×
Ad

ಮರಣ ಪರಿಶೋಧನೆ ನಡೆಸಲು ಯೋಜನಾ ಕಾರ್ಯದರ್ಶಿ ಸೂಚನೆ

Update: 2023-12-08 21:21 IST

ಮಂಗಳೂರು: ಸರಕಾರದ ವಿವಿಧ ಫಲಾನುಭವಿಗಳ ಪೈಕಿ ಕೆಲವು ಫಲಾನುಭವಿಗಳು ತೀರಿ ಹೋಗಿದ್ದರೂ ಅವರ ಸೌಲಭ್ಯ ಮುಂದುವರಿಯುತ್ತಿರುವ ಬಗ್ಗೆ ದೂರುಗಳು ಬರುತ್ತಿವೆ. ಈ ನಿಟ್ಟಿನಲ್ಲಿ ಪರಿಶೀಲನೆ ನಡೆಸುವಂತೆ ಯೋಜನೆ ಮತ್ತು ಆರ್ಥಿಕ ಇಲಾಖೆಯ ಕಾರ್ಯದರ್ಶಿ ವಿಶಾಲ್ ಸೂಚಿಸಿದ್ದಾರೆ.

ದ.ಕ. ಜಿಲ್ಲಾಧಿಕಾರಿ ಕಚೇರಿಯಲ್ಲಿ ಶುಕ್ರವಾರ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು.

ಪಿಂಚಣಿ, ಗ್ಯಾರಂಟಿ, ಉದ್ಯೋಗ ಖಾತ್ರಿ, ಪಿಎಂ ಕಿಸಾನ್ ಯೋಜನೆ ಸಹಿತ ವಿವಿಧ ಯೋಜನೆಗಳಂತೆ ಫಲಾನುಭವಿಗಳಿಗೆ ಆರ್ಥಿಕ ನೆರವು ನೀಡಲಾಗುತ್ತಿದೆ. ಫಲಾನುಭವಿ ಬದುಕಿರುವ ತನಕ ಯೋಜನೆಯ ಲಾಭ ಸಿಗಲಿದೆ. ಆದರೆ ಕೆಲ ಫಲಾನುಭವಿಗಳು ತೀರಿ ಹೋಗಿದ್ದರೂ ಅವರ ಕುಟುಂಬದವರು, ಅದನ್ನು ಮುಚ್ಚಿಟ್ಟು ಯೋಜನೆಯ ಲಾಭ ಪಡೆಯುತ್ತಿ ದ್ದಾರೆ. ಈ ಬಗ್ಗೆ ದೂರುಗಳು ಬಂದಿವೆ. ಈ ಹಿನ್ನೆಲೆಯಲ್ಲಿ ಸಂಬಂಧಿಸಿದ ಇಲಾಖೆ ಅಧಿಕಾರಿಗಳು ಆಗಿಂದ್ದಾಗೆ ತಪಾಸಣೆ ನಡೆಸಿ ಯೋಜನೆಯ ದುರುಪಯೋಗ ತಡೆಗಟ್ಟಬೇಕು ಎಂದು ವಿಶಾಲ್ ಸೂಚಿಸಿದರು.

ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ಖಾತೆದಾರರಿಗೆ ಕಡಿಮೆ ಪ್ರೀಮಿಯಂಗೆ ದೊಡ್ಡ ಮೊತ್ತದ ವಿಮಾ ಸೌಲಭ್ಯ ಸಿಗುತ್ತಿದೆ. ವಿವಿಧ ಕಚೇರಿಗಳಲ್ಲಿ ಇರುವ ಹೊರಗುತ್ತಿಗೆ ನೌಕರರಿಗೆ ಹಾಗೂ ಸಾರ್ವಜನಿಕರಿಗೆ ಇದರ ಅರಿವು ಮೂಡಿಸಬೇಕು. ಕಂದಾಯ ನ್ಯಾಯಾಲಯಗಳಲ್ಲಿ ಇರುವ ಪ್ರಕರಣಗಳನ್ನು ತ್ವರಿತವಾಗಿ ಇತ್ಯರ್ಥಪಡಿಸಬೇಕು, ಅಗತ್ಯವಿದ್ದರೆ ಅನುಭವಿ ನಿವೃತ್ತ ನೌಕರರನ್ನು ಗುತ್ತಿಗೆ ಆಧಾರದಲ್ಲಿ ನೇಮಿಸಲು ವಿಶಾಲ್ ತಿಳಿಸಿದರು.

ಕುಡಿಯುವ ನೀರಿನ ಯೋಜನೆಗಳಲ್ಲಿ ನೀರಿನ ಮೂಲ ದೃಢಪಟ್ಟ ನಂತರವೇ ವಿವಿಧ ಕಾಮಗಾರಿ ಕೈಗೆತ್ತಿಕೊಳ್ಳಬೇಕು. ನೀರು ಸಂಗ್ರಹಕ್ಕೆ ಹೆಚ್ಚುವರಿ ಜಮೀನು ಅಗತ್ಯವಿದ್ದರೆ ನೆಲ ಬಾಡಿಗೆ ಆಧಾರದಲ್ಲಿ ಪಡೆಯಲು ಪರಿಶೀಲಿಸಲು ವಿಶಾಲ್ ತಿಳಿಸಿದರು.

ನಗರದಲ್ಲಿ ಹೊಸದಾಗಿ ಕೈಗೆತ್ತಿಕೊಂಡಿರುವ ಕುಡಿಯುವ ನೀರಿನ ಯೋಜನೆಗಳನ್ನು ತ್ವರಿತವಾಗಿ ಪೂರ್ಣಗೊಳಿಸಬೇಕು. ರಾಷ್ಟ್ರೀಯ ಬಾಲ ಸ್ವಾಸ್ಥ್ಯ ಯೋಜನೆಯಲ್ಲಿ ಅಂಗನವಾಡಿ ಮತ್ತು ಶಾಲಾ ಮಕ್ಕಳ ಆರೋಗ್ಯ ತಪಾಸಣೆಯನ್ನು ಪರಿಣಾಮ‌ ಕಾರಿಯಾಗಿ ನಡೆಸಬೇಕು. ಮಕ್ಕಳ ಹಲ್ಲು, ಕಣ್ಣು, ಕಿವಿ, ಮೂಗು ಸಹಿತ ವಿವಿಧ ಆರೋಗ್ಯ ಸಮಸ್ಯೆಗಳನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ತಿಳಿಸಿದರು.

ನರ್ಸರಿ ಎಲ್‌ಕೆಜಿ, ಯುಕೆಜಿ ಶಾಲೆಗಳಿಗೆ ಕ್ಷೇತ್ರ ಶಿಕ್ಷಣಾಧಿಕಾರಿ ನೋಂದಣಿ ಅಧಿಕಾರಿಯಾಗಿದ್ದಾರೆ. ಈ ಶಾಲೆಗಳಲ್ಲಿ ಮಕ್ಕಳ ಮಾಹಿತಿ ಅವರಲ್ಲಿರಬೇಕು. ಹುಟ್ಟಿದ ಮಗುವಿನಿಂದ ಆರು ವರ್ಷದವರೆಗಿನ ಮಕ್ಕಳ ಮಾಹಿತಿ ಮಹಿಳಾ ಮತ್ತು ಮಕ್ಕಳ ಇಲಾಖೆಯಲ್ಲಿರಬೇಕು ಎಂದು ವಿಶಾಲ್ ಹೇಳಿದರು.

ಸಭೆಯಲ್ಲಿ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಎಂಪಿ, ಜಿಪಂ ಸಿಇಒ ಡಾ. ಆನಂದ್ ಕೆ., ಅಪರ ಜಿಲ್ಲಾಧಿಕಾರಿ ಡಾ. ಸಂತೋಷ್ ಕುಮಾರ್, ಮಹಾನಗರಪಾಲಿಕೆಯ ಆಯುಕ್ತ ಆನಂದ್ ಸಿ.ಎಲ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News