×
Ad

ಎಚ್‌ಪಿಸಿಎಲ್‌ ಗ್ಯಾಸ್‌ ಲಾರಿ ಫಿಲ್ಲಿಂಗ್‌ ನೌಕರರ ಸಂಬಳ ಕಡಿತಕ್ಕೆ ಲಾರಿ ಮಾಲಕರ ನಿರ್ಧಾರ: ಟ್ಯಾಂಕರ್‌ ತಡೆದು ನೌಕರರಿಂದ ಧರಣಿ

Update: 2024-01-08 22:53 IST

ಸುರತ್ಕಲ್‌: ಇಲ್ಲಿನ ಹಿಂದೂಸ್ತಾನ್‌ ಪೆಟ್ರೋ ಕೆಮಿಕಲ್‌ ಲಿಮಿಟೆಡ್‌ನ ಸುಮಾರು 600ಕ್ಕೂ ಹೆಚ್ಚಿನ ಗ್ಯಾಸ್‌ ಫಿಲ್ಲಿಂಗ್‌ ನೌಕರರು, ಲಾರಿ ಮಾಲಕರ ಅಸೋಸಿಯೇಷನ್‌ ವಿರುದ್ಧ ಟ್ಯಾಂಕರ್‌ ಗಳನ್ನು ತಡೆದು ಧರಣಿ ಆರಂಭಿದ್ದಾರೆ.

ಎಚ್ಪಿಸಿಎಲ್‌ ನಲ್ಲಿ ಗ್ಯಾಸ್‌ ಟ್ಯಾಂಕರ್ಗಳನ್ನು ಸಾಗಾಟ ಮಾಡುವ ಲಾರಿಗಳಿಗೆ ಕಡ್ಡಾಯವಾಗಿ ಕ್ಲೀನರ್‌ಗಳಿರಬೇಕೆಂಬುದು ಎಚ್‌ಪಿಸಿಎಲ್‌ ನಿಯಮ. ಈ ನಿಯಮದಂತೆ ಸ್ಥಳೀಯರು ಸುಮಾರು 25 ವರ್ಷಗಳಿಂದ ಕ್ಲೀನರ್ ಗಳಾಗಿ ಸುಮಾರು 600ಕ್ಕೂ ಹೆಚ್ಚಿನ ನೌಕರರು ಗ್ಯಾಸ್‌ ಸಾಗಾಟದ ಟ್ಯಾಂಕರ್ ಗಳಲ್ಲಿ ಕ್ಲೀನರ್‌ ಗಳಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. ನೌಕರರಿಗೆ ವಾರಕ್ಕೆ ಎರಡು ದಿನ ಕೆಲಸವಿರುತ್ತದೆ. ಪ್ರತೀ ಲೋಡಿಂಗ್‌ಗೆ 1500 ರೂ. ನೀಡಲಾಗುತ್ತಿತ್ತು. ಕಳೆದ ಶನಿವಾರ ಲಾರಿ ಮಾಲಕರ ಅಸೋಸಿಯೇಷನ್‌ ನವರು, ನಮಗೆ ಕ್ಲೀನರ್‌ ಗಳು ಬೇಡ ಎಂದು ಎಚ್‌ಪಿಸಿಎಲ್‌ಗೆ ಮನವಿ ಮಾಡಿ ದ್ದಾರೆ. ಆದರೆ, ಕ್ಲೀನರ್‌ಗಳಿಲ್ಲದೆ ಟ್ಯಾಂಕರ್‌ ಗಳಿಗೆ ಲೋಡ್‌ ಮಾಡಲು ಸಾಧ್ಯವಿಲ್ಲ ಎಂದು ಅಲ್ಲಿನ ಅಧಿಕಾರಿಗಳು ಹೇಳಿದ್ದಾರೆ ಎಂದು ತಿಳಿದು ಬಂದಿದೆ.

ಬಳಿಕ ನೌಕರರು ಶಾಸಕ ಭರತ್‌ ಶೆಟ್ಟಿ ಅವರನ್ನು ಭೇಟಿ ಯಾಗಿ ಮನವಿ ಸಲ್ಲಿಸಿದ್ದು, ಶಾಸಕರ ನೇತೃತ್ವದಲ್ಲಿ ಎಚ್ ಪಿಸಿಎಲ್‌ ಅಧಿಕಾರಿಗಳು, ನೌಕರರು ಮತ್ತು ಲಾರಿ ಮಾಲಕರ ಅಸೋಸಿಯೇಷನ್‌ ಮುಖಂಡರ ನಡುವೆ ಸಭೆ ನಡೆದಿತ್ತು. ಈ ವೇಳೆ ಲಾರಿ ಮಾಲಕರು ಲೋಡಿಂಗ್‌ ವೇಳೆ ಇರುವ ಪ್ರತೀ ನೌಕರನಿಗೆ 500 ರೂ. ನೀಡಲಾಗುವುದು ಎಂದು ಪಟ್ಟು ಹಿಡಿದ್ದಾರೆ ಎಂದು ಧರಣಿ ನಿರತರು ಆರೋಪಿಸಿದ್ದಾರೆ.

ವಾರ್ತಾಭಾರತಿಯ ಜೊತೆ ಮಾತನಾಡಿದ ಧರಣಿ ನಿರತ ನೌಕರರು, ಕಳೆದ 25 ವರ್ಷಗಳಿಂದ ನಾವು ಇಲ್ಲಿ ಲೋಡಿಂಗ್‌ ಕೆಲಸ ಮಾಡುತ್ತಿದ್ದೇವೆ. ನಾವು ಸುಮಾರು 600 ಮಂದಿ ನೌಕರರಿದ್ದೇವೆ. ಲಾರಿ ಮಾಲಕರ ಅಸೋಸಿಯೇಷನ್‌ನ ನಿರ್ಧಾ ರದ ವಿರುದ್ಧ ಪ್ರತಿಭಟನೆ ಮಾಡಿ ಶಾಸಕ ಭರತ್‌ ಶೆಟ್ಟಿ, ಸಂಸದ ನಳಿನ್‌ ಕುಮಾರ್‌ ಕಟೀಲ್‌ ಅವರಿಗೆ ದೂರು ನೀಡಿದ್ದೆವು. ಅವರು ತುರ್ತಾಗಿ ಸಭೆ ನಡೆಸಿದ್ದು, ಅದಕ್ಕೂ ಲಾರಿ ಮಾಲಕರು ಸ್ಪಂದಿಸಿಲ್ಲ. ನಮಗೆ ನ್ಯಾಯ ಸಿಗುವವರೆಗೆ ಹೋರಾಟ ನಡೆಸಲಿದ್ದೇವೆ. ಮತ್ತು ಲಾರಿಗಳಿಗೆ ಲೋಡ್‌ ಮಾಡಲು ನಾವು ಬಿಡುವುದಿಲ್ಲ ಎಂದು ಧರಣಿನಿರತರು ಎಚ್ಚರಿಕೆ ನೀಡಿದ್ದಾರೆ.

ನಮಗೆ ಈಗ ಲಾರಿ ಮಾಲಕರ ಅಸೋಸಿಯೇಷನ್‌ ನವರು ತೊಂದರೆ ನೀಡುತ್ತಿದ್ದಾರೆ. ಸೋಮವಾರ ಬಂದು ಮಂಗಳವಾರದಿಂದ ಕ್ಲೀನರ್ ಇಲ್ಲದೆ ಲಾರಿಗಳನ್ನು ಲೋಡ್‌ ಮಾಡಲು ಅವಕಾಶ ನೀಡಬೇಕೆಂದು ಎಚ್ಪಿಸಿಎಲ್‌ ಗೆ ಮನವಿ ಸಲ್ಲಿಸಿದ್ದರು. ಈ ಬಗ್ಗೆ ಶಾಸಕರು ಮತ್ತು ಸಂಸದರು ನೌಕರರ ಪರವಾಗಿದ್ದೇವೆ. ಯಾವುದೇ ಕಾರಣಕ್ಕೂ ಅನ್ಯಾಯ ಆಗಲು ಬಿಡುವುದಿಲ್ಲ ಎಂದು ಭರವಸೆ ನೀಡಿದ್ದಾರೆ. ಅವರ ಭರವಸೆಯ ಮೇರೆಗೆ ನಾವು ಯಾವುದೇ ಅಹಿತಕರ ಘಟನೆಗಳಿಗೆ ಆಸ್ಪದ ನೀಡದೆ ಶಾಂತ ರೀತಿಯಿಂದ ಧರಣಿ ಸತ್ಯಾಗ್ರಹ ಮಾಡುತ್ತಿದ್ದೇವೆ. ಈ ಹಿಂದಿನಂತೆ ವಾರಕ್ಕೆ ಎರಡು ಕೆಲಸ ನೀಡಿ ದರೂ ಸಾಕು, ನಮ್ಮ ಸಂಬಳವನ್ನು 1,500 ರೂ. ನೀಡಬೇಕು ಎಂಬುವುದು ನಮ್ಮ ಬೇಡಿಕೆ ಎಂದು ಧರಣಿ ನಿರತರು ಆಗ್ರಹಿಸಿದ್ದಾರೆ.

"ಸಾಧಾರಣ 10 - 15 ದಿನಗಳಿಂದ ನಾನು ಕೆಲಸ ಮಾಡುತ್ತಿದ್ದೇನೆ. ವಾರಕ್ಕೆ ಎರಡು ಲಾರಿಗಳಿಗೆ ಲೋಡ್‌ ಮಾಡುತ್ತಿ ದ್ದೆವು. ಆದರೆ ಈಗ ಲಾರಿ ಮಾಲಕರು ಬಂದು ಕ್ಲೀನರ್ಗಳಿಗೆ 500 ರೂ. ನೀಡುವುದೆಂದು ಹೇಳುತ್ತಿದ್ದಾರೆ. ನಾವು ಇಲ್ಲಿ 600 ಮಂದಿ ನೌಕರರು ಕೆಲಸ ಮಾಡುತ್ತಿದ್ದೇವೆ. ನಮ್ಮ ಕುಟುಂಬ ಈ ಕೆಲಸವನ್ನು ನಂಬಿ 600 ಕುಟುಂಬಗಳು ಜೀವನ ಸಾಗಿಸು ತ್ತಿವೆ. ಈಗ ಕ್ಲೀನರ್ಗಳು ಬೇಡ ಎನ್ನುತ್ತಿದ್ದಾರೆ. ತಮಿಳು ನಾಡಿನಿಂದಲೇ ಕ್ಲೀನರ್‌ ಗಳನ್ನು ತರುತ್ತೇವೆ ಎಂದು ಲಾರಿ ಮಾಲಕರು ಹೇಳುತ್ತಿದ್ದಾರೆ. ಎಲ್ಲಿಯವರೋ ಇಲ್ಲಿಗೆ ಬಂದು ಕೆಲಸ ಮಾಡುವುದಾದರೆ, ನಾವು ಸ್ಥಳೀಯರು ಎಲ್ಲಗೆ ಕೆಲಸಕ್ಕೆ ಹೋಗಬೇಕು. ಈ ಬಗ್ಗೆ ಜಿಲ್ಲಾಡಳಿತ, ಶಾಸಕರು, ಸಂಸದರು ಸ್ಥಳೀಯ ನೌಕರ ಜೊತೆ ನಿಂತು ನಮಗೆ ನ್ಯಾಯ ಒದಗಿಸಿಕೊಡಬೇಕು".

- ಜಗನ್ನಾಥ, ಸ್ಥಳೀಯ ಟ್ಯಾಂಕರ್‌ ಫಿಲ್ಲಿಂಗ್‌ ನೌಕರ‌

"ಹಿಂದಿನಂತೆ ನಮಗೆ ಲೋಡಿಂಗ್‌ ಗೆ ಅವಕಾಶ ನೀಡಬೇಕು. ನಾವು ಬಾಡಿಗೆ ಮನೆಗಳಿಲ್ಲಿ ವಾಸ ಮಾಡಿಕೊಂಡು ಇದ ರಿಂದಲೇ ಜೀವನ ಮಾಡುತ್ತಿರುವವರು. ಲಾರಿ ಮಾಲಕರ ನಿರ್ಧಾರರದಿಂದ ನಮ್ಮ ಜೀವನ ಕಷ್ಟವಾಗುತ್ತಿದೆ".

- ಸದಾಶಿವ, ಸ್ಥಳೀಯ ಟ್ಯಾಂಕರ್‌ ಫಿಲ್ಲಿಂಗ್‌ ನೌಕರ‌

ನಾವು 600 ಮಂದಿ ಇಲ್ಲಿ ಕೆಲಸ ಮಾಡುತ್ತಿದ್ದೇವೆ. ಏಕಾಏಕಿಯಾಗಿ ತಮಿಳುನಾಡಿದ ಲಾರಿ ಮಾಲಕರು ನಮ್ಮನ್ನು ಕೆಲಸದಿಂದ ತೆಗೆಯಲು ಬಂದಿದ್ದರು. ನಮ್ಮ ನ್ಯಾಯಯುತವಾದ ಬೇಡಿಕೆಗೆಯನ್ನು ಅವರು ಕೇಳಲು ಸಿದ್ಧರಿಲ್ಲ. ಈ ಸಂಬಂಧ ಸಭೆ ನಡೆಸಿದ್ದು, ನಮ್ಮ ಸಂಕಷ್ಟಗಳನ್ನು ಅವರ ಮುಂದೆ ಇಟ್ಟೆವು. ನಮ್ಮ 600 ಮಂದಿಯ ಕುಟುಂಬ ಬೀದಿಗೆ ಬೀಳುವ ಬಗ್ಗೆಯೂ ಮನವರಿಕೆ ಮಡಿದೆವು. ಆದರೂ ಅವರ ನಿರ್ಧಾರ ಬದಲಾಯಿಸಿಲ್ಲ. ಹೀಗಾಗಿ ಧರಣಿ ನಮಗೆ ಅನಿವಾರ್ಯವಾಗಿದೆ. ನಮ್ಮ ಬೇಡಿಕೆ ಈಡೇರುವ ವರೆಗೂ ನಾವು ಧರಣಿ ಮುಂದುವರಿಸಲಿದ್ದೇವೆ ಎಂದು ಧರಣಿ ನಿರತ ಹನೀಫ್‌ ಕಾಟಿಪಳ್ಳ ಹೇಳಿದ್ದಾರೆ.

ಸೋಮವಾರ ಮತ್ತು ಗುರುವಾರ ಕೆಲಸ ನೀಡುತ್ತಿದ್ದರು. ಅದೇ ರೀತಿ ಮುಂದುವರಿದರೆ 600ಮಂದಿಗೂ ಕೆಲಸಸಿಲಿದೆ. ಲಾರಿ ಮಾಲಕರು ಪ್ರತೀ ದಿನ ಕೆಲಸ ಮಾಡಿದರೆ 500 ರೂ. ನೀಡುತ್ತೇವೆ ಎನ್ನುತ್ತಿದ್ದಾರೆ. ಆದರೆ, ಪ್ರತೀ ದಿನ 60-100 ಲಾರಿಗಳು ಲೋಡ್‌ ಆಗುತ್ತವೆ. ಆಗ ಪ್ರತೀ ದಿನ 60-100 ಮಂದಿಗಷ್ಟೇ ಕೆಲಸ ಸಿಗಲಿದೆ. ಉಳಿದವರು ಉಪವಾಸ ಮಲಗಬೇಕಾಗುತ್ತದೆ. ಒಂದು ಕುಟುಂಬದಂತೆ ಇದ್ದ ನಮ್ಮನ್ನು ಲಾರಿ ಮಾಲಕರು ಬೇರ್ಪಡಿಸಿ ಅವರು ಲಾಬ ಗಳಿಸುವ ಹುನ್ನಾರ ಮಾಡುತ್ತಿದ್ದಾರೆ. ಇದರಿಂದ ನಮ್ಮಂತಹಾ ನೌಕರರು ಮತ್ತು ಅವರ ಕುಟುಂಬದ ಹೊಟ್ಟೆಗೆ ಪೆಟ್ಟು ಬೀಳುತ್ತದೆ. ಹಾಗಾಗಿ ಲಾರಿ ಮಾಲಕರ ಸೂಚನೆಯನ್ನು ನಾವು ಕೇಳಲು ಸಿದ್ಧರಿಲ್ಲ. ನಮಗೆ ಈ ಮೊದಲಿನಂತೆಯೇ ವಾರಕ್ಕೆ 2 ಲೋಡ್‌ ಸಿಕ್ಕಿದರೂ ಸಾಕು, ನಾವೆಲ್ಲರೂ ಹಂಚಿಕೊಂಡು ಕೆಲಸ ಮಾಡುತ್ತಾ ಎಲ್ಲರೂ ನೆಮ್ಮದಿಯಿಂದ ಜೀವನ ಮಾಡುತ್ತೇವೆ ಎಂದು ನೌಕರ ಶಿವು ಎಂಬವರು ಹೇಳಿದ್ದಾರೆ.






Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News