×
Ad

ಯುವ ಸಮೂಹಕ್ಕೆ ಪ್ರವಾದಿ ಸಂದೇಶ ಸಾರುವ ಹೊಣೆ ನಮ್ಮದಾಗಲಿ: ವಿಶ್ವಸಂತೋಷ ಭಾರತಿ ಸ್ವಾಮೀಜಿ

Update: 2023-12-22 21:56 IST

ಮಂಗಳೂರು: ಸದಾ ಸಮಾಜದ ಒಳಿತನ್ನು ಬಯಸಿ ಸತ್ಯವನ್ನೇ ಮನುಕುಲಕ್ಕೆ ಸಾರಿದ್ದ ಪ್ರವಾದಿಯ ಸಂದೇಶವನ್ನು ಯುವ ಸಮೂಹಕ್ಕೆ ನೀಡುವ ಹೊಣೆ ನಮ್ಮದಾಗಲಿ ಎಂದು ಬಾರ್ಕೂರು ಮಹಾಸಂಸ್ಥಾನದ ವಿಶ್ವಸಂತೋಷ ಭಾರತಿ ಸ್ವಾಮೀಜಿ ಹೇಳಿದರು.

‘ಮಾನವ ಧರ್ಮ, ದೈವಿಕ ಕಾನೂನು ಮತ್ತು ಪ್ರವಾದಿ ಮುಹಮ್ಮದ್ ಅವರ ಸಂದೇಶ ಪ್ರಚಾರ’ದ ಸಲುವಾಗಿ ಯುನಿವೆಫ್ ಕರ್ನಾಟಕದ ವತಿಯಿಂದ ನಗರದ ಪುರಭವನದಲ್ಲಿ ಶುಕ್ರವಾರ ನಡೆದ ‘ಅರಿಯಿರಿ ಮನುಕುಲದ ಪ್ರವಾದಿಯನ್ನು ಅಭಿಯಾನ’ದ ಸಮಾರೋಪ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡಿದರು.

ಭಾರತವು ದೇವರ ಮನೆಯಾಗಿದೆ. ಇಲ್ಲಿ ಎಲ್ಲಾ ಧರ್ಮೀಯರೂ ಕೂಡಿ ಬಾಳುತ್ತಿದ್ದಾರೆ. ಆದರೆ ರಾಜಕಾರಣಿಗಳು ತಮ್ಮ ಸ್ವಾರ್ಥಕ್ಕಾಗಿ ಧರ್ಮವನ್ನು ಒಡೆಯುತ್ತಿದ್ದಾರೆ. ದೇಶದ ಯಾವೊಬ್ಬ ಮುಸ್ಲಿಮನೂ ರಾಮಮಂದಿರ ನಿರ್ಮಾಣ ಬೇಡ ಎಂದದ್ದಿಲ್ಲ, ಟಿಪ್ಪು ಜಯಂತಿ ಬೇಕು ಎಂದದ್ದಿಲ್ಲ. ರಾಜಕೀಯ ಶಕ್ತಿಗಳಿಂದಲೇ ಇಂತಹ ಪ್ರಯತ್ನಗಳು ನಡೆಯುತ್ತಿದೆ. ರಾಜಕೀಯದಲ್ಲಿ ಧರ್ಮ ಇರಲಿ. ಆದರೆ ಯಾವ ಕಾರಣಕ್ಕೂ ಧರ್ಮದಲ್ಲಿ ರಾಜಕೀಯ ಬೆರೆಸಲು ಬಿಡಬಾರದು ಎಂದು ವಿಶ್ವಸಂತೋಷ ಭಾರತಿ ಸ್ವಾಮೀಜಿ ಕರೆ ನೀಡಿದರು.

ಎಲ್ಲಾ ಧರ್ಮದಲ್ಲೂ ದುಷ್ಟರಿದ್ದಾರೆ. ಮೊದಲು ಆಯಾ ಧರ್ಮೀಯರು ತಮ್ಮ ಧರ್ಮದ ತಿರುಳು ಅರಿತುಕೊಳ್ಳುವ ಪ್ರಯತ್ನ ಮಾಡಬೇಕು. ಇತಿಹಾಸದಲ್ಲಿ ಗತಿಸಿದ ದೌರ್ಜನ್ಯಗಳನ್ನು ಮುಂದಿನ ಜನಾಂಗಕ್ಕೆ ತಿಳಿಸಿಕೊಡುವುದರಿಂದ ಯಾವ ಪ್ರಯೋಜನವೂ ಇಲ್ಲ. ಮುಸ್ಲಿಮರು ತುಂಬಾ ಕೆಟ್ಟವರು, ಕ್ರೈಸ್ತರು ಸ್ವಲ್ಪ ಕೆಟ್ಟವರು, ಹಿಂದೂಗಳು ತುಂಬಾ ಒಳ್ಳೆಯವರು ಎಂಬ ಅಭಿಪ್ರಾಯ ಯಾವತ್ತೂ ಸರಿಯಲ್ಲ. ಮುಸ್ಲಿಮರು ಕೂಡ ಭಾರತೀಯರೇ ಅಗಿದ್ದಾರೆ. ಅವರ ಆರೋಗ್ಯ, ಶಿಕ್ಷಣದ ಕಡೆ ಹೆಚ್ಚಿನ ಗಮನ ಹರಿಸಬೇಕಿದೆ ಎಂದು ವಿಶ್ವಸಂತೋಷ ಭಾರತಿ ಸ್ವಾಮೀಜಿ ಅಭಿಪ್ರಾಯಪಟ್ಟರು.

ಮತ್ತೋರ್ವ ಅತಿಥಿ ಬಲ್ಮಠ ಕರ್ನಾಟಕ ಥಿಯೋಲೋಜಿಕಲ್ ಕಾಲೇಜಿನ ಪ್ರಾಂಶುಪಾಲ ರೆ.ಫ್ರೊ.ಎಚ್.ಎಂ.ವಾಟ್ಸನ್ ಮಾತನಾಡಿ ಯಾವ ಧರ್ಮವೂ ಶ್ರೇಷ್ಠವಲ್ಲ. ನನ್ನ ಧರ್ಮವೇ ಶ್ರೇಷ್ಠ ಎಂಬ ಭಾವನೆ ಬಂದರೆ ಅಪನಂಬಿಕೆ ಹೆಚ್ಚಾಗುತ್ತದೆ. ಇದರಿಂದ ಸಮಾಜದಲ್ಲಿ ಸಾಮರಸ್ಯ ಹದಗೆಡುತ್ತದೆ. ಎಲ್ಲಾ ಧರ್ಮಗಳ ಹಿಂದೆಯೂ ‘ದೇವರು’ ಎಂಬ ಪರಿಕಲ್ಪನೆ ಇದೆ. ಆ ದೇವರು ಒಬ್ಬನೇ ಆಗಿದ್ದಾನೆ. ಅದೇ ಅಂತಿಮ ಸತ್ಯವೂ ಆಗಿದೆ. ಧರ್ಮದ ತಿರುಳು ಅರಿತರೆ ಯಾವೊಬ್ಬನೂ ಮತಾಂಧನಾಗಲು ಸಾಧ್ಯವಿಲ್ಲ ಎಂದರು.

ಭಾರತವು ಎಲ್ಲರನ್ನೂ ಸ್ವೀಕರಿಸುವ ದೇಶವಾಗಿತ್ತು. ಆದರೆ ಇತ್ತೀಚಿನ ದಿನಗಳಲ್ಲಿ ದೇಶದಲ್ಲಿ ಸಹಬಾಳ್ವೆ ಮರೀಚಿಕೆಯಾಗು ತ್ತಿದೆ. ಧರ್ಮ, ಜಾತಿಯ ಹೆಸರಿನಲ್ಲಿ ವಿಭಜಿಸಲಾಗುತ್ತದೆ. ಧರ್ಮದ ನೆಲೆಯಲ್ಲಿ ವ್ಯಕ್ತಿಯ ಅಸ್ಮಿತೆಯನ್ನು ಪ್ರಶ್ನಿಸುವ ಕಾಲ ಎದುರಾಗುತ್ತಿವೆ. ದೇವರನ್ನು ಕಾಯುವವರು ನಾವು ಎಂಬ ಭಾವನೆ ಬಂದಿರುವುದೇ ಇದಕ್ಕೆ ಕಾರಣವಾಗಿದೆ. ಹಿಂದೂ, ಮುಸ್ಲಿಮ್, ಕ್ರೈಸ್ತರು ಸಕಾರಾತ್ಮಕ ವಿಚಾರಗಳ ಮೂಲಕ ಒಗ್ಗೂಡಿ ಬಾಳಬೇಕಿದೆ ಎಂದು ರೆ.ಫ್ರೊ.ಎಚ್.ಎಂ.ವಾಟ್ಸನ್ ಹೇಳಿದರು.

ಯುನಿವೆಫ್ ಕರ್ನಾಟಕದ ಅಧ್ಯಕ್ಷ ರಫೀಯುದ್ದೀನ್ ಕುದ್ರೋಳಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಸಮಾರೋಪ ಭಾಷಣ ಮಾಡಿದರು.

ವೇದಿಕೆಯಲ್ಲಿ ಅಭಿಯಾನದ ಸಹ ಸಂಚಾಲಕರಾದ ಆಸೀಫ್ ಕುದ್ರೋಳಿ ಮತ್ತು ಉಬೈದುಲ್ಲಾ ಬಂಟ್ವಾಳ ಹಾಗೂ ಯುನಿವೆಫ್ ಕೇಂದ್ರ ಸಮಿತಿಯ ಕಾರ್ಯದರ್ಶಿ ಬಿ.ಎಂ. ಬದ್ರುದ್ದೀನ್ ಉಪಸ್ಥಿತರಿದ್ದರು.

ಯುನಿವೆಫ್ ಉಳ್ಳಾಲ ಶಾಖೆಯ ಕಾರ್ಯದರ್ಶಿ ಉಮರ್ ಮುಕ್ತಾರ್ ಕಿರಾಅತ್ ಪಠಿಸಿದರು. ಅಭಿಯಾನದ ಸಂಚಾಲಕ ಸೈಫುದ್ದೀನ್ ಕುದ್ರೋಳಿ ಸ್ವಾಗತಿಸಿದರು. ಯುನಿವೆಫ್ ಪ್ರಧಾನ ಕಾರ್ಯದರ್ಶಿ ಯು.ಕೆ. ಖಾಲಿದ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಹುದೈಫ್ ಕುದ್ರೋಳಿ ಮತ್ತು ಫಝಲ್ ಉಳ್ಳಾಲ ಕಾರ್ಯಕ್ರಮ ನಿರೂಪಿಸಿದರು.

ಕಾರ್ಯಕ್ರಮದಲ್ಲಿ ಪಾಲ್ಗೊಳ್ಳದಂತೆ ಒತ್ತಡ: ಸ್ವಾಮೀಜಿಗಳೇ... ನೀವು ಹಿಂದುತ್ವದ ಬಗ್ಗೆ ಮಾತನಾಡಿದವರು. ಈವಾಗ ಮುಸ್ಲಿಮರ ಕಾರ್ಯಕ್ರಮಕ್ಕೆ ಹೋಗುತ್ತಿದ್ದೀರಿ. ಸುಮ್ಮನೆ ಸಮಸ್ಯೆಯನ್ನು ಮೈಮೇಲೆ ಎಳೆದುಕೊಳ್ಳಬೇಡಿ ಎಂದು ಹೇಳುವ ಮೂಲಕ ಕೆಲವರು ನನ್ನನ್ನು ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳದಂತೆ ಒತ್ತಡ ಹಾಕಿದ್ದರು. ‘ನಾನು ಮುಸ್ಲಿಮರ ಕಾರ್ಯಕ್ರಮಕ್ಕೆ ಹೋಗುತ್ತಿಲ್ಲ. ಮಂಗಳೂರಿಗರ ಸೌಹಾರ್ದ ಕಾರ್ಯಕ್ರಮಕ್ಕೆ ಹೋಗುತ್ತಿರುವೆ’ ಎನ್ನುವ ಮೂಲಕ ಅವರ ಒತ್ತಡವನ್ನು ನಿರ್ಲಕ್ಷಿಸಿದೆ ಎಂದು ವಿಶ್ವಸಂತೋಷ ಭಾರತಿ ಸ್ವಾಮೀಜಿ ಹೇಳಿದರು.

ನಮ್ಮ ಒಗ್ಗಟ್ಟು ಮುರಿಯಲು ಚೀನಾ, ಪಾಕಿಸ್ತಾನ, ಅಫ್ಘಾನಿಸ್ತಾನ, ಬಾಂಗ್ಲಾದೇಶ, ಅಮೆರಿಕಾ ಹೊಂಚು ಹಾಕುತ್ತಿವೆ. ಅದನ್ನು ಹಿಮ್ಮೆಟ್ಟಿಸಲು ಇಂತಹ ಸೌಹಾರ್ದ ಕಾರ್ಯಕ್ರಮದ ಅಗತ್ಯವಿದೆ. ಇದು ಕರ್ನಾಟಕಕ್ಕೆ ಸೀಮಿತಗೊಳ್ಳಕ್ಕೆ ದೇಶಾದ್ಯಂತ ವಿಸ್ತರಣೆಗೊಳ್ಳಬೇಕಿದೆ ಎಂದು ಸ್ವಾಮೀಜಿ ಆಶಿಸಿದರು.






















 


Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News