×
Ad

ಕೈಕಂಬ: ಇನಾಯತ್ ಅಲಿ ಹುಟ್ಟುಹಬ್ಬ ಪ್ರಯುಕ್ತ ಜನಸ್ಪಂದನಾ ಕಾರ್ಯಕ್ರಮ, ಉಚಿತ ಆರೋಗ್ಯ ತಪಾಸಣಾ ಶಿಬಿರ

Update: 2023-12-19 23:04 IST

ಕೈಕಂಬ: ಇನಾಯತ್‌ ಅಲಿ ಅಭಿಮಾನಿ ಬಳಗ ಹಾಗೂ ಲಯನ್ಸ್ ಕ್ಲಬ್ ಮುಚ್ಚೂರು ನೀರುಡೆ ಘಟಕದ ಸಂಯುಕ್ತಾಶ್ರಯದಲ್ಲಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಇನಾಯತ್ ಅಲಿ ಅವರ ಹುಟ್ಟುಹಬ್ಬದ ಪ್ರಯುಕ್ತ ಬ್ಲಡ್‌ ಬ್ಯಾಂಕ್‌ ಕರ್ನಾಟಕ, ಶ್ರೀನಿವಾಸ್‌ ಆಸ್ಪತ್ರೆಗಳ ಸಹಕಾರದೊಂದಿಗೆ ಬೃಹತ್ ಜನಸ್ಪಂದನಾ ಕಾರ್ಯಕ್ರಮ ಮತ್ತು ಉಚಿತ ಆರೋಗ್ಯ ತಪಾಸಣಾ ಶಿಬಿರವು ಮಂಗಳವಾರ ಕೈಕಂಬದ ಝಾರಾ ಕನ್ವೆಂಷನ್ ಸಭಾಭವನದಲ್ಲಿ ಜರುಗಿತು.

ಕಾರ್ಯಕ್ರಮವನ್ನು ಅತಿಥಿಗಳು ಉದ್ಘಾಟಿಸಿದರು. ಶ್ರೀ ಕ್ಷೇತ್ರ ಕದ್ರಿ ವಿಠಲನಾಥ ತಂತ್ರಿ ಅವರು ಮಾತನಾಡಿ, ಜನರು ಸಾಮಾನ್ಯವಾಗಿ ತಮ್ಮ ಮನೆ ಕುಟುಂಬಕರೊಂದಿಗೆ ಕೇಕ್‌ ಕತ್ತರಿಸಿ, ಆಡಂಬರದಿಂದ ಆಚರಿಸುತ್ತಾರೆ. ಆದರೆ, ಇನಾಯತ್ ಅವರು ಸಮಾಜದೊಂದಿಗೆ ಹುಟ್ಟುಹಬ್ಬ ಆಚರಿಸುತ್ತಿದ್ದಾರೆ. ಇದು ನಿಜವಾದ ಜನನಾಯಕನ ಆಶಯವಾಗಿರಬೇಕು. ಅವರು ಚುನಾವಣೆಯಲ್ಲಿ ಗೆದ್ದರೂ ಸೋತರೂ ನಾನು ಜನರೊಂದಿಗೆ ಇದ್ದೇನೆ ಎಂದು ತನ್ನ ಕಾರ್ಯಕ್ರಮಗಳ ಮೂಲಕ ಸಮಾಜದ ಜೊತೆ ಇದ್ದೇನೆ ಎಂದು ತೋರಿಸಿಕೊಡುತ್ತಿದ್ದಾರೆ. ಇದು ಎಲ್ಲಾ ನಾಯಕರಿಗೆ ಮಾದರಿಯಾಗಿದೆ ಎಂದರು. ದೀಪದ ಪಂಚಜ್ಯೋತಿಯಂತೆ ಅವರ ಆಯುಷ್ಯ ವೃದ್ಧಿಸಲಿ, ಆರೋಗ್ಯ, ವರ್ಚಸ್ಸು, ರಾಜಕೀಯ ಭವಿಷ್ಯ, ಐಶ್ವರ್ಯ ವೃದ್ಧಿಸಲಿ ಆಮೂಲಕ ಅವರು ಇನ್ನೂ ಹೆಚ್ಚಿನ ಸಮಾಜಿಕ ಕಾರ್ಯಕ್ರಮಗಳನ್ನು ನಡೆಸಲಿ, ಅವರ ಭವಿಷ್ಯ ಉಜ್ವಲವಾಗಲಿ ಎಂದು ಶುಭಹಾರೈಸಿದರು.

ಬಳಿಕ ಮಾತನಾಡಿದ ಇನಾಯತ್ ಅಲಿ, ಲಯನ್ಸ್‌ ಕ್ಲಬ್, ಕೆಎಂಸಿ, ಪ್ರಸಾದ್ ನೇತ್ರಾಲಯ ಬ್ಲಡ್ ಡೋನರ್ಸ್ ಮಂಗಳೂರು ಅವರಿಗೆ ತಲೆಬಾಗುತ್ತಾ ನನಗೋಸ್ಕರ ರಾತ್ರಿ ಹಗಲೆನ್ನದೆ ಕಾರ್ಯಕ್ರಮ ಮಾಡಿದ ನನ್ನ ಅಭಿಮಾನಿ ಬಳಗಕ್ಕೆ ಅಭಾರಿಯಾಗಿದ್ದೇನೆ. ನಾವು ಬದುಕುವುದು ಮೂರು ದಿನ ಮಾತ್ರ. ಆದರೆ, ಅಸಕ್ತರಿಗೆ ನೆರವಾಗುವ ಮೂಲಕ ನೆನಪಿಡುವ ಕಾರ್ಯಕ್ರಮ ಆಯೋಜನೆ ಮಾಡಿದ್ದೀರಿ. ನಿಮ್ಮ ಋಣ ತೀರಿಸಲು ಸಾಧ್ಯವಿಲ್ಲ. ನಿಮ್ಮ ಪ್ರೀತಿ ವಿಶ್ವಾಸ ಕಡಿಮೆಯಾಗಿಲ್ಲ. ಇಂತಹ ಸಮಾಜಮುಖಿ ಕಾರ್ಯಕ್ರಮ ಮುಂದುವರಿಸಬೇಕೆಂದು ನುಡಿದರು.

ಪೆರಾರ ಚರ್ಚ್ ಧರ್ಮಗುರು ಫಾ. ಆಂಟನಿ ವಿನ್ಸೆಂಟ್ ಲೂಯಿಸ್, ಅಬ್ದುಲ್‌ ಖಾದರ್‌ ಮದನಿ, ಖ್ಯಾತವಾಗ್ಮಿ ಲಕ್ಷ್ಮೀಶ್ ಗಬ್ಲಡ್ಕ, ರೋಸಾಮಿಸ್ತಿಕಾ ಪ್ರಿನ್ಸಿಪಾಲ್‌ ಸಾಧನಾ ಡಿಸೋಜಾ ಮೊದಲಾದವರು ಮಾತನಾಡಿ ಇನಾಯತ್‌ ಅಲಿ ಅವರಿಗೆ ಶುಭ ಹಾರೈಸಿದರು. ಕೆಪಿಸಿಸಿಯ ಆರ್.ಕೆ. ಪೃಥ್ವಿರಾಜ್ ಅವರು ಪ್ರಾಸ್ತಾವಿಕ ಮಾತನಾಡಿದರು.

ಇದೇ ಸಂದರ್ಭ ಮಾಸ್ಟರ್ ಶೆಫ್ ವಿನ್ನರ್ ಮುಹಮ್ಮದ್ ಆಶಿಕ್ ಹಾಗೂ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಇನಾಯತ್‌ ಅಲಿ ಅವರು ಕೇಕ್‌ ಕತ್ತರಿಸಿದರು. ಬಳಿಕ ಉತ್ತರ ವಿಧಾನಸಭಾ ಕ್ಷೇತ್ರದ ಇನಾಯತ್‌ ಅಲಿ ಅಭಿಮಾನಿ ಬಳಗ ಹಾಗೂ ಲಯನ್ಸ್ ಕ್ಲಬ್ ಮುಚ್ಚೂರು ನೀರುಡೆಯ ವತಿಯಿಂದ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಇದೇ ವೇಳೆ ಇನಾಯತ್‌ ಅಲಿ ಅವರು ವಿಶೇಷ ಚೇತನರಿಗೆ ಆರ್ಥಿಕ ಸಹಾಯವನ್ನು ವಿತರಿಸಿದರು.

ವೇದಿಕೆಯಲ್ಲಿ ಗುರುಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುರೇಂದ್ರ ಕಂಬಳಿ, ಸುರತ್ಕಲ್‌ ಬ್ಲಾಕ್‌ ಅಧ್ಯಕ್ಷ ಪುರುಷೋತ್ತಮ ಚಿತ್ರಪುರ, ಕೃಷ್ಣ ಅಮೀನ್, ಗಂಜಿಮಠ ಪಂ.ಅಧ್ಯಕ್ಷೆ ಮಾಲತಿ, ಮೆಲ್ವಿನ್ ಡಿಸೋಜಾ, ಶ್ರೀಧರ್ ಮಳಲಿ, ರಾಜ್ ಕುಮಾ‌ರ್ ಶೆಟ್ಟಿ ತಿರುವೈಲುಗುತ್ತು, ನೀರುಡೆ ಮುಚೂರು ಲಯನ್ಸ್ ಕ್ಲಬ್‌ ಅಧ್ಯಕ್ಷ ರೋಷನ್ ಡಿಸೋಜಾ, ಪವಿತ್ರಾ ಸನಿಲ್, ದೀಪಕ್ ಪೆರ್ಮುದೆ, ಹಫೀಸ್ ಪೆರ್ಮುದೆ, ಪದ್ಮನಾಭ ಕೋಟ್ಯಾನ್, ಇನಾಯತ್ ಅಲಿ ಅಭಿಮಾನಿ ಬಳಗದ ಅಧ್ಯಕ್ಷ ಇಕ್ಬಾಲ್‌ ಅಲಿಯಾರ್, ಯು.ಪಿ. ಇಬ್ರಾಹಿಂ, ಸುರತ್ಕಲ್ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಮುಹಮ್ಮದ್ ಸಮೀ‌ರ್ ಕಾಟಿಪಳ್ಳ, ಗಿರೀಶ್ ಆಳ್ವ ಮತ್ತಿತರರು ಉಪಸ್ಥಿತರಿದ್ದರು. ಸಫಲ್ ಕೆ.ಬಿ.ಎನ್. ಕುಡ್ತಮುಗೇರು ಕಾರ್ಯಕ್ರಮ ನಿರೂಪಿಸಿದರು.

ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಇನಾಯತ್ ಅಲಿ ಅವರ ಹುಟ್ಟುಹಬ್ಬದ ಪ್ರಯುಕ್ತ ಗಂಜಿಮಠ ಝಾರಾ ಕನ್ವೆಂಷನ್‌ ಸಭಾಭವನದಲ್ಲಿ ನಡೆದ ಬೃಹತ್ ಜನಸ್ಪಂದನಾ ಕಾರ್ಯಕ್ರಮದಲ್ಲಿ 1,800 ಅಧಿಕ ಮಂದಿ ಭಾಗವಹಿಸಿ ಸದುಪಯೋಗ ಪಡೆದುಕೊಂಡರೆ, ಉಚಿತ ಆರೋಗ್ಯ ತಪಾಸಣಾ ಶಿಬಿರದಲ್ಲಿ 4 ಸಾವಿರಕ್ಕೂ ಹೆಚ್ಚಿನ ಫಲಾನುಭವಿಗಳು ಪ್ರಯೋಜನ ಪಡೆದುಕೊಂಡರು.












Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News