ಹೈನುಗಾರರ ಸಮಸ್ಯೆ ಬಗೆಹರಿಸಲು ಪ್ರೋತ್ಸಾಹಧನ ನೀಡುವುದೊಂದೇ ಪರಿಹಾರವಲ್ಲ: ಯುಟಿ ಖಾದರ್
ಮಂಗಳೂರು: ಹೈನುಗಾರರ ಸಮಸ್ಯೆ ಬಗೆಹರಿಸಲು ಪ್ರೋತ್ಸಾಹಧನ ನೀಡುವುದೊಂದೇ ಪರಿಹಾರವಲ್ಲ. ಯಾಕೆಂದರೆ ಹೈನುಗಾರರ ದೈನಂದಿನ ನಿರ್ವಹಣೆ ವೆಚ್ಚ ಅಧಿಕವಾಗಿದೆ. ಪಶುಗಳ ಆಹಾರ ಪೂರೈಕೆಗೂ ಸಮಸ್ಯೆ ಉಂಟಾಗಿದೆ. ಹೀಗಾಗಿ ಕಡಿಮೆ ವೆಚ್ಚದಲ್ಲಿ ಮೇವು ಹಾಗೂ ನಿರ್ವಹಣಾ ವೆಚ್ಚ ಕಡಿಮೆ ಮಾಡುವ ನಿಟ್ಟಿನಲ್ಲಿ ಸೂಕ್ತ ಪರಿಹಾರವನ್ನು ಕಂಡುಕೊಳ್ಳಬೇಕಿದೆ ಎಂದು ವಿಧಾನಸಭೆಯ ಸಭಾಧ್ಯಕ್ಷ ಯು.ಟಿ.ಖಾದರ್ ತಿಳಿಸಿದ್ದಾರೆ.
ಸಹಕಾರಿ ಹಾಲು ಉತ್ಪಾದಕರ ಒಕ್ಕೂಟ ವತಿಯಿಂದ ಮಂಗಳೂರು ಕುಲಶೇಖರದ ‘ಮಂಗಳೂರು ಡೈರಿ ಉಗ್ರಾಣದ ಶಂಕುಸ್ಥಾಪನೆ ಹಾಗೂ ವಸತಿ ಸಮುಚ್ಚಯ ಉದ್ಘಾಟನೆಯನ್ನು ಬುಧವಾರ ನೆರವೇರಿಸಿ ಅವರು ಮಾತನಾಡಿದರು.
ಕೆಎಂಎಫ್ ಏಜೆನ್ಸಿ ನೀಡುವ ಸಂದರ್ಭ ಕ್ಯಾನ್ಸರ್, ಕಿಡ್ನಿ ಸಮಸ್ಯೆ ಮುಂತಾದ ಮಾರಣಾಂತಿಕ ಸಮಸ್ಯೆ ಇರುವವರಿಗೆ ಆದ್ಯತೆ ನೆಲೆಯಲ್ಲಿ ಅವಕಾಶ ನೀಡಬೇಕಿದೆ ಎಂದು ಸಲಹೆ ನೀಡಿದರು.
ಕರಾವಳಿ ಭಾಗದಲ್ಲಿ ಹಾಲಿನ ಕೊರತೆ ಅಧಿಕವಾಗುತ್ತಿರುವ ಹಿನ್ನೆಲೆಯಲ್ಲಿ ಕೃಷಿ, ಪಶುಸಂಗೋಪನೆ, ಸಹಕಾರ ಇಲಾಖೆ, ಕೆಎಂಎಫ್ ಅಧಿಕಾರಿಗಳು ಹಾಗೂ ಹೈನುಗಾರ ಮುಖಂಡರು ಜತೆಯಾಗಿ ಚರ್ಚಿಸಿ ಹಾಲು ಉತ್ಪಾದನೆ ಅಧಿಕಗೊಳಿಸುವ ನಿಟ್ಟಿನಲ್ಲಿ ಶಾಶ್ವತ ಕಾರ್ಯತಂತ್ರವನ್ನು ರೂಪಿಸಬೇಕಿದೆ ಎಂದು ಸಲಹೆ ನೀಡಿದರು.
*ದಕ್ಷಿಣ ಕನ್ನಡ ಉಪ ಉತ್ಪನ್ನ ಜನಪ್ರಿಯಗೊಳಿಸಿ: ನಳಿನ್
ಸಂಸದ ನಳಿನ್ ಕುಮಾರ್ ಕಟೀಲು ಮಾತನಾಡಿ, ಹೈನುಗಾರಿಗೆ ಲಾಭದಾಯಕವಾಗಿ ರೂಪಿಸುವ ದೃಷ್ಟಿಯಿಂದ ಹಾಲಿನ ಜತೆಗೆ, ಉಪ ಉತ್ಪನ್ನಗಳನ್ನು ಜನಪ್ರಿಯಗೊಳಿಸುವ ನಿಟ್ಟಿನಲ್ಲಿ ಪ್ರಯತ್ನ ನಡೆಸಬೇಕು ಎಂದರು.
ಶಾಸಕ ಡಿ.ವೇದವ್ಯಾಸ ಕಾಮತ್ ಮಾತನಾಡಿ, ಹೈನುಗಾರರಿಗೆ ಹೆಚ್ಚು ಶಕ್ತಿ ತುಂಬುವ ನಿಟ್ಟಿನಲ್ಲಿ ಸ್ಥಳೀಯಾಡಳಿತ ಸಂಸ್ಥೆಗಳು, ಸರಕಾರ ಕೆಲಸ ಮಾಡಬೇಕಿದೆ ಎಂದರು.
*ಹಾಲು ಲೀಟರ್‌ಗೆ 3 ರೂ. ಹೆಚ್ಚುವರಿ ಪ್ರೋತ್ಸಾಹಧನಕ್ಕೆ ಆಗ್ರಹ:
ಅಧ್ಯಕ್ಷತೆ ವಹಿಸಿ ಮಾತನಾಡಿದ ದ.ಕ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟದ ಅಧ್ಯಕ್ಷ ಕೆ.ಪಿ.ಸುಚರಿತ ಶೆಟ್ಟಿ ಅವರು, ಪಶು ಆಹಾರ ದರ ಹೆಚ್ಚಳ, ಮೇವಿನ ಅಲಭ್ಯತೆ ಮುಂತಾದ ಕಾರಣಗಳಿಂದ ಹಾಲು ಉತ್ಪಾದನಾ ವೆಚ್ಚ ಹೆಚ್ಚಿರುವ ಹಿನ್ನೆಲೆಯಲ್ಲಿ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಹೈನುಗಾರರಿಗೆ ಪ್ರತಿ ಲೀಟರ್ ಹಾಲಿಗೆ ಇತರ ಜಿಲ್ಲೆಗಳಿಗಿಂತ ೩ ರೂ. ಹೆಚ್ಚುವರಿ ಪ್ರೋತ್ಸಾಹಧನ ಒದಗಿಸುವಂತೆ ಅವರು ಸರಕಾರವನ್ನು ಒತ್ತಾಯಿಸಿದರು.
ವಿಧಾನ ಪರಿಷತ್ ಸದಸ್ಯರಾದ ಕೆ.ಹರೀಶ್ ಕುಮಾರ್, ಡಾ ಮಂಜುನಾಥ ಭಂಡಾರಿ, ಪ್ರತಾಪಸಿಂಹ ನಾಯಕ್ ಕೆ, ಮಹಾನಗರ ಪಾಲಿಕೆ ಸದಸ್ಯ ಭಾಸ್ಕರ್ ಕೆ, ಒಕ್ಕೂಟದ ಉಪಾಧ್ಯಕ್ಷ ಎಸ್.ಬಿ.ಜಯರಾಮ ರೈ, ವ್ಯವಸ್ಥಾಪಕ ನಿರ್ದೇಶಕ ವಿವೇಕ್ ಡಿ, ಉಪ ನಿರ್ದೇಶಕ ಡಾ.ಅರುಣ್ ಕುಮಾರ್ ಶೆಟ್ಟಿ ಎನ್., ನಿರ್ದೇಶಕರಾದ ರವಿರಾಜ ಹೆಗ್ಡೆ, ಎಸ್.ಪ್ರಕಾಶ್ಚಂದ್ರ ಶೆಟ್ಟಿ, ನರಸಿಂಹ ಕಾಮತ್, ಬಿ.ಸುಧಾಕರ ರೈ, ಸುಧಾಕರ ಶೆಟ್ಟಿ, ಸುಭದ್ರಾರಾವ್, ಸವಿತಾ ಎನ್.ಶೆಟ್ಟಿ, ಸ್ಮಿತಾ ಆರ್.ಶೆಟ್ಟಿ, ಬಿ.ಸದಾಶಿವ ಶೆಟ್ಟಿ, ಕಮಲಾಕ್ಷ ಹೆಬ್ಬಾರ್ ಮುಂತಾದವರು ಉಪಸ್ಥಿತರಿದ್ದರು.
*1.60 ಲಕ್ಷ ಲೀ. ಹಾಲು ಕೊರತೆ
ಅವಿಭಜಿತ ದ.ಕ ಜಿಲ್ಲೆಯಲ್ಲಿ ಒಕ್ಕೂಟವು ಪ್ರತಿದಿನ ಒಟ್ಟು 4.24 ಲಕ್ಷ ಲೀಟರ್ ಹಾಲು ಪೂರೈಸುತ್ತಿದೆ. ಇದರಲ್ಲಿ ಒಕ್ಕೂಟದ ವ್ಯಾಪ್ತಿಯಲ್ಲಿ 3.5 ಲಕ್ಷ ಲೀ.ನಷ್ಟು ಹಾಲು ಮಾತ್ರ ಹೈನುಗಾರರಿಂದ ಪೂರೈಕೆಯಾಗುತ್ತಿದೆ. ಬಾಕಿ ಸುಮಾರು 1.60 ಲಕ್ಷ ಲೀ.ಹಾಲನ್ನು ಹಾಸನ, ಮಂಡ್ಯ, ಮೈಸೂರು ಜಿಲ್ಲೆಗಳಿಂದ ತರಿಸಲಾಗುತ್ತಿದೆ
-ಕೆ.ಪಿ.ಸುಚರಿತ ಶೆಟ್ಟಿ, ಅಧ್ಯಕ್ಷರು, ದ.ಕ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟ