ಕಲ್ಲಡ್ಕ ಪ್ರಭಾಕರ್ ಭಟ್ ವಿರುದ್ಧ ಪ್ರತಿಭಟನೆಗೆ ಅವಕಾಶ ಯಾಕಿಲ್ಲ ?: ಡಿವೈಎಫ್‌ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ
ಕಲ್ಲಡ್ಕ ಪ್ರಭಾಕರ್ ಭಟ್ - ಮುನೀರ್ ಕಾಟಿಪಳ್ಳ
ಮಂಗಳೂರು: ಕಲ್ಲಡ್ಕ ಪ್ರಭಾಕರ ಭಟ್ ದ್ವೇಷ ಭಾಷಣ ಖಂಡಿಸಿ ಶಾಂತಿಯುತವಾಗಿ, ಸಾಂಕೇತಿಕ ಪ್ರತಿಭಟನೆ ನಡೆಸಿದ ಡಿವೈಎಫ್‌ಐ ಕಾರ್ಯಕರ್ತರ ಮೇಲೆ ಉಳ್ಳಾಲ ಠಾಣಾ ಪೊಲೀಸರು ಸ್ವಯಂಪ್ರೇರಿತ ಪ್ರಕರಣ ದಾಖಲಿಸಿರುವುದು ಅಚ್ಚರಿ ಮೂಡಿಸಿದೆ. ಕಲ್ಲಡ್ಕ ಭಟ್ ಭಾಷಣ ಖಂಡಿಸಿ ಜಿಲ್ಲೆಯಲ್ಲಿ ಪ್ರತಿಭಟನೆಗಳಿಗೆ ಅನುಮತಿ ನಿರಾಕರಿಸಲಾಗುತ್ತಿದೆ. ರಾಜಧಾನಿ ಬೆಂಗಳೂರು ಸಹಿತ ಉಳಿದ ಹಲವು ಜಿಲ್ಲೆಗಳಲ್ಲಿ ಪ್ರತಿಭಟನೆಗೆ ಪೊಲೀಸ್ ಇಲಾಖೆ ಅನುಮತಿ ನೀಡಿದೆ. ಮಂಡ್ಯದಲ್ಲಿ ಎಸ್ಪಿ ಕಚೇರಿ ಮುಂಭಾಗವೇ ಪ್ರತಿಭಟನೆ ನಡೆಸಲಾಗಿದೆ. ಉಳ್ಳಾಲದಲ್ಲಿ ಮಾತ್ರ ಧ್ವನಿವರ್ಧಕವನ್ನೂ ಬಳಸದೆ, ಸಾಂಕೇತಿಕವಾಗಿ ನಡೆಸಿದ ಪ್ರತಿಭಟನಾಕಾರರ ಮೇಲೆ ಎಫ್‌ಐಆರ್ ದಾಖಲಿಸಿರುವುದು ಯಾಕೆ ಎಂದು ಡಿವೈಎಫ್‌ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ ಪ್ರಶ್ನಿಸಿದ್ದಾರೆ.
ಜಿಲ್ಲೆಯ ಮಟ್ಟಿಗೆ ಹೇಳುವುದಾದರೆ ಮಂಗಳೂರು (ಉಳ್ಳಾಲ) ವಿಧಾನ ಸಭಾ ಕ್ಷೇತ್ರದಲ್ಲಿ ಮಾತ್ರ ಕಾಂಗ್ರೆಸ್ ಸ್ಪಷ್ಟವಾದ ಗೆಲುವು ಸಾಧಿಸಿದೆ. ಕ್ಷೇತ್ರದ ಶಾಸಕ ಯುಟಿ ಖಾದರ್ ಹಾಲಿ ಸ್ಪೀಕರ್ ಆಗಿದ್ದು, ಪ್ರಭಾವಿ ಸ್ಥಾನದಲ್ಲಿದ್ದಾರೆ. ಅದೇ ಕ್ಷೇತ್ರ ವ್ಯಾಪ್ತಿಯ ಉಳ್ಳಾಲ ಠಾಣೆಯಲ್ಲಿ ಈ ಪ್ರಕರಣ ದಾಖಲಾಗಿರುವುದು ಆಶ್ಚರ್ಯ ಹುಟ್ಟಿಸಿದೆ. ಹಿರಿಯ ಕಮ್ಯುನಿಸ್ಟ್ ನಾಯಕ ಕೃಷ್ಣಪ್ಪ ಸಾಲ್ಯಾನ್‌ರ ಹೆಸರನ್ನೂ ಎಫ್‌ಐಆರ್‌ನಲ್ಲಿ ಸೇರಿಸಲಾಗಿದೆ. ಖಾದರ್ ಪ್ರತಿನಿಧಿಸುವ ಕ್ಷೇತ್ರದಲ್ಲಿಯೇ ಕೋಮುವಾದಿಗಳ ವಿರುದ್ಧ ಸಾಂಕೇತಿಕವಾಗಿಯೂ ಧ್ವನಿ ಎತ್ತಬಾರದು ಎಂದು ಪೊಲೀಸರು ಆದೇಶಿಸುವುದು, ಜಾತ್ಯತೀತರ ಧ್ವನಿಗಳನ್ನು ದಮನಿಸುವುದು ಎಂದಾದ ಮೇಲೆ ಅವಿಭಜಿತ ದ.ಕ. ಜಿಲ್ಲೆಯ ಉಳಿದ 12 ಕ್ಷೇತ್ರಗಳ ಸ್ಥಿತಿ ಹೇಗಿರಬಹುದು? ಪೊಲೀಸರ ಅತಿರೇಕ, ಕೋಮುವಾದಿ ಪರವಾದ ನಡೆಯ ಕುರಿತು ಯುಟಿ ಖಾದರ್ ಗಮನಿಸಬೇಕು. ತನ್ನ ಕ್ಷೇತ್ರದ ಅಲ್ಪಸಂಖ್ಯಾತರ, ಜಾತ್ಯತೀತರ, ನಾಗರಿಕರ ಹಕ್ಕುಗಳಿಗೆ ಚ್ಯುತಿಯಾಗದಂತೆ ನೋಡಿಕೊಳ್ಳುವ ಜವಾಬ್ದಾರಿ ಹೊರಬೇಕು ಎಂದು ಮುನೀರ್ ಕಾಟಿಪಳ್ಳ ಒತ್ತಾಯಿಸಿದ್ದಾರೆ.
ಮಂಗಳೂರು ಕಮೀಷನರೇಟ್ ಪ್ರತ್ಯೇಕ ರಾಜ್ಯವೆ? ಕಲ್ಲಡ್ಕ ಭಟ್ಟರ ವಸಾಹತೆ? ಪೊಲೀಸರ ಈ ಕ್ರಮದ ಬಗ್ಗೆ ರಾಜ್ಯ ಸರಕಾರ, ಕಾಂಗ್ರೆಸ್ ಪಕ್ಷ ಉತ್ತರಿಸುತ್ತದೆಯೆ? ಕೋಮುವಾದಿ ದ್ವೇಷ ಭಾಷಣಕಾರರಿಗೊಂದು ನ್ಯಾಯ ಮತ್ತು ಬಡವರ, ಕಾರ್ಮಿಕರ, ಅಲ್ಪಸಂಖ್ಯಾತರ, ನ್ಯಾಯದ ಪರ ಇರುವ ರಾಜಕೀಯ ಕಾರ್ಯಕರ್ತರಿಗೊಂದು ನ್ಯಾಯವೇ ಎಂದು ಮುನೀರ್ ಕಾಟಿಪಳ್ಳ ಪ್ರಶ್ನಿಸಿದ್ದಾರೆ.