×
Ad

ದೇಶದಲ್ಲಿ ಭಯ, ಭೇದಭಾವದ ವಾತಾವರಣ ನಿವಾರಣೆಗೆ ಮಹಾತ್ಮ ಗಾಂಧಿ ಒಂದೇ ಮಂತ್ರ: ಬಿ.ಕೆ. ಹರಿಪ್ರಸಾದ್

Update: 2024-01-29 20:06 IST

ಮಂಗಳೂರು, ಜ.29: ಈಗ ದೇಶದಲ್ಲಿ ಭಯದ ಮತ್ತು ಭೇದಭಾವದ ವಾತಾವರಣವನ್ನು ಸೃಷ್ಟಿ ಮಾಡಿರುವ ಪ್ರತಿಗಾಮಿ, ಉಗ್ರಬಲಪಂಥೀಯ ಶಕ್ತಿಗಳನ್ನು ಎದುರಿಸಲು ಮಹಾತ್ಮಗಾಂಧಿ ಒಂದೇ ಮಂತ್ರ ಎಂದು ವಿಧಾನ ಪರಿಷತ್ ಸದಸ್ಯ, ಹಿರಿಯ ನಾಯಕ ಬಿ ಕೆ ಹರಿಪ್ರಸಾದ್ ಹೇಳಿದ್ದಾರೆ.

ನಗರದ ಬಲ್ಮಠದ ಸಹೋದಯ ಸಭಾಂಗಣದಲ್ಲಿ ಸೋಮವಾರ ಮಹಾತ್ಮ ಗಾಂಧಿ ಹುತಾತ್ಮ ದಿನದ ನೆನಪಿನಲ್ಲಿ ಡಿವೈಎಫ್ಐ 12 ನೇ ರಾಜ್ಯ ಸಮ್ಮೇಳನ ಸ್ವಾಗತ ಸಮಿತಿಯ ವತಿಯಿಂದ ನಡೆದ "ಗಾಂಧಿ ಕರಾವಳಿ ಭೇಟಿ - ಸಂದೇಶ, ಸವಾಲುಗಳು" ಎಂಬ ವಿಷಯದ ಮೇಲೆ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಮಾತನಾಡಿದರು.

ಮಹಾತ್ಮ ಗಾಂಧಿ ಚಿಂತನೆಗಳು, ವಿಚಾರಧಾರೆಗಳು ಎಂದೆಂದಿಗೂ ಸಕಾಲಿಕವಾಗಿದೆ ಎಂದು ಹೇಳಿದರು.

ಇಡೀ ಭಾರತದಲ್ಲಿ 230 ಮಂದಿ ರಾಮಾಯಣ ಬರೆದಿದ್ದಾರೆ. ವಾಲ್ಮೀಕಿ, ತುಳಸಿದಾಸರಿಂದ ಕುವೆಂಪು ಅವರ ರಾಮಾಯಣ ದರ್ಶನಂ ತನಕ ಹಲವು ರಾಮಾಯಣ ಬಂದಿದೆ ನಮಗೆ ಯಾವ ರಾಮನನ್ನು ನಂಬಬೇಕೆಂದು ಗೊತ್ತಾಗುತ್ತಿಲ್ಲ. ನೈಜವಾಗಿ ನೋಡಿದರೆ ಮಹಾತ್ಮ ಗಾಂಧಿ ರಾಮರಾಜ್ಯದ ಬಗ್ಗೆ ಕನಸು ಕಂಡಿದ್ದರು ಮತ್ತು ಅವರ ಕಲ್ಪನೆಯನ್ನು ಸ್ಪಷ್ಟಪಡಿಸಿದ್ದರು ಎಂದು ಹೇಳಿದರು.

ದೊಡ್ಡ ದೊಡ್ಡ 7 ಧರ್ಮಗಳನ್ನು, ನಾಲ್ಕುವರೆ ಸಾವಿರ ಜಾತಿಗಳನ್ನು, 19 ಸಾವಿರ ಭಾಷೆಗಳಿರುವ ಭಾರತವನ್ನು ಮುನ್ನಡೆ ಸಲು ಸರ್ವಧರ್ಮ ಸಮಭಾವದ ಸಿದ್ಧಾಂತ ದಿಂದ ಸಾಧ್ಯ ಎಂದು ಮಹಾತ್ಮಾ ಗಾಂಧಿ ನಂಬಿದ್ದರು. ಈ ಸಿದ್ಧಾಂತ ಕ್ಕಾಗಿ ಅವರು ಪ್ರಾಣವನ್ನು ಅರ್ಪಿಸಿದ್ದರು ಎಂದರು.

ವಿಚಾರ ಮಂಡಿಸಿದ ಡಾ. ಉದಯ ಇರ್ವತ್ತೂರು ಗಾಂಧಿ ಈ ದೇಶದಲ್ಲಿ ಶಾಂತಿ ಸಾಮರಸ್ಯ ಉಳಿಯಲು ಹಿಂದೂ ಮುಸ್ಲಿಂ ನಡುವೆ ಬಾಂಧವ್ಯ ಅಗತ್ಯ, ಅವರ ನಡುವೆ ಅಪನಂಬಿಕೆಗಳಿಗೆ ಅವಕಾಶವಿಲ್ಲದ ವಾತಾವರಣ ನಿರ್ಮಾಣವಾಗಬೇಕು ಎಂದು ಎಂಬ ಸಂದೇಶ ನೀಡಿದ್ದರು.ಅವರ ಅಂದಿನ ಸಂದೇಶ ಇಂದು ಹೆಚ್ಚು ಪ್ರಸ್ತುತ ವಾಗಿದೆ ಎಂದು ನುಡಿದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ನಿವೃತ್ತ ಐಎಎಸ್ ಅಧಿಕಾರಿ ಎಬಿ ಇಬ್ರಾಹೀಂ ಅವರು ಇವತ್ತಿನ ರಾಜಕಾರಣದಲ್ಲಿ ರಾಜಕಾರಣಿಗಳು ಧರ್ಮವನ್ನು ರಾಜಕೀಯಕ್ಕಾಗಿ ಬಳಸುತ್ತಿದ್ದಾರೆ. ಇದು ದುರದೃಷ್ಟಕರ ಎಂದರು. ಗಾಂಧಿ ಸರಿ ಸಮಾನ ಸಮಾಜ ನಿರ್ಮಿಸಲು ಶ್ರಮಿಸಿದ್ದರು ಎಂದು ಹೇಳಿದರು.

ಡಿವೈಎಫ್ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿದರು. ಡಿವೈಎಫ್ಐ ಜಿಲ್ಲಾಧ್ಯಕ್ಷ ಬಿ.ಕೆ.ಇಮ್ತಿಯಾಝ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಕಾರ್ಯದರ್ಶಿ ಸಂತೋಷ್ ಬಜಾಲ್ ಕಾರ್ಯಕ್ರಮ ನಿರೂಪಿಸಿದರು. ಕೋಶಾಧಿಕಾರಿ ಮನೋಜ್ ವಾಮಂಜೂರು ವಾದಿಸಿದರು.














Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News