×
Ad

ಮುಲ್ಕಿ - ಮೂಡುಬಿದಿರೆ ಸರಕಾರಿ ಆಸ್ಪತ್ರೆಗೆ ಡಯಾಲಿಸಿಸ್ ಕೇಂದ್ರ: ಸಚಿವ ದಿನೇಶ್ ಗುಂಡೂರಾವ್

Update: 2023-12-22 22:32 IST

ಮಂಗಳೂರು: ಮುಲ್ಕಿ ಮತ್ತು ಮೂಡುಬಿದಿರೆ ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ಡಯಾಲಿಸಿಸ್ ಕೇಂದ್ರಗಳನ್ನು ಶೀಘ್ರದಲ್ಲೇ ತೆರೆಯಲಾಗುವುದು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ದ.ಕ. ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ.

ಬುಧವಾರ ಮುಲ್ಕಿ ಸರಕಾರಿ ಆಸ್ಪತ್ರೆಗೆ ಭೇಟಿ ನೀಡಿ ಅವರು ಮಾತನಾಡಿದರು.

ಮುಲ್ಕಿ ಸಮುದಾಯ ಆಸ್ಪತ್ರೆಗೆ ಈಗಾಗಲೇ ಎಂಆರ್‌ಪಿಎಲ್ ಸಂಸ್ಥೆಯು ಒಂದು ಡಯಾಲಿಸಿಸ್ ಯಂತ್ರವನ್ನು ನೀಡಿದೆ. ರಾಜ್ಯ ಸರಕಾರದಿಂದ ಎರಡು ಡಯಾಲಿಸಿಸ್ ಯಂತ್ರಗಳನ್ನು ನೀಡಲಾಗುವುದು. ಇದಕ್ಕಾಗಿ ಎರಡೂ ಆಸ್ಪತ್ರೆಗಳಿಗೆ ಅಗತ್ಯ ವೈದ್ಯರನ್ನು ಮತ್ತು ತಂತ್ರಜ್ಞರನ್ನು ನೇಮಿಸಲಾಗುವುದು ಎಂದು ಸಚಿವ ದಿನೇಶ್ ಗುಂಡೂರಾವ್ ಹೇಳಿದರು.

ಆಸ್ಪತ್ರೆಯಲ್ಲಿ ಡಯಾಬಿಟಿಸ್‌ಗೆ ಸಂಬಂಧಿಸಿದ ಎಲ್ಲ ಔಷಧಗಳನ್ನು ಸಂಗ್ರಹಿಸಿಡಬೇಕು. ಆಸ್ಪತ್ರೆಯ ಅಭಿವೃದ್ಧಿಗೆ ಬೇಕಾದ ಅನುದಾನ ನೀಡಲಾಗುವುದು. ಇಲ್ಲಿಗೆ ಮಕ್ಕಳು, ಸ್ತ್ರೀರೋಗ ತಜ್ಞರನ್ನು ನೇಮಿಸಬೇಕು ಎಂಬ ಬೇಡಿಕೆಯಿದೆ. ಈ ಬಗ್ಗೆ ಪರಿಶೀಲಿಸಲಾಗುವುದು. ಆಸ್ಪತ್ರೆಯ ಸಂಪೂರ್ಣ ಬಳಕೆಗೆ ಒತ್ತು ನೀಡಲಾಗುವುದು ಎಂದು ಸಚಿವ ದಿನೇಶ್ ಗುಂಡೂರಾವ್ ತಿಳಿಸಿದರು.

ಈ ಸಂದರ್ಭ ಶಾಸಕ ಉಮಾನಾಥ ಕೋಟ್ಯಾನ್, ಮಂಗಳೂರು ಉಪವಿಭಾಗಾಧಿಕಾರಿ ಹಷರ್ವರ್ಧನ್, ತಹಶೀಲ್ದಾರ್ ಪ್ರದೀಪ್ ಕುರ್ಡೇಕರ್ ಮತ್ತಿತರರು ಉಪಸ್ಥಿತರಿದ್ದರು.

ಮುಲ್ಕಿ ರಾ.ಹೆ. ಬಳಿ ನಿರ್ಮಾಣಗೊಳ್ಳುತ್ತಿರುವ ಪ್ರವಾಸಿ ಮಂದಿರ ನಿವೇಶನ ಮತ್ತು ಮುಲ್ಕಿ ಮಿನಿ ವಿಧಾನಸೌಧ ಕಾಮಗಾರಿಯನ್ನು ಸಚಿವರು ಪರಿಶೀಲಿಸಿದರು. ಅಲ್ಲದೆ ಮುಲ್ಕಿ ಪಟ್ಟಣ ಪಂಚಾಯತ್‌ನ ನೂತನ ಕಾರ್ಯಾಲಯ ನಿರ್ಮಾಣ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News