×
Ad

ಆಳ್ವಾಸ್ ಸಾಂಸ್ಕೃತಿಕ ವೈಭವಕ್ಕೆ ಮೆರುಗು ನೀಡಿದ ನೃತ್ಯ ರೂಪಕಗಳು

Update: 2023-12-15 22:17 IST

ವಿದ್ಯಾಗಿರಿ (ಮೂಡುಬಿದಿರೆ), ಡಿ.15: ಮಹಿಷಾಸುರ ಮರ್ಧಿನಿಯ ಕಥಾನಕವನ್ನು ಹೊಂದಿದ ಭರತನಾಟ್ಯ ನೃತ್ಯರೂಪಕ ಹಾಗೂ ಪುರುಲಿಯೊ ಹಾಗೂ ಆಂಧ್ರಪ್ರದೇಶದ ಬಂಜಾರ ನೃತ್ಯದ ಮೂಲಕ 29ನೇ ಆಳ್ವಾಸ್ ವಿರಾಸತ್‌ನ 2ನೇ ದಿನವಾದ ಶುಕ್ರವಾರ ಆಳ್ವಾಸ್ ಸಾಂಸ್ಕೃತಿಕ ವೈಭವವು ಮೆರುಗು ನೀಡಿತು.

ಆಳ್ವಾಸ್ ಕಾಲೇಜಿನ ವಿದ್ಯಾರ್ಥಿಗಳಿಂದ ಪ್ರಸ್ತುತಪಡಿಸಲ್ಪಟ್ಟ ಈ ಮೂರೂ ಕಲಾ ಪ್ರಕಾರವು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಮೋಹನ ಆಳ್ವ ಅವರ ಪರಿಕಲ್ಪನೆಗೆ ಮುದ ನೀಡಿತು.

ಪುತ್ತೂರಿನ ವಿದ್ವಾನ್ ದೀಪಕ್ ಕುಮಾರ್ ನಿರ್ದೇಶನದಲ್ಲಿ ಆಳ್ವಾಸ್ ಸಾಂಸ್ಕೃತಿಕ ತಂಡದ 36 ವಿದ್ಯಾರ್ಥಿಗಳು ಮಹಿಷಾಸುರ ಮರ್ಧಿನಿ ರೂಪಕವನ್ನು ಪ್ರಸ್ತುತ ಪಡಿಸಿದರು. ಬೆಂಗಳೂರಿನ ವಿದ್ವಾನ್ ಜಿ. ಗುರುಮೂರ್ತಿ ಸಂಗೀತ ನೀಡಿದರು.

ಜಗತ್ತಿನ ಕೆಲವೇ ಕೆಲವು ಬುಡಕಟ್ಟು ಸಂಸ್ಕೃತಿಗಳ ಪೈಕಿ ಬಂಜಾರವೂ ಒಂದು. ಅವರ ಭಾಷೆ, ಆಚರಣೆ, ಉಡುಪು ಎಲ್ಲವೂ ಅನನ್ಯವಾಗಿದೆ. ಅಂತಹ ಬಂಜಾರರು ಆಂಧ್ರಪ್ರದೇಶದಲ್ಲಿ ಆಚರಿಸವು ಸಾಂಪ್ರದಾಯಿಕ ನೃತ್ಯವನ್ನು ಸುರೇಶ್ ಕುಮಾರ್ ನಿರ್ದೇಶನದಲ್ಲಿ ಆಳ್ವಾಸ್ ಸಾಂಸ್ಕೃತಿಕ ತಂಡದ ವಿದ್ಯಾರ್ಥಿಗಳು ಪ್ರದರ್ಶಿಸಿದರು. ಬಿಂದಿಗೆಯನ್ನು ಹೊತ್ತು, ಕೋಲಾಟ ಮಾಡಿದ ಬಾಲಕಿಯರ ನೃತ್ಯ ಖುಷಿ ನೀಡಿತು.

ಪುರುಲಿಯೊ ಪಶ್ಚಿಮ ಬಂಗಾಳದ ಒಂದು ಹಳ್ಳಿಯ ಹೆಸರು. ಈ ಹಳ್ಳಿಯ ಜನಪದೀಯ ಕಲೆಯಲ್ಲಿ (ಅರೆ ಶಾಸ್ತ್ರೀಯ ಎನ್ನಲಾಗುತ್ತದೆ) ಮಹಿಷಾಸುರ ಮರ್ಧಿನಿಯೂ ಪ್ರಮುಖವಾಗಿದೆ. ಇದನ್ನು ಪುರುಲಿಯಾ ಛಾವೋ ಎಂದು ನೃತ್ಯ ರೂಪಕದ ಮೂಲಕ ಪ್ರದರ್ಶನ ಮಾಡುತ್ತಾರೆ. ಈ ಕಥಾನಕದ ದುರ್ಗೆಯ ಸಿಂಹದ ಪಾತ್ರವೂ ಪ್ರಮುಖವಾಗಿದೆ. ರಂಗ ನಿರ್ದೇಶಕ ಜೀವನ್‌ರಾಂ ಸುಳ್ಯ ಅವರು ಸಿಂಹದ ಒಂದು ಪಾತ್ರದ ಮೂಲಕ ನೃತ್ಯರೂಪಕವನ್ನು ಮರುಸೃಷ್ಟಿಸಿ ಗಮನ ಸೆಳೆದರು.

ವಿರಾಸತ್‌ನ ಭವ್ಯ ವೇದಿಕೆಯಲ್ಲಿ ಮೂರೂ ನೃತ್ಯಗಳು ಭಾರತೀಯ ಜನಪದ ಮತ್ತು ಶಾಸ್ತ್ರೀಯ ಕಲಾ ಪ್ರಕಾರಗಳ ರಂಗು ಹೆಚ್ಚಿಸಿತು. ಭವ್ಯ ದೀಪಾಲಂಕಾರದ ನಡುವಿನ ಸುಮಾರು 50 ಸಾವಿರ ಆಸೀನದ ಸಭಾಂಗಣದಲ್ಲಿ ಚುಮು ಚುಮು ಚಳಿಯಲ್ಲಿ ಕುಳಿತ ಪ್ರೇಕ್ಷಕರು ನೃತ್ಯ ವೈಭವಕ್ಕೆ ತಲೆದದೂಗಿದರು.

ಆಳ್ವಾಸ್ ವಿರಾಸತ್‌ನಲ್ಲಿ ಗಾನ ವೈಭವ

ವಿದ್ಯಾಗಿರಿ (ಮೂಡುಬಿದಿರೆ), ಶಿಕ್ಷಣ- ಸಾಂಸ್ಕೃತಿಕ ಕಾಶಿಯ ಬೀಡಾದ ಮೂಡುಬಿದಿರೆಯಲ್ಲಿ ಶುಕ್ರವಾರ ರಾತ್ರಿ ನಾದ ನಿನಾದ ‘ಗಾನ ವೈಭವ’ ಮೊಳಗಿತು. ಹಿಂದಿ, ತಮಿಳು, ತೆಲುಗು, ಮಲಯಾಳಂ, ಕನ್ನಡ, ಬೆಂಗಾಲಿ, ಗುಜರಾತಿ, ಮರಾಠಿ ಸಹಿತ 19ಕ್ಕೂ ಅಧಿಕ ಭಾಷೆಗಳಲ್ಲಿ 3500 ಹಾಡುಗಳನ್ನು ಹಾಡಿದ ಖ್ಯಾತ ಹಿನ್ನೆಲೆ ಗಾಯಕ ಬಿನ್ನಿ ದಯಾಲ್ ಅವರ ಬಾಲಿವುಡ್, ಪಂಜಾಬ್, ತಮಿಳು ಸಹಿತ ಸ್ವರ ಮಾಧುರ್ಯಕ್ಕೆ ಆಳ್ವಾಸ್ ಕಾಲೇಜಿನ ವನಜಾಕ್ಷಿ ಕೆ. ಶ್ರೀಪತಿ ಭಟ್ ಬಯಲು ರಂಗ ಮಂದಿರದಲ್ಲಿ ತುಂಬಿದ ಪ್ರೇಕ್ಷಕರ ಕರತಾಡನ, ಜಯಕಾರ ಮುಗಿಲು ಮುಟ್ಟಿತು.

ಶಾರೂಕ್ ಖಾನ್ ನಟನೆಯ ‘ದಿಲ್’ ಸಿನಿಮಾದ ‘ಚೈಯ್ಯಂ ಚೈಯ್ಯಂ...’ ಹಾಡಿದಾಗ ಸುಖ್ವಿಂದರ್ ಸಿಂಗ್ ಅವರನ್ನು ನೆನಪಿಸಿಕೊಂಡ ಪ್ರೇಕ್ಷಕರು ರೈಲಿನ ಲಯಕ್ಕೆ ದನಿಗೂಡಿಸಿದರು.

1982ರಲ್ಲಿ ಮಿಥುನ್ ಚಕ್ರವರ್ತಿ ಹೆಜ್ಜೆ ಹಾಕಿದ ‘ಡಿಸ್ಕೊ ಡ್ಯಾನ್ಸರ್’ ಸಿನಿಮಾದ ರಿಮಿಕ್ಸ್ ‘ಐ ಯಾಮೇ ಡಿಸ್ಕೋ ಡ್ಯಾನ್ಸರ್...’ ಹಾಡಿದಾಗ ವಿದ್ಯಾರ್ಥಿಗಳು ಕೈ ಎತ್ತಿ ನಲಿದರು. 80ರ ದಶಕಗಳ ಹಾಡುಗಳನ್ನು ರಿಮಿಕ್ಸ್ ಮೂಲಕ ಪಾಶ್ಚಾತ್ಯ ಫ್ಯೂಷನ್‌ನಲ್ಲಿ ನಿರಂತರವಾಗಿ ಹಾಡಿದಾಗ ವಿದ್ಯಾರ್ಥಿಗಳು ಕುಳಿತಲ್ಲೆ ನಲಿದಾಡಿದರು.

ಪ್ರಭುದೇವ ಬ್ರೇಕ್ ಡ್ಯಾನ್ಸ್ ಖ್ಯಾತಿಯ ‘ಕಾದಲನ್’ ಸಿನಿಮಾದ ‘ಮುಕ್ಕಾಲಾ ಮುಕ್ಕಾಬುಲಾ ಓ ಲೈಲಾ’ ಹಾಡು ಹಾಡಿ ರಂಜಿಸಿದರು. ಮೂಲತಃ ಕೇರಳದ ಬಳಿಕ ಅಬುದಾಬಿಯಲ್ಲಿ ಬೆಳೆದ ಬಿನ್ನಿ ಗಾಯನಕ್ಕೆ ಬೇಸ್‌ನಲ್ಲಿ ಕಾರ್ಲ್, ಲೀಡ್ ಗಿಟಾರ್‌ನಲ್ಲಿ ಜೋಶುವಾ, ಡ್ರಮ್ಸ್ ನಲ್ಲಿ ಡೇವಿಡ್ ಜೋಸೆಫ್, ಪರ್ಕರ್ಷನ್‌ನಲ್ಲಿ ಆಲ್ವಿನ್, ಕೀ ಬೋರ್ಡ್‌ನಲ್ಲಿ ಅಲೋಕ್, ಟ್ರಂಪೆಟ್ ಮತ್ತು ಸ್ಯಾಕ್ಸೋಫೋನ್‌ನಲ್ಲಿ ರಾಹುಲ್ ಸಾಥ್ ನೀಡಿದರು.

ಕ್ಯಾ.ಬ್ರಿಜೇಶ್ ಚೌಟ ಕಾರ್ಯಕ್ರಮ ಉದ್ಘಾಟಿಸಿದರು. ಉದ್ಯಮಿ ಮುಸ್ತಫಾ, ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ.ಮೋಹನ ಆಳ್ವ ಉಪಸ್ಥಿತರಿದ್ದರು. 









Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News