×
Ad

ಸಮುದಾಯದ ಆಧಾರದ ಮೇಲೆ ಪ್ರಕರಣ ದಾಖಲಿಸುತ್ತಿಲ್ಲ: ಪೊಲೀಸ್ ಕಮಿಷನರ್ ಸ್ಪಷ್ಟನೆ

Update: 2025-12-20 22:28 IST

ಮಂಗಳೂರು, ಡಿ.20: ಅಭಿವ್ಯಕ್ತಿ ಸ್ವಾತಂತ್ರ್ಯ ನೆಪದಲ್ಲಿ ಸತ್ಯಗಳನ್ನು ಮರೆಮಾಚಿಸಬೇಡಿ. ಪ್ರಚೋದನಾಕಾರಿ ಭಾಷಣ ಮೂಲಕ ಮುಗ್ಧ ಜನರಲ್ಲಿ ಗೊಂದಲ ಸೃಷ್ಟಿಸಬೇಡಿ. ನಾವು ಯಾವುದೇ ಘಟನೆಯಲ್ಲೂ ಸಮುದಾಯಗಳ ಆಧಾರದ ಮೇಲೆ ಪ್ರಕರಣಗಳನ್ನು ದಾಖಲಿಸುವುದಿಲ್ಲ. ವಾಸ್ತವಾಂಶಗಳ ಆಧಾರದ ಮೇಲೆ ಕಾರ್ಯನಿರ್ವಹಿಸುತ್ತೇವೆ ಎಂದು ಪೊಲೀಸ್ ಆಯುಕ್ತ ಸುಧೀರ್ ಕುಮಾರ್ ರೆಡ್ಡಿ ಸ್ಪಷ್ಟಪಡಿಸಿದ್ದಾರೆ.

ಕೊಳತ್ತಮಜಲು ಅಬ್ದುಲ್ ರಹ್ಮಾನ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ದ.ಕ.ಜಿಲ್ಲಾ ಎಸ್‌ಡಿಪಿಐ ನಗರದ ಕ್ಲಾಕ್ ಟವರ್ ಬಳಿ ಶುಕ್ರವಾರ ನಡೆಸಿದ ಪ್ರತಿಭಟನೆಯ ವೇಳೆ ಭಾಷಣಕಾರರು ಪೊಲೀಸರು ಪ್ರಕರಣ ದಾಖಲಿಸುವಾಗ ತಾರತಮ್ಯ ಎಸಗುತ್ತಿದ್ದಾರೆ ಎಂದು ಆರೋಪಿಸಿದ್ದರು. ಅಲ್ಲದೆ ಸಂಘ ಪರಿವಾರ ಮತ್ತು ಎಸ್‌ಡಿಪಿಐ ಕಾರ್ಯಕರ್ತರ ಬಂಧನ ವಿಚಾರದಲ್ಲಿ ಆರ್‌ಟಿಐ ದಾಖಲೆಗಳನ್ನು ಪಡೆದು ನ್ಯಾಯಾಲಯದಲ್ಲಿ ಪ್ರಶ್ನಿಸುವುದಾಗಿ ತಿಳಿಸಿದ್ದರು.

ಆ ಹಿನ್ನಲೆಯಲ್ಲಿ ಸ್ಪಷ್ಟನೆ ನೀಡಿದ ಪೊಲೀಸ್ ಆಯುಕ್ತ ಸುಧೀರ್ ಕುಮಾರ್ "ನೀವು ಆರ್‌ಟಿಐನಲ್ಲಿ ಕೇಳುವ ಅಗತ್ಯವಿಲ್ಲ, ನಾನೇ ಮಾಹಿತಿ ಕೊಡುವೆ. ನೀವು 30 ದಿನಗಳನ್ನು ಏಕೆ ವ್ಯರ್ಥ ಮಾಡುತ್ತೀರಿ" ಎಂದಿದ್ದಾರೆ.

ಶಾಂತಿ ಭಂಗ ಅಥವಾ ಯಾವುದೇ ಪ್ರಕರಣದಲ್ಲಿ ಭಾಗಿಯಾದ ಆರೋಪಿಗಳನ್ನು ಬಂಧಿಸುವ ಹಕ್ಕು ಪೊಲೀಸರಿಗಿದೆ. ಕಳೆದ 6 ತಿಂಗಳಲ್ಲಿ ಶಾರದೋತ್ಸವ ಮೆರವಣಿಗೆಗೆ ಮೊದಲು ನಾವು ಹಿಂದುತ್ವ ಸಂಘಟನೆಯವರನ್ನೂ ಬಂಧಿಸಿ ದ್ದೇವೆ. ಅದೇ ರೀತಿ ನಾವು ಈ ಪ್ರತಿಭಟನೆಯ ಮೊದಲು ಎಸ್‌ಡಿಪಿಐ ಅವರನ್ನೂ ಬಂಧಿಸಿದ್ದೇವೆ ಎಂದರು. ಯಾವುದೇ ಅಪರಾಧ ಕೃತ್ಯದಲ್ಲಿ ಭಾಗಿಯಾದರೆ ಪ್ರಕರಣವೂ ಹೆಚ್ಚಿರುತ್ತದೆ, ಪೊಲೀಸರ ಕ್ರಮವೂ ಅದೇ ರೀತಿಯಾಗಿರುತ್ತದೆ ಎಂದು ಪ್ರತಿಕ್ರಿಯಿಸಿದ್ದಾರೆ.

ವಿವರ ನೀಡಿದ ಕಮಿಷನರ್: ಅಪರಾಧ ಪ್ರಕರಣ ಹಿನ್ನಲೆಯಲ್ಲಿ 521 ಹಿಂದೂ ಮತ್ತು 351 ಮುಸ್ಲಿಮರು ಹಾಗೂ ಇತರ ಸಮುದಾಯದ 23 ಸಹಿತ 895 ಮಂದಿಯಿಂದ ಜಾಮೀನು ಮುಚ್ಚಳಿಕೆ ಬರೆಸಿಕೊಳ್ಳಲಾಗಿತ್ತು. ಬಾಂಡ್ ಉಲ್ಲಂಘನೆ ಪ್ರಕರಣದಲ್ಲಿ 39 ಹಿಂದೂಗಳು ಜಾಮೀನು ಇರಿಸಿದ್ದ 7,40,000 ರೂ. ಮತ್ತು 13 ಮುಸ್ಲಿಮರು ಇರಿಸಿದ್ದ 2,40,000 ಹಾಗೂ ಇತರ ಇಬ್ಬರ ಇರಿಸಿದ್ದ 35,000 ರೂ. ಮೊತ್ತವನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ. ಬಜರಂಗದಳ, ವಿಎಚ್‌ಪಿ ಸಂಘಟನೆಯ ಬಜಪೆ ಶಾರದೋತ್ಸವ ಮೆರವಣಿಗೆಗೆ ಇಬ್ಬರು ವ್ಯಕ್ತಿಗಳ ಜಾಮೀನಿನ ಮೇರೆಗೆ 2 ಲಕ್ಷ ರೂ. ಬಾಂಡ್ ಪಡೆದುಕೊಳ್ಳಲಾಗಿದೆ. ಎಸ್‌ಡಿಪಿಐ ಪ್ರತಿಭಟನೆ ಸಂದರ್ಭವೂ ಇಬ್ಬರು ವ್ಯಕ್ತಿಗಳ ಜಾಮೀನಿನ ಮೇರೆಗೆ 2 ಲಕ್ಷ ರೂ. ಬಾಂಡ್ ಪಡೆದುಕೊಳ್ಳಲಾಗಿದೆ ಎಂದು ಪೊಲೀಸ್ ಆಯುಕ್ತರು ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News