×
Ad

ಯೋಗವು ಆರೋಗ್ಯದ ಜೊತೆಗೆ ಭವಿಷ್ಯವನ್ನು ಉತ್ತಮಗೊಳಿಸುತ್ತದೆ: ಪ್ರೊ. ಟಿ. ಮಲ್ಲಿಕಾರ್ಜುನಪ್ಪ

Update: 2024-01-28 21:52 IST

ಮಂಗಳೂರು: ಯೋಗವು ಎಲ್ಲಾ ಆಯಾಮಗಳಿಂದ ಚಿಕಿತ್ಸೆಯನ್ನು ನೀಡುವುದರ ಜೊತೆಗೆ ಅನಾರೋಗ್ಯವನ್ನು ಆಮೂಲಾ ಗ್ರವಾಗಿ ಹೋಗಲಾಡಿಸುತ್ತದೆ ಎಂದು ಜಸ್ಟೀಸ್ ಕೆ.ಎಸ್. ಹೆಗ್ಡೆ ಮ್ಯಾನೇಜ್‌ಮೆಂಟ್ ಸಂಸ್ಥೆಯ ಹಿರಿಯ ಪ್ರಾಧ್ಯಾಪಕ ಪ್ರೊ.ಟಿ. ಮಲ್ಲಿಕಾರ್ಜುನಪ್ಪ ಹೇಳಿದ್ದಾರೆ.

ಮಂಗಳಗಂಗೋತ್ರಿಯ ಮಂಗಳೂರು ವಿಶ್ವವಿದ್ಯಾನಿಲಯದ ಡಾ. ಡಿ ವೀರೇಂದ್ರ ಹೆಗ್ಡೆ ಸಭಾಂಗಣದಲ್ಲಿ ಮಾನವ ಪ್ರಜ್ಞೆ ಮತ್ತು ಯೋಗ ವಿಜ್ಞಾನ ವಿಭಾಗ, ಮಂಗಳೂರು ವಿಶ್ವವಿದ್ಯಾನಿಲಯ ಮತ್ತು ವಾಂಕ್ ವ್ಯಾಂಗ್ ಡಿಜಿಟಲ್ ವಿಶ್ವವಿದ್ಯಾ ನಿಲಯ (ಡಬ್ಲ್ಯುಡಿಯು ), ದಕ್ಷಿಣ ಕೊರಿಯಾ ಇವುಗಳ ಸಹಯೋಗದಲ್ಲಿ ಮೂರು ದಿನಗಳ ಅಂತರ್‌ರಾಷ್ಟ್ರೀಯ ಯೋಗ ಶಿಕ್ಷಕರ ತರಬೇತಿ ಕಾರ್ಯಾಗಾರವನ್ನು ರವಿವಾರ ಉದ್ಘಾಟಿಸಿ ಅವರು ಮಾತನಾಡಿದರು.

ಇತರ ಹೆಚ್ಚಿನ ಚಿಕಿತ್ಸಾ ಪದ್ಧತಿಗಳು ಆರೋಗ್ಯ ಸಮಸ್ಯೆಗಳನ್ನು ವಾಸಿಮಾಡುತ್ತವೆಯಾದರೂ ಅವು ಎಷ್ಟು ಸಮಯದ ತನಕ ತನ್ನ ಪ್ರಭಾವವನ್ನು ಹೊಂದಿರುತ್ತದೆ ಮತ್ತು ಅದರ ಪರಿಣಾಮಗಳ ಕುರಿತು ಮಾಹಿತಿ ತಿಳಿದಿರುವುದಿಲ್ಲ. ಆದರೆ ಯೋಗವು ಇವುಗಳಿಗಿಂತ ಭಿನ್ನವಾಗಿ ಶಾರೀರಿಕ, ಮಾನಸಿಕ ದಾರ್ಢ್ಯವನ್ನು ಬೆಳೆಸುತ್ತದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿಗಳಾದ ಪ್ರೊ.ಜಯರಾಜ ಅಮಿನ್ ಅವರು ಇಂದಿನ ಜೀವನ ಶೈಲಿಯಿಂದ ಮಾನಸಿಕ ಒತ್ತಡ ಹೆಚ್ಚುತ್ತಿದ್ದು ಇದು ಶಾರೀರಿಕವಾಗಿ ಹಾಗೂ ಮಾನಸಿಕವಾಗಿ ದುಷ್ಪರಿಣಾಮವನ್ನು ಬೀರುತ್ತಿದೆ. ಇದರಿಂದ ಹೊರಬರಲು ಯೋಗವು ಅತ್ಯಂತ ಉತ್ತಮವಾದ ಮಾರ್ಗವಾಗಿದೆ. ಇದು ಪ್ರಾಚೀನ ಭಾರತದ ಅತ್ಯಮೂಲ್ಯವಾದ ಕೊಡುಗೆಯಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಅತಿಥಿಗಳಾಗಿದ್ದ ದಕ್ಷಿಣ ಕೊರಿಯಾದ ವಾಂಕ್ ವ್ಯಾಂಗ್ ಡಿಜಿಟಲ್ ವಿಶ್ವವಿದ್ಯಾನಿಲಯದ (ಡಬ್ಲ್ಯುಡಿಯು) ಯೋಗ ಅಧ್ಯಯನ ಮತ್ತು ಧ್ಯಾನ ವಿಭಾಗದ ಪ್ರಾಧ್ಯಾಪಕರು ಮತ್ತು ಡೀನ್ ಪ್ರೊ.ಜಾಂಗ್ ಸೂನ್ ಸ್ಯೂ ಮಾತನಾಡಿದರು.

ಈ ಕಾರ್ಯಾಗಾರದ ಸಂಯೋಜಕರು ಮತ್ತು ಮಾನವ ಪ್ರಜ್ಞೆ ಮತ್ತು ಯೋಗ ವಿಜ್ಞಾನ ವಿಭಾಗದ ಮುಖ್ಯಸ್ಥ ಪ್ರೊ.ಕೆ.ಕೃಷ್ಣ ಶರ್ಮರವರು ದಕ್ಷಿಣ ಕೊರಿಯ ಪ್ರತಿನಿಧಿಗಳು ೨೦೧೩ರಿಂದ ಬರುತ್ತಿದ್ದು ಇದು ಎಂಟನೇಯ ಕಾರ್ಯಾಗಾರವಾಗಿದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಕಳಿಂಗ ಇನ್‌ಸ್ಟಿಟ್ಯೂಟ್ ಆಫ್ ಇಂಡಸ್ಟ್ರಿಯಲ್ ಟೆಕ್ನಾಲಜಿ, ಭುವನೇಶ್ವರ, ಒಡಿಶ್ಶಾದಲ್ಲಿ ನಡೆದ ರಾಷ್ಟ್ರ ಮಟ್ಟದ ಅಂತರ್ ವಿಶ್ವವಿದ್ಯಾನಿಲಯಗಳ ಯೋಗ ಸ್ಪರ್ಧೆಯಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳಾದ ದೀಕ್ಷಿತಾ ಕೆ ಜೆ, ರೋಷನ್, ರಾಘವೇಂದ್ರ , ಸುದರ್ಶನ , ಪ್ರತ್ಯಕ್ಷ ಮತ್ತು ಈ ತಂಡದ ತರಬೇತುದಾರರು ಮತ್ತು ನಿರ್ವಾಹಕರಾದ ಪುನೀತ್ ಕುಮಾರ್ ಮತ್ತು ಸುರಕ್ಷಾ ಅವರನ್ನು ಸನ್ಮಾನಿಸಲಾಯಿತು.

ಉಪನ್ಯಾಸಕರಾದ ಡಾ.ಉದಯ್ ಕುಮಾರ್ ಅವರು ಅತಿಥಿಗಳನ್ನು ಪರಿಚಯಿಸಿ ಸ್ವಾಗತಿಸಿದರು. ಉಪನ್ಯಾಸಕ ನಾಗೇಶ್.ಕೆ.ಹಿರೇಗೌಡರ್ ಅವರು ಕಾರ್ಯಕ್ರಮವನ್ನು ನಿರೂಪಿಸಿದರು. ಉಪನ್ಯಾಸಕ ಡಾ.ತಿರುಮಲೇಶ್ವರ ಪ್ರಸಾದ್ ಅವರು ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News