ಉತ್ತಮ ಭವಿಷ್ಯ ರೂಪಿಸಲು ಶಿಸ್ತು, ಶ್ರದ್ಧೆ, ಛಲ, ಸಮಯ ಪ್ರಜ್ಞೆ ಮುಖ್ಯ: ರೆ. ಫಾ. ರಿಚರ್ಡ್ ಅಲೋಶಿಯಸ್ ಕುವೆಲ್ಹೋ
ಮಂಗಳೂರು: ವಿದ್ಯಾರ್ಥಿ ಜೀವನದಲ್ಲೇ ಶಿಸ್ತು, ಶ್ರದ್ಧೆ, ಛಲ, ಸಮಯ ಪ್ರಜ್ಞೆಯನ್ನು ಮೈಗೂಡಿಸಿದಾಗ ಉತ್ತಮ ಭವಿಷ್ಯ ವನ್ನು ರೂಪಿಸಲು ಸಾಧ್ಯವಾಗುತ್ತದೆ ಎಂದು ಫಾದರ್ ಮುಲ್ಲರ್ ಚಾರಿಟೆಬಲ್ ಇನ್‌ಸ್ಟಿಟ್ಯೂಟ್‌ಗಳ ನಿರ್ದೇಶಕ ರೆ. ಫಾ. ರಿಚರ್ಡ್ ಅಲೋಶಿಯಸ್ ಕುವೆಲ್ಹೋ ಹೇಳಿದರು.
ತುಂಬೆ ಫಾದರ್ ಮುಲ್ಲರ್ ನರ್ಸಿಂಗ್ ಕಾಲೇಜಿನಲ್ಲಿ ಗುರುವಾರ ನಡೆದ 2ನೇ ಬ್ಯಾಚ್ ಬಿಎಸ್ಸಿ ನರ್ಸಿಂಗ್ ವಿದ್ಯಾರ್ಥಿಗಳ ಪ್ರಮಾಣ ವಚನ ಸ್ವೀಕಾರ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಪ್ರಸಕ್ತ ಕಾಲದಲ್ಲಿ ವಿದ್ಯಾರ್ಥಿಗಳಿಗೆ ಗುಣಮಟ್ಟದ ಮತ್ತು ಉತ್ತಮ ವಿದ್ಯಾರ್ಜನೆಗೆ ಸಾಕಷ್ಟು ಅವಕಾಶಗಳು ಇವೆ. ಆದರೆ ಹೆಚ್ಚಿನ ವಿದ್ಯಾರ್ಥಿಗಳು ಅವಕಾಶವನ್ನು ಪರಿಪೂರ್ಣವಾಗಿ ಬಳಸುತ್ತಿರುವುದು ಕಾಣುತ್ತಿಲ್ಲ. ಉದಾಸಿನತೆ, ಅತಿಯಾದ ನಿದ್ದೆ, ಅನಗತ್ಯವಾದ ತಂತ್ರಜ್ಞಾನ ಬಳಕೆ, ಸಮಯದ ಮಹತ್ವ ಅರಿಯದಿರುವುದರಿಂದ ಹೆಚ್ಚಿನ ವಿದ್ಯಾರ್ಥಿಗಳು ಸಫಲತೆ ಕಾಣಲು ವಿಫಲರಾಗುತ್ತಾರೆ ಎಂದು ಹೇಳಿದರು.
ಮುಖ್ಯ ಅತಿಥಿಯಾಗಿದ್ದ ಫಾದರ್ ಮುಲ್ಲರ್ ಶಾಲೆ ಮತ್ತು ನರ್ಸಿಂಗ್ ಕಾಲೇಜು ಮಂಗಳೂರು ಇದರ ಪ್ರಾಂಶುಪಾಲೆ ಭಗಿನಿ ಜೆಸಿಂತಾ ಡಿಸೋಜ ಮಾತನಾಡಿದರು.
ಫಾದರ್ ಮುಲ್ಲರ್ ನರ್ಸಿಂಗ್ ಕಾಲೇಜು ತುಂಬೆ ಇದರ ಪ್ರಾಂಶುಪಾಲೆ ಭಗಿನಿ ಡಾ. ಜೂಡಿ, ಫಾದರ್ ಮುಲ್ಲರ್ ಆಸ್ಪತ್ರೆ ತುಂಬೆ ಇದರ ವೈದ್ಯಾಧಿಕಾರಿ ಡಾ. ಕಿರಣ್ ಶೆಟ್ಟಿ, ಭಗಿನಿ ಧನ್ಯಾ ದೇವಸ್ಯ ಉಪಸ್ಥಿತರಿದ್ದರು.
ಫಾದರ್ ಮುಲ್ಲರ್ ಆಸ್ಪತ್ರೆ ಮತ್ತು ನರ್ಸಿಂಗ್ ಕಾಲೇಜು ತುಂಬೆ ಇದರ ಆಡಳಿತಾಧಿಕಾರಿ ರೆ. ಫಾ. ಸಿಲ್ವೆಸ್ಟರ್ ವಿನ್ಸೆಂಟ್ ಲೋಬೋ ಸ್ವಾಗತಿಸಿದರು. ಫಾದರ್ ಮುಲ್ಲರ್ ನರ್ಸಿಂಗ್ ಕಾಲೇಜು ತುಂಬೆ ಇದರ ಉಪ ಪ್ರಾಂಶುಪಾಲೆ ಜಾನೆಟ್ ಸಿಕ್ವೇರಾ ವಂದಿಸಿದರು. ಭಗಿನಿನಾನ್ಸಿ ಮಥಾಯಸ್ ಕಾರ್ಯಕ್ರಮ ನಿರೂಪಿಸಿದರು.