×
Ad

ಜಮೀನು ವಿಚಾರದಲ್ಲಿ ಹಲ್ಲೆ: ಇಬ್ಬರು ಮಹಿಳೆಯರು ಸಹಿತ ನಾಲ್ವರು ಆಸ್ಪತ್ರೆಗೆ ದಾಖಲು

Update: 2024-01-16 23:01 IST

ಪುತ್ತೂರು: ಜಮೀನು ವಿಚಾರದಲ್ಲಿ ಇತ್ತಂಡಗಳ ನಡುವೆ ಹಲ್ಲೆ ನಡೆದ ಪ್ರಕರಣವು ಪುತ್ತೂರು ತಾಲೂಕಿನ ಮುಂಡೂರು ಎಂಬಲ್ಲಿ ರವಿವಾರ ರಾತ್ರಿ ನಡೆದಿದ್ದು, ಇಬ್ಬರು ಮಹಿಳೆಯರ ಸಹಿತ ನಾಲ್ವರು ಆಸ್ಪತ್ರೆಗೆ ದಾಖಲಾಗಿದ್ದಾರೆ.

ಪುತ್ತೂರು ಗ್ರಾಮಾಂತರ ಠಾಣೆಯಲ್ಲಿ ದೂರು, ಪ್ರತಿದೂರು ದಾಖಲಾಗಿದೆ.

ಪುತ್ತೂರು ತಾಲೂಕಿನ ಮುಂಡೂರು ನಿವಾಸಿ ಸಂತೋಷ್ ಬಿ.ಕೆ. (29), ಅವರ ತಾಯಿ ಸವಿತಾ(50) ಹಾಗೂ ಇನ್ನೊಂದು ತಂಡದ ಕೇಶವ ನಾಯ್ಕ್(35), ಅವರ ತಾಯಿ ಜಯಂತಿ(55) ಹಲ್ಲೆಗೆ ಒಳಗಾದವರು. ನಾಲ್ವರೂ ಪುತ್ತೂರಿನ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ.

ಸಂತೋಷ ಬಿ ಕೆ ಅವರು ನೀಡಿರುವ ದೂರಿನಂತೆ, ರವಿವಾರ ರಾತ್ರಿ ಸಂತೋಷ್ ತನ್ನ ಸ್ಕೂಟರ್‍ನಲ್ಲಿ ತಮ್ಮ ತೋಟದ ಹತ್ತಿರ ಬಂದು ಅಲ್ಲಿ ವಾಹನ ನಿಲ್ಲಿಸಿ, ಅಲ್ಲಿಂದ ತೋಟದಲ್ಲಿ ನಡೆದುಕೊಂಡು ಮನೆಗೆ ಹೋಗುತ್ತಿರುವಾಗ, ಆರೋಪಿಗಳಾದ ಕೇಶವ, ಧನಂಜಯ, ಜಗದೀಶ ಎಂಬವರು ತಡೆದು ನಿಲ್ಲಿಸಿ ಹಲ್ಲೆ ನಡೆಸಿರುತ್ತಾರೆ. ಗಲಾಟೆಯ ಶಬ್ದ ಕೇಳಿ ಸಂತೋಷ್ ಅವರ ತಾಯಿ ಸವಿತಾ ಸ್ಥಳಕ್ಕೆ ಬಂದಾಗ ಆರೋಪಿ ಕೇಶವ ಎಂಬಾತನು ಸವಿತಾರಿಗೂ ಹಲ್ಲೆ ನಡೆಸಿ ಜೀವಬೆದರಿಕೆ ಹಾಕಿರುತ್ತಾನೆ. ಅಲ್ಲದೆ ಈ ಸಂದರ್ಭದಲ್ಲಿ ಸಂತೋಷ್ ಅವರ ಮೊಬೈಲ್ ಮತ್ತು 25 ಸಾವಿರ ನಗದು ಹಣವಿದ್ದ ಪರ್ಸ್ ಕಳೆದು ಹೋಗಿರುತ್ತದೆ ಎಂದು ದೂರು ನೀಡಿದ್ದಾರೆ.

ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಂಡೂರು ನಿವಾಸಿ ಕೇಶವ ನಾಯ್ಕ್ ಎಂಬವರು ದೂರು ನೀಡಿ ರವಿವಾರ ರಾತ್ರಿ ಸಂದೀಪ, ಸಂತೋಷ ಹಾಗೂ ಅವರ ಪತ್ನಿ ನಮ್ಮ ತೋಟದ ತಂತಿ ಬೇಲಿಯನ್ನು ಕಿತ್ತಿ ಹಾಕಲು ಪ್ರಾರಂಭಿಸಿದ್ದರು. ಈ ಬಗ್ಗೆ ವಿಚಾರಿಸಿದ ತನಗೆ ಅವ್ಯಾಚ್ಯವಾಗಿ ಬೈದು, ಜೀವ ಬೆದರಿಕೆ ಹಾಕಿರುತ್ತಾರೆ. ಅಲ್ಲೇ ಇದ್ದ ಕೊರಗಪ್ಪ ನಾಯ್ಕ್ ಮತ್ತು ಅವರ ಪತ್ನಿ ಸವಿತಾ ಅವರೂ ತನಗೆ ಅವ್ಯಾಚವಾಗಿ ಬೈದಿರುತ್ತಾರೆ. ಈ ಬಗ್ಗೆ ಪೊಲೀಸರಿಗೆ ದೂರು ನೀಡಲೆಂದು ತನ್ನ ಚಿಕ್ಕಪ್ಪನ ಮಗ ಧನಂಜಯ ಎಂಬವರ ಜೊತೆಗೆ ತೆರಳುತ್ತಿದ್ದಾಗ ಆರೋಪಿ ಕೊರಗಪ್ಪ ನಾಯ್ಕ್ ಅವರ ಪುತ್ರ ಸಂತೋಷ ತನ್ನ ತಲೆಗೆ ಹಲ್ಲೆ ನಡೆಸಿರುತ್ತಾನೆ. ಗಲಾಟೆಯ ಶಬ್ದ ಕೇಳಿ ತಾಯಿ ಸ್ಥಳಕ್ಕೆ ಬಂದಿದ್ದು, ಅವರಿಗೂ ಸಂತೋಷ ಮತ್ತು ಇನ್ನಿತರರು ಹಲ್ಲೆ ನಡೆಸಿರುತ್ತಾರೆ ಎಂದು ಆರೋಪಿಸಿ ದೂರು ನೀಡಿದ್ದಾರೆ. 

ಸುಳ್ಳು ಸುದ್ದಿ, ತಪ್ಪು ಸಂದೇಶಗಳಿಗೆ ಕಿವಿಗೊಡಬೇಡಿ-ಎಸ್‍ಪಿ

ಸಾಮಾಜಿಕ ಜಾಲತಾಣಗಳಲ್ಲಿ ಹರಡಿರುವ ಸುದ್ದಿಗಳ ಬಗ್ಗೆ ದ.ಕ.ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಸ್ಪಷ್ಟನೆ ನೀಡಿ ದ್ದಾರೆ. ಸಾಮಾಜಿಕ ಜಾಲತಾಣದಲ್ಲಿ `ರಾಮಮಂದಿರದ ಮಂತ್ರಾಕ್ಷತೆ ವಿತರಣೆ ಮಾಡುತ್ತಿದ್ದ ಕಾರ್ಯಕರ್ತನ ಮೇಲೆ ಪುತ್ತಿಲ ಪರಿವಾರದ ಬೆಂಬಲಿಗರಿಂದ ಹಲ್ಲೆ' ಎಂಬುದಾಗಿ ಸುದ್ದಿ ಪ್ರಸಾರವಾಗುತ್ತಿದ್ದು, ವಾಸ್ತವವಾಗಿ ಪುತ್ತೂರು ತಾಲೂಕು ಮುಂಡೂರು ಗ್ರಾಮದ ಬರೆಕೊಲಾಡಿ ಎಂಬಲ್ಲಿ ಸಿವಿಲ್ ವ್ಯಾಜ್ಯಕ್ಕೆ ಸಂಬಂಧಿಸಿದಂತೆ ಅಕ್ಕಪಕ್ಕದ ಮನೆಯವರು ಜಗಳವಾಡಿಕೊಂಡು ಪರಸ್ಪರ ಹಲ್ಲೆ ನಡೆಸಿರುವುದಾಗಿದೆ. ಈ ಬಗ್ಗೆ ಈಗಾಗಲೇ ಪುತ್ತೂರು ಗ್ರಾಮಾಂತರ ಠಾಣೆಯಲ್ಲಿ ದೂರು ಮತ್ತು ಪ್ರತಿದೂರು ದಾಖಲಾಗಿದೆ. ಎರಡೂ ಪ್ರಕರಣಗಳ ತನಿಖೆ ಪ್ರಗತಿಯಲ್ಲಿರುತ್ತದೆ. ಈ ಬಗ್ಗೆ ಸಾರ್ವಜನಿಕರು ಯಾವುದೇ ಸುಳ್ಳುಸುದ್ದಿ/ತಪ್ಪುಸಂದೇಶಗಳಿಗೆ ಕಿವಿಗೊಡಬಾರದು ಎಂದು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News