×
Ad

ಕುಡುಪು ದೇವಸ್ಥಾನದ ಜಾತ್ರೆಯಲ್ಲಿ ಮುಸ್ಲಿಂ ವ್ಯಾಪಾರಿಗಳಿಗೆ ಅವಕಾಶ ನಿರಾಕರಣೆ: ಸೂಕ್ತ ಕ್ರಮಕ್ಕೆ ಆಗ್ರಹಿಸಿ ದ.ಕ.ಜಿಲ್ಲಾಡಳಿತಕ್ಕೆ ಮನವಿ

Update: 2023-12-07 17:48 IST

ಮಂಗಳೂರು, ಡಿ.7: ಕುಡುಪು ಶ್ರೀ ಅನಂತ ಪದ್ಮನಾಭ ದೇವಸ್ಥಾನದ ಷಷ್ಟಿ ಮಹೋತ್ಸವದ ಜಾತ್ರೆ ವ್ಯಾಪಾರದಲ್ಲಿ ಮುಸ್ಲಿಂ ವ್ಯಾಪಾರಿಗಳಿಗೆ ಅವಕಾಶ ನಿರಾಕರಿಸಲಾಗಿದೆ ಎಂಬ ಆರೋಪ ಕೇಳಿ ಬಂದಿದೆ. ಈ ಮಧ್ಯೆ ವ್ಯಾಪಾರಿಗಳು ಡಿವೈಎಫ್‌ಐ ನೇತೃತ್ವದಲ್ಲಿ ದ.ಕ.ಜಿಲ್ಲಾಡಳಿಕ್ಕೆ ಗುರುವಾರ ದೂರು ನೀಡಿದ್ದು, ಸೂಕ್ತ ಕ್ರಮಕ್ಕೆ ಆಗ್ರಹಿಸಿದ್ದಾರೆ.

ಡಿ.14ರಿಂದ 19ರವರೆಗೆ ನಡೆಯುವ ಜಾತ್ರೆಯ ಸಂತೆ ವ್ಯಾಪಾರದ ಗುತ್ತಿಗೆಯನ್ನು ಸಂಸ್ಥೆಯೊಂದಕ್ಕೆ ವಹಿಸಿಕೊಡಲಾಗಿದೆ. ಗುರುವಾರ ಜಾಗ ಹಂಚಿಕೆಯ ಬಗ್ಗೆ ಮಾಹಿತಿ ಪಡೆದ ಸುಮಾರು 50ಕ್ಕೂ ಅಧಿಕಾರಿಗಳು ಕುಡುಪು ದೇವಸ್ಥಾನದ ಬಳಿ ಹೋದಾಗ ಗುತ್ತಿಗೆ ವಹಿಸಿಕೊಂಡವರು ‘ನೀವಿಲ್ಲಿ ವ್ಯಾಪಾರ ಮಾಡಲು ವಿರೋಧವಿದೆ. ನಿಮಗೆ ರಕ್ಷಣೆ ನೀಡಲು ನಮ್ಮಿಂದ ಸಾಧ್ಯವಿಲ್ಲ’ ಎನ್ನುತ್ತಾ ವಾಪಸ್ ಕಳುಹಿಸಿದ್ದಾರೆ. ಇದು ಅನ್ಯಾಯ ಮತ್ತು ಧಾರ್ಮಿಕ ತಾರತಮ್ಯವಾಗಿದೆ ಎಂದು ದ.ಕ. ಜಿಲ್ಲಾ ಬೀದಿಬದಿ ವ್ಯಾಪಾರಸ್ಥರ ಶ್ರೇಯೋಭಿವೃದ್ಧಿ ಸಂಘದ ಗೌರವಾಧ್ಯಕ್ಷ ಮತ್ತು ಜಾತ್ರಾ ವ್ಯಾಪಾರಸ್ಥರ ಸಮನ್ವಯ ಸಮಿತಿಯ ಸಂಚಾಲಕ ಬಿ.ಕೆ. ಇಮ್ತಿಯಾಝ್ ಆರೋಪಿಸಿದ್ದಾರೆ.

ರಾಜ್ಯ ಸರಕಾರದ ಧಾರ್ಮಿಕ ದತ್ತಿ ಇಲಾಖೆಗೆ ಸೇರಿದ ಈ ದೇವಸ್ಥಾನದ ಪ್ರಾಂಗಣದ ಹೊರಗಡೆ ನಡೆಯುವ ಸಂತೆ ವ್ಯಾಪಾರದಲ್ಲಿ ಧಾರ್ಮಿಕ ತಾರತಮ್ಯ ನಡೆಯುತ್ತಿರುವುದು ಖಂಡನೀಯ. ಜಾತ್ರೆಗಳನ್ನೇ ನಂಬಿ ಬದುಕುವ ಬಡ ಸಂತೆ ವ್ಯಾಪಾರಿಗಳ ಬದುಕುವ ಹಕ್ಕನ್ನು ರಕ್ಷಿಸಲು ಜಿಲ್ಲಾಡಳಿತ ಮತ್ತೆ ವಿಫಲವಾಗಿದೆ. ಈ ಹಿಂದೆ ಮಂಗಳಾದೇವಿ ದೇವಸ್ಥಾನದ ಜಾತ್ರೆಯ ಸಂದರ್ಭ ವಿವಾದ ಉಂಟಾದ ಬಳಿಕವೂ ಜಿಲ್ಲಾಡಳಿತ ಸೂಕ್ತ ನಿರ್ಧಾರ ತಾಳದ ಕಾರಣ ಇಂತಹ ತಾರತಮ್ಯ ನೀತಿ ಮುಂದುವರಿಯುತ್ತಿದೆ. ಇದಕ್ಕೆ ಜಿಲ್ಲಾಡಳಿತವೇ ಹೊಣೆ ಎಂದು ಬಿ.ಕೆ. ಇಮ್ತಿಯಾಝ್ ಆರೋಪಿಸಿದ್ದಾರೆ.

ಉಸ್ತುವಾರಿ ಸಚಿವರನ್ನು ಬದಲಾಯಿಸಿ: ರಾಜ್ಯ ಗೃಹ ಇಲಾಖೆಯು ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು ವಿಫಲ ವಾಗಿದೆ. ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್‌ಗೆ ಜಿಲ್ಲಾಡಳಿತದ ಮೇಲೆ ಹಿಡಿತವಿಲ್ಲ. ಸರಕಾರ ತಕ್ಷಣ ಅವರನ್ನು ಬದಲಾಯಿಸಿ ಹೊಸಬರನ್ನು ಉಸ್ತುವಾರಿ ಸಚಿವರನ್ನಾಗಿ ನೇಮಿಸಬೇಕು ಎಂದು ಒತ್ತಾಯಿಸಿದ್ದಾರೆ.

ಕುಡುಪು ದೇವಸ್ಥಾನದ ವಠಾರದಲ್ಲಿ ಸಂತೆ ವ್ಯಾಪಾರಕ್ಕೆ ಅವಕಾಶ ನಿರಾಕರಿಸಿರುವುದನ್ನು ಖಂಡಿಸಿ ಮತ್ತು ಸೂಕ್ತ ನ್ಯಾಯ ದೊರಕಿಸಿಕೊಡಬೇಕು ಎಂದು ಆಗ್ರಹಿಸಿ ವ್ಯಾಪಾರಿಗಳ ನಿಯೋಗವು ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿತು. ಜಿಲ್ಲಾಧಿಕಾರಿಯ ಪರವಾಗಿ ಅಪರ ಜಿಲ್ಲಾಧಿಕಾರಿ ಡಾ. ಸಂತೋಷ್ ಕುಮಾರ್ ಮನವಿ ಸ್ವೀಕರಿಸಿದರು.

ಈ ಸಂದರ್ಭ ಬೀದಿಬದಿ ವ್ಯಾಪಾರಸ್ಥರ ಸಂಘದ ಅಧ್ಯಕ್ಷ ಮುಹಮ್ಮದ್ ಮುಸ್ತಫಾ, ರಿಯಾಝ್ ಎಲ್ಯಾರ್ ಪದವು, ಜಾತ್ರೆ ವ್ಯಾಪಾರಸ್ಥರ ಸಂಘದ ಮುಖಂಡರಾದ ಅಹ್ಮದ್ ಕುಂಞಿ ಮಂಜನಾಡಿ, ಇಸ್ಮಾಯಿಲ್ ವಾಮಂಜೂರು, ಉಮರ್ ಬೆಂಗ್ರೆ, ಶೌಕತ್ ಬಂಟ್ವಾಳ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News