ಆದಿದ್ರಾವಿಡ ಸಮುದಾಯದ ಬೇಡಿಕೆ ಈಡೇರಿಕೆಗೆ ಪ್ರಯತ್ನ: ಗೃಹ ಸಚಿವ ಡಾ. ಪರಮೇಶ್ವರ್
ಮಂಗಳೂರು, ಡಿ.24: ಆದಿದ್ರಾವಿಡ ಸಮುದಾಯ ಭವನಕ್ಕೆ 5ಎಕರೆ ಜಮೀನು, ಡಿಸಿ ಮನ್ನಾ ಯೋಜನೆ ಭೂಮಿ ಮಂಜೂರು, ಮೂಲಸ್ಥಾನದ ಅಭಿವೃದ್ಧಿಗೆ ಮುಂದಿನ ಬಜೆಟ್‌ನಲ್ಲಿ ಸರಕಾರದಿಂದ ಅನುದಾನ ಒದಗಿಸುವ ಮೂಲಕ ಸಮುದಾಯದ ಬೇಡಿಕೆಗಳ ಈಡೇರಿಕೆಗೆ ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಗೃಹ ಸಚಿವ ಡಾ.ಜಿ. ಪರಮೇಶ್ವರ್ ಹೇಳಿದ್ದಾರೆ.
ಕರ್ನಾಟಕ ರಾಜ್ಯ ಆದಿ ದ್ರಾವಿಡ ಸಮಾಜ ಸೇವಾ ಸಂಘದ ವತಿಯಿಂದ ನಗರದ ಪುರಭವನದಲ್ಲಿ ರವಿವಾರ ನಡೆದ ತುಳು ಭಾಷಿಕರಾದ ಆದಿ ದ್ರಾವಿಡ ಸಮುದಾಯದ ಹಲವು ಬೇಡಿಕೆಗಳ ಈಡೇರಿಕೆಗಾಗಿ ರಾಜ್ಯ ಆದಿ ದ್ರಾವಿಡ ಸಮಾವೇಶ 2023ರಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಸಮುದಾಯದ ಇತರ ಪ್ರಮುಖ ಬೇಡಿಕೆಗಳಲ್ಲಿ ಒಂದಾದ ಆದಿದ್ರಾವಿಡ ಜಾತಿಗಳ ಮಧ್ಯೆ ಇರುವ ಗೊಂದಲ ನಿವಾರಣೆಗೆ ಉಪಜಾತಿ ಮಾಡಲು ಚಿಂತನೆ, ಜಾತಿ ಪ್ರಮಾಣಪತ್ರ ಸರಳಗೊಳಿಸಲು ಪ್ರಯತ್ನ, ವಸತಿ ನಿರ್ಮಾಣಕ್ಕೆ ಸರಕಾರಿ ಜಾಗ ಮೀಸಲಿಡಲು ಜಿಲ್ಲಾಧಿಕಾರಿಗಳಿಗೆ ಸೂಚನೆ, ಸರಕಾರದ ಖಾಲಿಹುದ್ದೆ ಭರ್ತಿ ನೀಡಲು ಅವಕಾಶ, ಆದಿ ದ್ರಾವಿಡ ಸಮುದಾಯದ ಒಬ್ಬ ವ್ಯಕ್ತಿಯನ್ನು ನಿಗಮ ಮಂಡಳಿಗೆ ನೇಮಿಸುವ ಭರವಸೆಯನ್ನೂ ಅವರು ಈಸಂದರ್ಭ ನೀಡಿದರು.
ಆದಿದ್ರಾವಿಡ ಶೋಷಿತ ಸಮುದಾಯವಾಗಿದ್ದು, ವರ್ಣಾಶ್ರಮ ಧರ್ಮ ವರ್ಗೀಕರಣದಿಂದ ಶೂದ್ರ, ಅತಿ ಶೂದ್ರರಾಗಿ ವರ್ಗಿಕರಿಸಿ, ಕೀಳುಮಟ್ಟದಲ್ಲಿ ನೋಡಿಕೊಳ್ಳಲಾಗುತ್ತಿದೆ. ಸ್ವಾತಂತ್ರ್ಯ ಬಂದು 76 ವರ್ಷಗಲ ಬಳಿಕವೂ ಜಾತಿಯ ವ್ಯವಸ್ಥೆ, ಅಸಮಾನತೆಯನ್ನು ಕಾಣುತ್ತಿದ್ದೇವೆ. ಇನ್ನೆಷ್ಟು ವರ್ಷ ಕಾಯಬೇಕು ಗೊತ್ತಿಲ್ಲ. ಕೀಳರಿಮೆ ತೊಡೆದುಹಾಕಬೇಕು. ಇದಕ್ಕಾಗಿ ಒಂದು ಹೊತ್ತು ಊಟ ಬಿಟ್ಟಾದರೂ ಮನೆ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡುವ ಸಂಕಲ್ಪ ಮಾಡಬೇಕು. ಆಧುನಿಕ ಜಗತ್ತಿನ ಜತೆಜತೆಯಾಗಿ ನಾವು ಬೆಳೆಯಬೇಕು ಎಂದು ಅವರು ಸಮುದಾಯಕ್ಕೆ ಕಿವಿಮಾತು ಹೇಳಿದರು.
ಮಂಗಳೂರು ದಕ್ಷಿಣ ಕ್ಷೇತ್ರದ ಶಾಸಕ ಡಿ. ವೇದವ್ಯಾಸ ಕಾಮತ್ ಮಾತನಾಡಿ, ಸಂವಿಧಾನ ಶಿಲ್ಪಿ ಡಾ. ಅಂಬೇಡ್ಕರ್ ಅವರು ನೀಡಿದ ಸಂವಿಧಾನದಿಂದಾಗಿ ಇವತ್ತು ದ್ರೌಪದಿ ಮುರ್ಮು ರಾಷ್ಟ್ರಪತಿಯಾಗಿ, ಸುಳ್ಯದಲ್ಲಿ ಭಾಗೀರಥಿ ಮುರುಳ್ಯ ಶಾಸಕರಾಗಿ ಕಾಣಲು ಸಾಧ್ಯವಾಗಿದೆ. ಒಗ್ಗಟಾಗಿದ್ದರೆ ಮಾತ್ರವೇ ರಾಜಕೀಯ ಸೇರಿಂದೆ ಸಮುದಾಯ ಅಭಿವೃದ್ಧಿಗೆ ಪೂರಕವಾಗಲಿದೆ. ಈ ನಿಟ್ಟನಲ್ಲಿ ಇಂತಹ ಸಮಾವೇಶಗಳು ನಿರಂತರವಾಗಿ ನಡೆಯಬೇಕು ಎಂದು ಅವರು ಹೇಳಿದರು.
ಸಂಘದ ರಾಜ್ಯಾಧ್ಯಕ್ಷ ಶಿವಾನಂದ ಬಳ್ಳಾಲ್ ಬಾಗ್ ಅವರು ಅಧ್ಯಕ್ಷತೆ ವಹಿಸಿದ್ದರು. ಶಾಸಕರಾದ ಭಾಗೀರಥಿ ಮುರುಳ್ಯ, ಹರೀಶ್ ಪೂಂಜ, ಮೇಯರ್ ಸುಧೀರ್ ಶೆಟ್ಟಿ ಕಣ್ಣೂರು, ವಿಧಾನ ಪರಿಷತ್ ಸದಸ್ಯರಾದ ಹರೀಶ್ ಕುಮಾರ್, ಮಂಜುನಾಥ ಭಂಡಾರಿ, ಮಾಜಿ ಸಚಿವ ಬಿ. ರಮಾನಾಥ ರೈ, ಮಾಜಿ ಶಾಸಕ ಜೆ.ಆರ್. ಲೋಬೋ, ವಿಧಾನ ಪರಿಷತ್ ಮಾಜಿ ಸದಸ್ಯ ಐವನ್ ಡಿಸೋಜಾ, ಪಾಲಿಕೆ ಮುಖ್ಯ ಸಚೇತಕ ಪ್ರೇಮಾನಂದ ಶೆಟ್ಟಿ, ಮನಪಾ ಪ್ರತಿಪಕ್ಷ ನಾಯಕ ಪ್ರವೀಣ್‌ಚಂದ್ರ ಆಳ್ವ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮಿಥುನ್ ರೈ, ಪಾಲಿಕೆ ಸದಸ್ಯರಾದ ಭರತ್ ಕುಮಾರ್ ಎಸ್., ಮನೋಜ್ ಕೋಡಿಕಲ್, ಜಿ.ಪಂ. ಮಾಜಿ ಅಧ್ಯಕ್ಷ ಸೋಮನಾಥ್ ಉಪ್ಪಿನಂಗಡಿ, ಜಿಪಂ ಮಾಜಿ ಸದಸ್ಯ ಶೇಖರ ಕುಕ್ಕೇಡಿ, ಬಂಟ್ವಾಳ ಪುರಸಭೆ ಸದಸ್ಯ ಜನಾರ್ದನ ಚೆಂಡ್ತಿಮಾರ್, ಸಂಘದ ದ.ಕ ಜಿಲ್ಲಾಧ್ಯಕ್ಷ ಶ್ರೀನಿವಾಸ್ ಅರ್ಬಿಗುಡ್ಡೆ, ಉಡುಪಿ ಜಿಲ್ಲಾಧ್ಯಕ್ಷ ಶೇಖರ ಕೌಡೂರು, ಚಿಕ್ಕಮಗಳೂರು ಜಿಲ್ಲಾಧ್ಯಕ್ಷ ಸುರೇಶ್ ಕೊಪ್ಪ, ಹಾಸನ್ ಜಿಲ್ಲಾಧ್ಯಕ್ಷ ರವಿ ನಾರಾಯಣ್, ಕಾಸರಗೋಡು ಜಿಲ್ಲಾಧ್ಯಕ್ಷ ಗುಣಪಾಲ್, ಮೂಡುಬಿದಿರೆ ತೋಡಾರು ಕಾನದ ಕಟದ ಮೂಲ ಕ್ಷೇತ್ರ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಶಿವರಾಜ್ ಪಿ.ಬಿ., ಪ್ರಮುಖರಾದ ಶ್ರೀನಿವಾಸ್ ಕಾರ್ಲ, ಮೋಹನ್ ನೆಲ್ಲಿಗುಂಡಿ ಪುತ್ತೂರು, ಬಾಬು ಜಾಲ್ಸೂರು, ಉಷಾ ಮತ್ತಿತರರರು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಶಾಸಕಿ ಭಾಗೀರಥಿ ಮುರುಳ್ಯ ಅವರನ್ನು ಸನ್ಮಾನಿಸಲಾಯಿತು. ಈ ಸಂದರ್ಭ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕ್ಷೇತ್ರದಲ್ಲಿ ಸಾಧನೆ ಮಾಡಿದ ಆದಿದ್ರಾವಿಡ ಸಮಾಜದ ಸಾಧಕರನ್ನು ಗೌರವಿಸಲಾಯಿತು.
ರಾಜ್ಯ ಸಂಘಟನಾ ಸಂಚಾಲಕ ಪ್ರೇಮನಾಥ ಬಳ್ಳಾಲ್‌ಬಾಗ್ ಸ್ವಾಗತಿಸಿದರು. ರೋಹಿತ್ ಉಳ್ಳಾಲ್ ಕಾರ್ಯಕ್ರಮ ನಿರೂಪಿಸಿದರು. ಸಿದ್ಧಾಥ್ ಮತ್ತು ಬಳಗ ಪ್ರಾರ್ಥಿಸಿದರು.
ಬೃಹತ್ ಟಿವಿ ಪರದೆ ವ್ಯವಸ್ಥೆ
ರಾಜ್ಯದ ಆರು ಜಿಲ್ಲೆಗಳಿಂದ ಸಾವಿರಾರು ಸಂಖ್ಯೆಯಲ್ಲಿ ಭಾಗವಹಿಸಿದ್ದ ಆದಿದ್ರಾವಿಡ ಸಮುದಾಯ ಸಭಾ ಕಾರ್ಯಕ್ರಮಕ್ಕೂ ಮೊದಲು ಟಾಗೋರ್ ಪಾರ್ಕ್‌ನಿಂದ ಕುದ್ಮುಲ್ ರಂಗರಾವ್ ಪುರಭವನದವರೆಗೆ ಮೆರವಣಿಗೆ ನಡೆಯಿತು. ಬಳಿಕ ಸಮುದಾಯದ ಮುಖಂಡರು ಪುರಭವನದ ಮುಂಭಾಗದಲ್ಲಿರುವ ಡಾ.ಬಿ.ಆರ್.ಅಂಬೇಡ್ಕರ್ ಅವರ ಪ್ರತಿಮೆಗೆ ಮಾಲಾ ರ್ಪಣೆ ಮಾಡಿದರು. ಸಾವಿರಾರು ಸಂಖ್ಯೆಯಲ್ಲಿ ಸಮುದಾಯ ಜನರು ಸೇರಿದ್ದ ಕಾರಣ ಪುರಭವನದ ಹೊರಭಾಗದ ಇಕ್ಕೆಲಗಳಲ್ಲಿ ಆಸನದ ವ್ಯವಸ್ಥೆಯೊಂದಿಗೆ ಸಭಾ ಕಾರ್ಯಕ್ರಮ ವೀಕ್ಷಣೆಗೆ ಬೃಹತ್ ಟಿವಿ ಪರದೆಯ ವ್ಯವಸ್ಥೆ ಮಾಡಲಾಗಿತ್ತು. ಆರಂಭದಲ್ಲಿ ಅತಿಥಿಗಳಿಂದ ಸಮುದಾಯದ ಕುಲದೈವ ಸತ್ಯಸಾರಮಾಣಿ ಹಾಗೂ ಅಂಬೇಡ್ಕರ್ ಭಾವಚಿತ್ರಕ್ಕೆ ಮಾಲಾರ್ಪಣೆ, ಪುಷ್ಪಾರ್ಚನೆಯೊಂದಿಗೆ ಸಭಾ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.
"ಆದಿದ್ರಾವಿಡ, ಪರಿಶಿಷ್ಟ ಜಾತಿ-ಪಂಗಡದ ಪ್ರತಿ ಮನೆಯ ಮಕ್ಕಳಿಗೂ ಉತ್ತಮ ಶಿಕ್ಷಣ ಸಿಕ್ಕರೆ ಮಾತ್ರ ಸಮುದಾಯದ ಏಳಿಗೆ ಸಾಧ್ಯ. ಹಾಗಾಗಿ ಪ್ರತಿಮನೆಯಲ್ಲೂ ಈ ಬಗ್ಗೆ ಸಂಕಲ್ಪ ಮಾಡಬೇಕಾಗಿದೆ. ಡಾ. ಅಂಬೇಡ್ಕರ್ ಅವರು ಸಂವಿಧಾನದಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡಕ್ಕೆ ಮೀಸಲಾತಿ ನೀಡದೇ ಹೋಗುತ್ತಿದ್ದರೆ ನಮ್ಮ ಸಮುದಾಯದ ಪರಿಸ್ಥಿತಿ ಮತ್ತಷ್ಟು ಹದಗೆಡುತ್ತಿತ್ತು. ಬಸವಣ್ಣ, ಬುದ್ಧ ಜಾತಿ ವ್ಯವಸ್ಥೆ ವಿರುದ್ಧ ಪ್ರತಿಪಾದನೆ ಮಾಡಿದರೂ ಈಗಿನ ಕಾಲದಲ್ಲೂ ಅಸಮಾನತೆ ಕಾಣುತ್ತಿದ್ದೇವೆ. ಈ ಕಾರಣದಿಂದ ನಾವು ಶಿಕ್ಷಣದಿಂದ ಮಾತ್ರ ಸಮಾಜದಲ್ಲಿ ಎದ್ದು ನಿಲ್ಲಲು ಸಾಧ್ಯ".
-ಡಾ. ಜಿ. ಪರಮೇಶ್ವರ್, ಗೃಹ ಸಚಿವರು.