂಟನಿ ಮರಿಯಪ್ಪ , ಜಿಲ್ಲಾಧಿಕಾರಿ ದರ್ಶನ್ ಎಚ್.ವಿ.ಪ್ರಾಸ್ತಾವಿಕ ವಾಗಿ ಮಾತನಾಡಿದರು.

ಅಪರ ಜಿಲ್ಲಾಧಿಕಾರಿ ರಾಜು ಕೆ ಸ್ವಾಗತಿಸಿ, ಮನಪಾ ಅಯುಕ್ತ ರವಿಚಂದ್ರ ನಾಯಕ್ ವಂದಿಸಿದರು.

ಕರಾವಳಿ ಉತ್ಸವದಲ್ಲಿ ..

ನಯಾಗರ ಜಲಪಾತ , ಅರಣ್ಯ ಇಲಾಖೆಯ ಕೃತಕ ಕಾಡು , ವಿವಿಧ ಇಲಾಖೆಗಳ ಮಳಿಗೆಗಳು, ಪ್ರದರ್ಶನಗಳು ಕರಾವಳಿ ಉತ್ಸವದಲ್ಲಿ ಗಮನ ಸೆಳೆಯುತ್ತಿದೆ.


Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News