ಕದ್ರಿ ಪಾರ್ಕ್ ಸಮಗ್ರ ಅಭಿವೃದ್ಧಿಗೆ ದ.ಕ. ಜಿಲ್ಲಾಧಿಕಾರಿ ಸೂಚನೆ
ಮಂಗಳೂರು,ಡಿ.8: ನಗರದ ಕದ್ರಿ ಉದ್ಯಾನವನದ ಸಮಗ್ರ ಅಭಿವೃದ್ಧಿಗೆ ಹೆಚ್ಚಿನ ಪ್ರಾಶಸ್ತ್ಯ ನೀಡಬೇಕು ಎಂದು ದ.ಕ.ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಸೂಚನೆ ನೀಡಿದರು.
ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಶುಕ್ರವಾ ರನಡೆದ ಕದ್ರಿ ಉದ್ಯಾನವನ ಅಭಿವೃದ್ಧಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಉದ್ಯಾನವನದ ಆಸುಪಾಸು ತ್ಯಾಜ್ಯ ನೀರು ಶೇಖರಣೆಯಾಗುತ್ತಿರುವ ಬಗ್ಗೆ ಪರಿಶೀಲಿಸಿ ಅದನ್ನು ಹೊರಹಾಕಲು ವ್ಯವಸ್ಥೆಯನ್ನು ಮಾಡಬೇಕು. ಕದ್ರಿ ಪಾರ್ಕ್ ರಸ್ತೆಗಳಲ್ಲಿ ವ್ಯಾಪಾರ ಮಾಡುವ ಬೇರೆ ರಾಜ್ಯದ ಕುಟುಂಬಗಳು ತಮ್ಮ ಮಕ್ಕಳೊಂದಿಗೆ ವಾಸಿಸುತ್ತಿದ್ದು, ಅಂತಹವರನ್ನು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯು ಪೊಲೀಸರ ಸಹಕಾರದೊಂದಿಗೆ ಕಾರ್ಯಚರಣೆ ನಡೆಸಿ ಮಕ್ಕಳನ್ನು ರಕ್ಷಿಸಬೇಕು ಎಂದು ಜಿಲ್ಲಾಧಿಕಾರಿ ಸೂಚಿಸಿದರು.
ಕದ್ರಿ ಉದ್ಯಾನವನದಲ್ಲಿ ಸಂಗೀತ ಕಾರಂಜಿ ಮತ್ತು ಲೇಸರ್ ಶೋ ಪ್ರಾರಂಭಿಸಲಾಗುವುದು. ಕದ್ರಿ ಪಾರ್ಕ್ ರಸ್ತೆಗಳಿಗೆ ಬೀದಿ ದೀಪಗಳನ್ನು ಅಳವಡಿಸಬೇಕು. ಅಲ್ಲಿ ನಡೆಯುವ ಚಟುವಟಿಕೆಗಳನ್ನು ತಪ್ಪಿಸಲು ಹೋಂ ಗಾರ್ಡ್‌ಗಳನ್ನು ನಿಯೋಜಿಸಬೇಕು ಎಂದರು.
ವಿಶೇಷ ಮಕ್ಕಳಿಗೆ ಆಟವಾಡಲು ಸರಿಯಾದ ರೀತಿಯ ಆಟಿಕೆಗಳನ್ನು ಒದಗಿಸಬೇಕು. ಮಕ್ಕಳ ರೈಲು ಆದಷ್ಟು ಬೇಗ ಸರಿಪಡಿಸಬೇಕು. ಉದ್ಯಾನವನದಲ್ಲಿ ಬೋರ್‌ವೆಲ್ ಕೊರೆದು ನೀರಿನ ವ್ಯವಸ್ಥೆಯನ್ನು ಮಾಡಿ ನರ್ಸರಿಯನ್ನು ನಿರ್ವಹಿಸ ಬೇಕು. ಉದ್ಯಾನ ಹುಲ್ಲು ಹಾಸುಗಳಿಗೆ ಮತ್ತು ಕಾರಂಜಿಗಳಿಗೆ ನೀರು ಪೂರೈಸಲು ಗಂಗನಪಳ್ಳ ಕೆರೆಯನ್ನು ಅಭಿವೃದ್ಧಿಪಡಿಸುವಂತೆ ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರಕ್ಕೆ ಜಿಲ್ಲಾಧಿಕಾರಿ ಸೂಚಿಸಿದರು.
ಉದ್ಯಾನವನದ ಸುತ್ತಲೂ ಸಿಸಿಟಿವಿ ಅಳವಡಿಸಲು ಸ್ಮಾರ್ಟ್ ಸಿಟಿ ಯೋಜನೆಯಲ್ಲಿ ಕ್ರಮಕೈಗೊಳ್ಳಬೇಕು. ಕದ್ರಿ ಉದ್ಯಾನವನದ ಒಳಗಡೆ ಡ್ರೋನ್ ಬಳಸಲು ಅವಕಾಶ ನೀಡಬಾರದು. ಕೆಲವು ಪ್ರದೇಶಗಳಲ್ಲಿ ಡ್ರೋನ್ ಬಳಕೆ ನಿಷೇಧ ಎನ್ನುವ ಫಲಕಗಳನ್ನು ಬಳಸುವಂತೆ ತಿಳಿಸಲಾಯಿತು.
ಸಭೆಯಲ್ಲಿ ಮಂಗಳೂರು ಮಹಾನಗರಪಾಲಿಕೆ ಆಯುಕ್ತ ಆನಂದ್ ಸಿ.ಎಲ್, ಸ್ಮಾರ್ಟ್ ಸಿಟಿ ಅಧಿಕಾರಿ ಅರುಣಾಪ್ರಭ, ತೋಟಗಾರಿಕಾ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕಿ ಜಾನಕಿ ಮತ್ತಿತರರು ಉಪಸ್ಥಿತರಿದ್ದರು.