×
Ad

ʼಭೂತಾರಾಧನೆʼ: ಮಾಯದ ನಡೆ ಜೋಗದ ನುಡಿ ಕೃತಿ ಬಿಡುಗಡೆ

Update: 2025-12-20 23:05 IST

ಮಂಗಳೂರು: ಡಿಜಿಟಲ್ ಯುಗದಲ್ಲಿ ದೈವಾರಾಧನೆ ಮತ್ತು ಭೂತಾರಾಧನೆಯ ಸಂಶೋಧನೆಯಲ್ಲಿ ದಾಖಲೀಕರಣವು ಹೆಚ್ಚು ಮಹತ್ವ ಪಡೆದುಕೊಂಡಿದೆ ಎಂದು ವಿಶ್ರಾಂತ ಕುಲಪತಿ ಪ್ರೊ.ಬಿ.ಎ ವಿವೇಕ ರೈ ಅಭಿಪ್ರಾಯಪಟ್ಟರು.

ಕರಾವಳಿ ಲೇಖಕಿಯರ ವಾಚಕಿಯರ ಸಂಘ, ಮಂಗಳೂರು ವಿವಿ ಕನ್ನಡ ಅಧ್ಯಯನ ಸಂಸ್ಥೆಯ ಗಿಳಿವಿಂಡು, ರಂಗಸಂಗಾತಿ ಸಾಂಸ್ಕೃತಿಕ ಪ್ರತಿಷ್ಠಾನ ಮತ್ತು ಸಂತ ಅಲೋಶಿಯಸ್ ಕಾಲೇಜಿನ ಕನ್ನಡ ವಿಭಾಗವು ಶನಿವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಜಾನಪದ ವಿದ್ವಾಂಸ ಪ್ರೊ.ಕೆ.ಚಿನ್ನಪ್ಪ ಗೌಡ ಅವರ ಱಭೂತಾರಾಧನೆ: ಮಾಯದ ನಡೆ ಜೋಗದ ನುಡಿೞ ಕೃತಿಯನ್ನು ಬಿಡುಗಡೆಗೊಳಿಸಿ ಅವರು ಮಾತನಾಡಿದರು.

ಡಿಜಿಟಲ್ ಮಾಧ್ಯಮಗಳು ಮುನ್ನೆಲೆಗೆ ಬಂದ ಬಳಿಕ ದೈವಗಳ ಬಗ್ಗೆಯೂ ಅಪೂರ್ಣ ಮಾಹಿತಿಗಳನ್ನು ಹಂಚಿಕೊಳ್ಳು ವವರು ಇದ್ದಾರೆ. ಅವರಲ್ಲಿ ಪ್ರತಿಯೊಬ್ಬರೂ ಇದೇ ಅಂತಿಮ ಎಂದು ಹೇಳುತ್ತಾರೆ. ದೈವ ಹುಟ್ಟಿದ್ದು ಹೀಗೆ, ಅದರ ಸಂಚಾರ ಹಾಗೆ ಎಂದೆಲ್ಲಾ ವಾದಿಸುತ್ತಾರೆ. ಯುವ ಸಂಶೋಧಕರು ಇಂತಹ ಅಪೂರ್ಣ ಮಾಹಿತಿಗಳನ್ನು ನಂಬ ಬಾರದು ವಿವೇಕ ರೈ ಸಲಹೆ ನೀಡಿದರು.

ಸಂಶೋಧನೆ ಹೇಳಿದಷ್ಟು ಸುಲಭದ ಕೆಲಸವಲ್ಲ. ಅದಕ್ಕೆ ಪೂರ್ವಸಿದ್ಧತೆ ಅಗತ್ಯವಿದೆ. ಪ್ರತೀ ಹಂತದಲ್ಲೂ ಎಚ್ಚರ ದಿಂದ ಇರಬೇಕು. ದೈವಾರಾಧನೆಯ ವಿಷಯದಲ್ಲಿ ಈ ಪ್ರಜ್ಞೆ ಅತ್ಯಂತ ಸೂಕ್ಷ್ಮವಾಗಿರಬೇಕು ಎಂದ ವಿವೇಕ ರೈ ಭೂತಾರಾಧನೆ ಮತ್ತು ದೈವಾರಾಧನೆ ಪದಗಳ ಬಗ್ಗೆ ಚರ್ಚೆಗಳು ನಡೆಯುತ್ತವೆ. ಸಂಶೋಧನೆಯ ಮೂಲಕ ಅವುಗಳನ್ನು ದಾಖಲಿಸಿಕೊಳ್ಳುವಾಗ ಅನುಕೂಲಕ್ಕೆ ತಕ್ಕಂತೆ ಈ ಪದಗಳನ್ನು ಬಳಸಿಕೊಳ್ಳಬಹುದಾಗಿದೆ ಎಂದರು.

ವಿಮರ್ಶಕ ರಾಜಶೇಖರ್ ಹಳೆಮನೆ ಕೃತಿಯನ್ನು ಅವಲೋಕಿಸಿದರು. ಕಾಪುಮಜಲಿನ ದೈವನರ್ತಕ ಶೇಖರ ಪರವ ಅವರನ್ನು ಗೌರವಿಸಲಾಯಿತು. ಕ್ರಿಯೇಟಿವ್ ಶಿಕ್ಷಣ ಪ್ರತಿಷ್ಠಾನದ ಸಹ ಸಂಸ್ಥಾಪಕ ಅಶ್ವತ್ಥ್ ಎಸ್.ಎಲ್ ಅಧ್ಯಕ್ಷತೆ ವಹಿಸಿದ್ದರು. ಮಂಗಳೂರು ವಿವಿ ಎಸ್‌ವಿಪಿ ಕನ್ನಡ ಅಧ್ಯಯನ ಸಂಸ್ಥೆಯ ಅಧ್ಯಕ್ಷ ನಾಗಪ್ಪಗೌಡ ಆರ್. ಪಾಲ್ಗೊಂಡಿದ್ದರು.

ಪ್ರಿಯಾಂಕ ಸ್ವಾಗತಿಸಿದರು. ಮಹಾಲಿಂಗ ಭಟ್ ವಂದಿಸಿದರು. ದಿನೇಶ್ ನಾಯಕ್ ಕಾರ್ಯಕ್ರಮ ನಿರೂಪಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News