×
Ad

ಅಧಿಕಾರಿಗಳ ತಪ್ಪಿನಿಂದ ಜನಪ್ರತಿನಿಧಿಗಳಿಗೆ ಕೆಟ್ಟ ಹೆಸರು: ಸಂಸದ ನಳಿನ್ ಕುಮಾರ್ ಕಟೀಲು

Update: 2023-12-18 22:20 IST

ಮಂಗಳೂರು: ಪಾಲಿಕೆ ಸೇರಿದಂತೆ ಕೆಲವು ಇಲಾಖೆಗಳಿಗೆ ಜನರು ಅರ್ಜಿ ನೀಡಿ ಅನುಮೋದನೆ ಪಡೆಯಲು ಹಲವು ದಿನಗಳು ಕಾಯಬೇಕಾದ ಪರಿಸ್ಥಿತಿ ಇದೆ. ಕಾನೂನಿನ ನೆಪ ಹೇಳಿ ಜನಸಾಮಾನ್ಯರನ್ನು ಅಧಿಕಾರಿಗಳು ಅಲೆದಾಡಿಸುತ್ತಾರೆ. ಈ ರೀತಿ ಕೆಲವು ಅಧಿಕಾರಿಗಳ ತಪ್ಪುಗಳಿಂದಾಗಿ ಜನಪ್ರತಿನಿಧಿಗಳಿಗೆ ಕೆಟ್ಟ ಹೆಸರು ಬರುವುದು ಮಾತ್ರವಲ್ಲದೆ, ಜನಸಾಮಾನ್ಯರು ತೊಂದರೆ ಅನುಭವಿಸಬೇಕಾಗುತ್ತದೆ ಎಂದು ಸಂಸದ ನಳಿನ್ ಕುಮಾರ್ ಕಟೀಲು ಅಭಿಪ್ರಾಯಿಸಿದ್ದಾರೆ.

ಮೇಯರ್ ಸುಧೀರ್ ಶೆಟ್ಟಿ ನೇತೃತ್ವದಲ್ಲಿ ಮಂಗಳೂರು ಪಾಲಿಕೆ ವ್ಯಾಪ್ತಿಯ ಜನರ ಅಹವಾಲುಗಳನ್ನು ಪಡೆಯಲು ಮಂಗಳೂರು ಪುರಭವನದಲ್ಲಿ ಸೋಮವಾರ ಆಯೋಜಿಸಲಾದ ‘ಜನಸ್ಪಂದನ’ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಅಧಿಕಾರಿಗಳಿಂದ ಜನಸಾಮಾನ್ಯರಿಗೆ ಆಗುವ ತೊಂದರೆಗಳ ಪರಿಹಾರಕ್ಕೆ ಮಂಗಳೂರು ಪಾಲಿಕೆಯ ಇತಿಹಾಸಲ್ಲಿ ಮೊದಲ ಬಾರಿಗೆ ಮೇಯರ್ ಸುಧೀರ್ ಶೆಟ್ಟಿ ಅವರ ನೇತೃತ್ವದಲ್ಲಿ ಜನಸ್ಪಂದನ ಕಾರ್ಯಕ್ರಮ ಆಯೋಜಿಸಿರುವುದು ಅತ್ಯುತ್ತಮ ಎಂದು ಅವರು ಹೇಳಿದರು.

ಮೇಯರ್ ಸುಧೀರ್ ಶೆಟ್ಟಿ ಮಾತನಾಡಿ, ಜನಸಾಮಾನ್ಯರು ತಮ್ಮ ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ವಿವಿಧ ಇಲಾಖೆಗಳಿಗೆ ಅಲೆದಾಡುವ ಪರಿಸ್ಥಿತಿ ಇದೆ. ಈ ನಿಟ್ಟಿನಲ್ಲಿ ಜನರ ಸಮಸ್ಯೆ ಆಲಿಸುವ ನೆಲೆಯಿಂದ ಫೋನ್ ಇನ್ ಕಾರ್ಯಕ್ರಮ ನಡೆಸಲಾಗುತ್ತಿದೆ. ಇದಕ್ಕೆ ಪೂರಕವಾಗಿ ಪಾಲಿಕೆಯ ಎಲ್ಲಾ ಅಧಿಕಾರಿಗಳನ್ನು ಒಂದೆಡೆ ಸೇರಿಸಿಕೊಂಡು ಜನರ ಸಮಸ್ಯೆ ಪರಿಹಾರದ ಆಶಯದೊಂದಿಗೆ ಜನಸ್ಪಂದನ ಕಾರ್ಯಕ್ರಮವನ್ನು ಇದೇ ಮೊದಲ ಬಾರಿಗೆ ಆಯೋಜಿಸಲಾಗಿದೆ ಎಂದರು.

ಶಾಸಕರಾದ ವೇದವ್ಯಾಸ ಕಾಮತ್, ಡಾ. ವೈ.ಭರತ್ ಶೆಟ್ಟಿ, ಉಪಮೇಯರ್ ಸುನೀತ, ಮುಖ್ಯ ಸಚೇತಕ ಪ್ರೇಮಾನಂದ ಶೆಟ್ಟಿ, ಪ್ರತಿಪಕ್ಷ ನಾಯಕ ಪ್ರವೀಣ್‌ಚಂದ್ರ ಆಳ್ವ, ಮಾಜಿ ಮೇಯರ್ ಎಂ.ಶಶಿಧರ ಹೆಗ್ಡೆ, ಪಾಲಿಕೆಯ ವಿವಿಧ ಸ್ಥಾಯಿ ಸಮಿತಿ ಅಧ್ಯಕ್ಷರಾದ ಲೋಹಿತ್ ಅಮೀನ್, ವರುಣ್ ಚೌಟ, ಭರತ್ ಕುಮಾರ್, ಗಣೇಶ್ ಸಹಿತ ಮನಪಾ ಸದಸ್ಯರು, ಉಪ ಆಯುಕ್ತ ರವಿಕುಮಾರ್, ವಲಯ ಆಯುಕ್ತೆ ರೇಖಾ ಶೆಟ್ಟಿ ಮುಂತಾದವರು ಉಪಸ್ಥಿತರಿದ್ದರು.

ಬೆಳಗ್ಗೆ ಸುಮಾರು 11 ಗಂಟೆಯಿಂದ ಸಂಜೆ 3 ಗಂಟೆಯವರೆಗೆ ನಡೆದ ಜನಸ್ಪಂದನ ಕಾರ್ಯಕ್ರಮದಲ್ಲಿ ಪಾಲಿಕೆಯ 60 ವಾರ್ಡ್‌ಗಳಿಂದ 28 ದೂರು ಅರ್ಜಿಗಳು ಸಲ್ಲಿಕೆಯಾದವು.

ಸಾಮಾಜಿಕ ಹೋರಾಟಗಾರ ಜಿ.ಕೆ.ಭಟ್ ಮಾತನಾಡಿ, ಪಂಪ್‌ವೆಲ್‌ನಲ್ಲಿ ಬಸ್ ನಿಲ್ದಾಣ ಅಗತ್ಯವಾಗಿದ್ದು, ಖಾಲಿ ಜಾಗಕ್ಕೆ ತೆರಿಗೆ ದುಪ್ಪಟ್ಟಾಗುತ್ತಿದೆ. ನಗರದಲ್ಲಿ ಬಸ್ ಶೆಲ್ಟರ್ ನಿರ್ಮಾಣವೇ ಆಗಿಲ್ಲ. ಕ್ಲಾಕ್‌ಟವರ್ ನಿರ್ವಹಣೆ ಆಗುತ್ತಿಲ್ಲ. ಸರ್ವಿಸ್ ಬಸ್‌ನಿಲ್ದಾಣ ರಿಪೇರಿ ಅರ್ಧದಲ್ಲಿ ಬಾಕಿಯಾಗಿದೆ ಎಂದರು.

ಕೃಷ್ಣ ಭಟ್ ಎಂಬವರು ಮಾತನಾಡಿ, ಕಾವೂರು-ಬೋಂದೆಲ್ ಮಧ್ಯೆ ಫುಟ್‌ಪಾತ್ ಇಲ್ಲ. ಕಾವೂರ್ ಜಂಕ್ಷನ್‌ನಲ್ಲಿ ಟ್ರಾಫಿಕ್ ಸಮಸ್ಯೆ ಇದೆ ಎಂದಾಗ ಅಧಿಕಾರಿಗಳು ಪರಿಶೀಲಿಸುವಂತೆ ಮೇಯರ್ ಸೂಚಿಸಿದರು.

ಸಾಮಾಜಿಕ ಕಾರ್ಯಕರ್ತ ಹನುಮಂತ ಕಾಮತ್ ಮಾತನಾಡಿ, 400ಕ್ಕೂ ಅಧಿಕ ಅನಧಿಕೃತ ಕಟ್ಟಡ ಮಂಗಳೂರಿನಲ್ಲಿವೆ. ಇದರಲ್ಲಿ ಕೆಲವನ್ನು ತೆರವು ಮಾಡುವಂತೆ ನ್ಯಾಯಾಲಯ ಸೂಚಿಸಿದೆ. ಪಾಲನೆಯಾಗಿಲ್ಲ ಎಂದಾಗ, ‘ಈ ಬಗ್ಗೆ ಪರಿಶೀಲಿಸಿ ಉತ್ತರ ನೀಡಲಾಗುವುದು’ ಎಂದು ಅಧಿಕಾರಿಗಳು ತಿಳಿಸಿದರು.

‘ಪಾಲಿಕೆ ಕಚೇರಿಯಲ್ಲಿ ಸಂಜೆ 3.30ರ ನಂತರ ಎಲ್ಲಾ ಅಧಿಕಾರಿಗಳು ಸಾರ್ವಜನಿಕರಿಗೆ ಸಿಗುವಂತೆ ನೋಡಿಕೊಳ್ಳಬೇಕು, ರೈಲ್ವೇ ಜಾಗದ ಪಕ್ಕದಲ್ಲಿ ಏಕನಿವೇಶನಕ್ಕೆ ಮುಡಾದಿಂದ ರೈಲ್ವೇ ಇಲಾಖೆಗೆ ಅಲೆದಾಡಿಸುತ್ತಿದ್ದಾರೆ ಹಾಗೂ ಅನಧಿಕೃತ ಹೋರ್ಡಿಂಗ್ ತೆರವು ಮಾಡಬೇಕು, ದಂಡ ವಿಧಿಸಬೇಕು ಎಂದು ಕಾಮತ್ ಒತ್ತಾಯಿಸಿದರು. ಇದರ ಬಗ್ಗೆ ವಿಶೇಷ ಒತ್ತು ನೀಡಲಾಗುವುದು ಎಂದು ಮೇಯರ್ ವಿವರಿಸಿದರು.

ವಿ.ಪರಿಷತ್ ಮಾಜಿ ಸದಸ್ಯ ಐವನ್ ಡಿಸೋಜ ಮಾತನಾಡಿ, ಪಾಲಿಕೆ ಕಟ್ಟಡದಲ್ಲಿ ಅರ್ಜಿ ಬರೆಯುವವರನ್ನು ತೆರವು ಮಾಡಲಾಗಿದ್ದು, ಅವರಿಗೆ ಪರ್ಯಾಯ ವ್ಯವಸ್ಥೆಯನ್ನು ಕಲ್ಪಿಸಬೇಕು. ಸರ್ವಿಸ್ ಬಸ್‌ನಿಲ್ದಾಣದ ಬದಲು ಸಿಟಿ ಬಸ್‌ಗಳನ್ನು ಹಿಂದಿನಂತೆಯೇ ಸಿಟಿ ಬಸ್ ನಿಲ್ದಾಣ ವ್ಯಾಪ್ತಿಗೆ ತರಬೇಕು ಹಾಗೂ ಕಂಕನಾಡಿಯಿಂದ ನಂದಿಗುಡ್ಡವರೆಗಿನ ರಸ್ತೆ ಬದಿಯಲ್ಲಿ ನಿತ್ಯ ಕಾಮಗಾರಿ, ಪೈಪ್ ರಾಶಿ ಹಾಕಿದ್ದು ಸಹಿತ ವಿವಿಧ ಸಮಸ್ಯೆಗಳು ಇವೆ ಎಂದರು. ಇದೆಲ್ಲದರ ಬಗ್ಗೆ ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ಮೇಯರ್ ಉತ್ತರಿಸಿದರು.

ಸಾಮಾಜಿಕ ಹೋರಾಟಗಾರ ಪದ್ಮನಾಭ ಉಳ್ಳಾಲ್ ಮಾತನಾಡಿ, ‘ಬೋಂದೆಲ್‌ನಲ್ಲಿರುವ ಪಿಡಬ್ಲ್ಯೂಡಿ ವಸತಿ ನಿಲಯದ ಆಟದ ಮೈದಾನ ನಿರ್ವಹಣೆ ಮಾಡಬೇಕು. ನೀರು-ಚರಂಡಿ ಸಮಸ್ಯೆ ಪರಿಹಾರಕ್ಕೆ ಪಾಲಿಕೆ ತಾಂತ್ರಿಕ ಸಲಹೆಗಾರರನ್ನು ನೇಮಿಸಬೇಕು ಎಂದರು.

ಈ ಬಗ್ಗೆ ಪರಿಶೀಲನೆ ನಡೆಸುವುದಾಗಿ ಮೇಯರ್ ಭರವಸೆ ನೀಡಿದರು. 






Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News