ಕರ್ನಾಟಕದ ಬರ ನಿರ್ವಹಿಸುವಲ್ಲಿ ಸರಕಾರದ ನಿರ್ಲಕ್ಷ್ಯ ಆರೋಪ: ಆಮ್‌ಆದ್ಮಿ ಪಾರ್ಟಿ ಪ್ರತಿಭಟನೆ
ಮಂಗಳೂರು: ಕರ್ನಾಟಕದ ಬರ ನಿರ್ವಹಿಸುವಲ್ಲಿ ಸರಕಾರದ ನಿರ್ಲಕ್ಷ್ಯ ಖಂಡಿಸಿ ಆಮ್‌ಆದ್ಮಿ ಪಾರ್ಟಿ- ಕರ್ನಾಟಕ ಜಿಲ್ಲಾ ಸಮಿತಿಯ ವತಿಯಿಂದ ನಗರದ ಕ್ಲಾಕ್‌ಟವರ್ ಬಳಿ ಪ್ರತಿಭಟನೆ ನಡೆಯಿತು.
ಪ್ರತಿಭಟನೆಯ ನೇತೃತ್ವದ ವಹಿಸಿ ಮಾತನಾಡಿದ ದ.ಕ.ಜಿಲ್ಲಾ ಸಮಿತಿ ಅಧ್ಯಕ್ಷ ಡಾ.ವಿಶುಕುಮಾರ್ ಅವರು ಕರ್ನಾಟಕ ಭೀಕರ ಬರಗಾಲವನ್ನು ಎದುರಿಸುತ್ತಿದೆ. ರಾಜ್ಯದ ರೈತರು ಮಳೆ , ಬೆಳೆ ಇಲ್ಲದೆ ಹಾಗೂ ಯಾವ ಆದಾಯವೂ ಇಲ್ಲದೆ ಕುಟುಂಬ ನಿರ್ವಹಿಸಲು ಪರದಾಡುವಂತಾಗಿದೆ. ರಾಜ್ಯದ ಬರಪೀಡಿತ ಜಿಲ್ಲೆಗಳಿಗೆ ಬರಪರಿಹಾರ ಒದಗಿಸುವಲ್ಲಿ ಕೇಂದ್ರ ಹಾಗೂ ರಾಜ್ಯ ಸರಕಾರಗಳ ನಿರ್ಲಕ್ಷ್ಯ ಎದ್ದು ಕಾಣುತ್ತಿದೆ ಎಂದು ಹೇಳಿದರು.
ಬರಪೀಡಿತ ಪ್ರದೇಶಗಳ ಸರಿಯಾದ ವೈಜ್ಞಾನಿಕ ಸಮೀಕ್ಷೆ ಮಾಡಬೇಕು, ಬೆಳೆ ಹಾನಿಗೆ ಬೆಳೆ ವಿಮೆಯ ತುರ್ತು ಪಾವತಿ ಮಾಡಬೇಕು, ಬರಪೀಡಿತ ಪ್ರದೇಶದ ರೈತರಿಗೆ ಎಕ್ರೆಗೆ 25 ಸಾವಿರ ರೂ. ಪರಿಹಾರ ಒದಗಿಸಬೇಕು, ಪಶು ಸಂಗೋಪನೆಯಲ್ಲಿ ತೊಡಗಿರುವ ಹಾಗೂ ಜಾನುವಾರು ಹೊಂದಿರುವ ರೈತರಿಗೆ ಪ್ರತಿ ಜಾನುವಾರಿಗೆ 5 ಸಾವಿರ ರೂ. ಪರಿಹಾರ ಒದಗಿಸಬೇಕು, ಬೆಲೆ ಏರಿಕೆ ನೀಗಿಸಿ ಕುಟುಂಬ ನಿರ್ವಹಿಸಲು ಪ್ರತಿ ಕುಟುಂಬಕ್ಕೆ ಉಚಿತ ರೇಷನ್ ಒದಗಿಸ ಬೇಕು, ಮನರೇಗಾ ಅಥವಾ ಇನ್ನಿತರ ರ್ಕಾಕ್ರಮಗಳನ್ನು ಹಮ್ಮಿಕೊಂಡು ಗ್ರಾಮೀಣ ಪ್ರದೇಶದಲ್ಲಿ ಆದಾಯ ವ್ಯವಸ್ಥೆ ಕಲ್ಪಿಸಬೇಕು, ಸಾಂಕ್ರಾಮಿಕ ರೋಗಗಳು ಹರಡದಂತೆ ನೋಡಿಕೊಂಡು ಸರಕಾರಿ ಆಸ್ಪತ್ರೆಗಳ ವ್ಯವಸ್ಥೆ ಸುಧಾರಿಸುವಂತೆ ಆಗ್ರಹಿಸಿ ಕೇಂದ್ರ ಸರಕಾರಕ್ಕೆ ಮನವಿ ಸಲ್ಲಿಸಲಾಯಿತು.
ಪ್ರಧಾನ ಕಾರ್ಯದರ್ಶಿ ಖಲಂದರ್ ಎಲಿಮಲೆ , ಸಂಘಟನಾ ಕಾರ್ಯದರ್ಶಿಗಳಾದ ಶಾನನ್ ಪಿಂಟೊ ಮತ್ತು ಜನಾರ್ದನ ಬಂಗೇರ , ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ವಿದ್ಯಾ ರಾಕೇಶ್ , ಜಿಲ್ಲಾ ಕಾರ್ಯದರ್ಶಿಗಳಾದ ಕಬೀರ ಕಾಟಿಪಳ್ಳ , ಸೀಮಾ ಮಡಿವಾಳ , ಗ್ಲಾವಿನ್ ಡಿ’ ,ಸೋಜ , ಪ್ಲೋರಿನ್‌ಗೋವಸ್, ಥಾಮಸ್ ಮಥಿಯಾಸ್, ಜಿಲ್ಲಾ ಸಾಮಾಜಿಕ ಮಾಧ್ಯಮ ಉಸ್ತುವಾರಿ ದೇವಿಪ್ರಸಾದ್ ಬಾಜಿಲಕೇರಿ , ರಾಜ್ಯ ಹಿಂದುಳಿದ ವರ್ಗಗಳ ಘಟಕದ ಅಧ್ಯಕ್ಷ ನವೀನ್ ಕುಮಾರ್ ಪೂಜಾರಿ, ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ರಾಜ್ಯ ಉಪಾಧ್ಯಕ್ಷರು ವಿವೇಕಾನಂದ ಸಾಲಿನ್ಸ್ ಮತ್ತು ಕಾರ್ಯಕರ್ತರು ಭಾಗವಹಿಸಿದ್ದರು. ಬಳಿಕ ಜಿಲ್ಲಾಧಿಕಾರಿಗಳ ಕಚೇರಿಗೆ ತೆರಳಿ ಅಪರ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.