×
Ad

ಬೆಳ್ತಂಗಡಿ ತಾಲೂಕು ಆಸ್ಪತ್ರೆಗೆ ಮಾಜಿ ಶಾಸಕ ವಸಂತ ಬಂಗೇರ ಭೇಟಿ, ಡಿ.ಎಚ್.ಒ ವಿರುದ್ಧ ಆಕ್ರೋಶ

Update: 2023-12-19 22:27 IST

ಬೆಳ್ತಂಗಡಿ: ಜಿಲ್ಲಾ ಆರೋಗ್ಯಾಧಿಕಾರಿಯವರು ಎಚ್.ಸಿ.ವಿ ವೈರಸ್ ಬಾಧಿತ ಡಯಾಲಿಸಿಸ್ ರೋಗಿಗಳ ಜತೆ ಚೆಲ್ಲಾಟವಾ ಡುತ್ತಿದ್ದಾರೆ ಹೊರತು ಬೇಕಾಗುವ ವ್ಯವಸ್ಥೆಗಳು ಮಾಡುವತ್ತ ಗಮನಹರಿಸುತ್ತಿಲ್ಲ ಎಂದು ಮಾಜಿ ಶಾಸಕ ವಸಂತ ಬಂಗೇರ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

ಬೆಳ್ತಂಗಡಿ ತಾಲೂಕು ಆಸ್ಪತ್ರೆಯಲ್ಲಿ ಮಂಗಳವಾರ ಮಾಧ್ಯಮದವರ ಜತೆ ಮಾತನಾಡಿದ ಅವರು "ಡಯಾಲಿಸಿಸ್ ಚಿಕಿತ್ಸೆ ಪಡೆಯುತ್ತಿರುವ ದಿನೇಶ್ ಶೆಟ್ಟಿ ಎಂಬವರು ಸೋಮವಾರ ಬೆಳ್ತಂಗಡಿ ತಾಲೂಕು ಆಸ್ಪತ್ರೆಯಲ್ಲಿರುವ ಡಯಾಲಿಸಿಸ್ ಕೇಂದ್ರದಲ್ಲಿನ ಅವ್ಯವಸ್ಥೆಗಳನ್ನು ತಿಳಿಸಿ, ಚಿಕಿತ್ಸೆ ಪಡೆಯುತ್ತಿರುವ ಹಲವು ಮಂದಿ ಎಚ್ ಸಿವಿಯಿಂದ ಬಳಲುತ್ತಿದ್ದಾರೆ ಎಂದು ತಿಳಿಸಿದಾಗ ಈ ಬಗ್ಗೆ ಡಿಎಚ್ ಒ ಅವರನ್ನೂ ಸಂಪರ್ಕಿಸಲಾಗಿತ್ತು ಅವರು ಸೋಮವಾರ ಸಂಜೆ 4:30ಕ್ಕೆ ಆಗಮಿಸುವ ಕುರಿತು ತಿಳಿಸಿದ್ದರು.

ಆದರೆ ಡಿಎಚ್ ಒ ಮಧ್ಯಾಹ್ನವೇ ಯಾರಿಗೂ ತಿಳಿಸದೆ ಆಗಮಿಸಿ ವಾಪಸು ಹೋಗಿದ್ದಾರೆ. ಕನಿಷ್ಟ ರೋಗಿಗಳೊಂದಿಗೆ ಮಾತುಕತೆ ನಡೆಸಿ ಅವರ ಸಮಸ್ಯೆಗಾದರೂ ಪರಿಹಾರ ಒದಗಿಸುವ ಕಾರ್ಯ ಮಾಡದೆ ಅವರು ಹೋಗಿದ್ದರಿಂದ ರೋಗಿಗಳು ಕಂಗಾಲಾಗಿದ್ದಾರೆ ಎಂದು ಡಿ.ಎಚ್ ಒ ಅವರ ವರ್ತನೆಯನ್ನು ತರಾಟೆಗೆ ತೆಗೆದುಕೊಂಡರು.

ಡಯಾಲಿಸಿಸ್ ಕೇಂದ್ರದಲ್ಲಿರುವ ಎಚ್ ಸಿವಿ ಪೀಡಿತ ರೋಗಿಗಳಿಗೆ ತಮಗೆ ಬೇಕಾಗಿರುವ 28 ದಿನದ ಮಾತ್ರೆಗಳಿಗೆ 17,500ರೂ. ವೆಚ್ಚ ಭರಿಸಬೇಕಾಗುತ್ತದೆ ಎಂದು ರೋಗಿಗಳು ಬಂಗೇರರ ಮುಂದೆ ತಮ್ಮ ಅಳನ್ನು ತೋಡಿಕೊಂಡರು. ಒಟ್ಟು 20 ಮಂದಿ ಎಚ್ ಸಿವಿ ಪೀಡಿತರಿದ್ದು ತಮ್ಮಲ್ಲಿ ಇಷ್ಟೊಂದು ದುಬಾರಿ ಔಷಧಿ ಖರೀದಿಸುವ ಶಕ್ತಿ ಇಲ್ಲ ಆದರೆ ಜೀವ ಉಳಿಯಬೇಕಾದರೆ ಔಷಧಿ ಸೇವಿಸಬೇಕಾದ ಅಗತ್ಯವಿದೆ ಎಂದು ತಿಳಿಸಿದಾಗ ಮೂರುವರೆ ಲಕ್ಷ ರೂ.ಗಳ ಮಾತ್ರೆಯನ್ನು ಬುಧವಾರದಂದು ಸ್ವಂತ ದುಡ್ಡಿನಿಂದ ಖರೀದಿಸಿ ರೋಗಿಗಳಿಗೆ ನೀಡುವುದಾಗಿ ಬಂಗೇರರು ತಿಳಿಸಿದರು.

ಬಳಿಕ ಅವರು ಆರೋಗ್ಯ ಸಚಿವರ ಆಪ್ತ ಕಾರ್ಯದರ್ಶಿಗೆ ಕರೆ ಮಾಡಿ ವಿಚಾರ ತಿಳಿಸಿ ಡಿ.ಎಚ್‌.ಒ ಅವರ ವರ್ತನೆಯ ಬಗ್ಗೆ ರೋಗಿಗಳ ಸಮಸ್ಯೆ ಬಗ್ಗೆ ತಿಳಿಸಿದಾಗ ಅವರು ಬುಧವಾರ ಸಂಜೆಯೊಳಗೆ ಸರಕಾರದಿಂದ ಸಿ.ವಿ ವೈರಸ್ ಬಾದಿತ ರೋಗಿಗಳೆಲ್ಲರಿಗೂ ಈ ಮಾತ್ರೆಗಳ ವ್ಯವಸ್ಥೆ ಮಾಡುವುದಾಗಿ ತಿಳಿಸಿದರು. ಈ ಬಗ್ಗೆ ಡಿ.ಎಚ್.ಒ ಅವರಿಗೆ ಇಂದೇ ಸೂಚನೆ ನೀಡುವುದಾಗಿಯು ಅಧಿಕಾರಿಗಳು ತಿಳಿಸಿದರು.

ಬೆಂಗಳೂರಿನ ರೋಟರಿ ಸಂಸ್ಥೆ ಹಾಗೂ ಬೆಳ್ತಂಗಡಿ ರೋಟರಿ ಕ್ಲಬ್ ವತಿಯಿಂದ ಒಟ್ಟು ಆರು ಡಯಾಲಿಸಿಸ್ ಯಂತ್ರಗಳನ್ನು ಸರಕಾರಿ ಆಸ್ಪತ್ರೆಗೆ ನೀಡುವುದಾಗಿ ತಿಳಿಸಿದ್ದು ಅವರನ್ನು ತಕ್ಷಣ ಸಂಪರ್ಕಿಸಿ ವ್ಯವಸ್ಥೆ ಮಾಡುವುದಾಗಿ ಬಂಗೇರ ತಿಳಿಸಿದರು.

"ರೋಗಿಗಳಿಂದ ಹಾಗೂ ಡಯಾಲಿಸಿಸ್ ನಡೆಸುವ ಸಿಬ್ಬಂದಿಗಳಿಂದ ಇಲ್ಲಿನ ಅವ್ಯವಸ್ಥೆಗಳ ಕುರಿತು ಮಾಹಿತಿ ಸಂಗ್ರಹಿಸಲಾ ಗಿದೆ. ಈ ಬಗ್ಗೆ ಆರೋಗ್ಯ ಸಚಿವರ ಗಮನಕ್ಕೆ ತರಲಾಗಿದ್ದು ಅವರು ಶೀಘ್ರ ವ್ಯವಸ್ಥೆ ಕಲ್ಪಿಸುವ ಭರವಸೆ ನೀಡಿದ್ದಾರೆ. ಸದ್ಯಕ್ಕೆ ತೀರಾ ಅಗತ್ಯವಿರುವ ತಾತ್ಕಾಲಿಕ ವ್ಯವಸ್ಥೆಗಳನ್ನು ಮಾಡಲಾಗುತ್ತದೆ"

- ವಸಂತ ಬಂಗೇರ, ಮಾಜಿ ಶಾಸಕ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News