×
Ad

ಜಲಾಭಿಮುಖ ವಾಯುವಿಹಾರ ಅಭಿವೃದ್ಧಿ ಮಾಹಿತಿ ಸಭೆ: ಡಿಸಿ, ಎಸಿ ಉಪಸ್ಥಿತಿಯಲ್ಲಿ ಸಭೆ ಕರೆಯಲು ಒತ್ತಾಯ

Update: 2024-01-31 22:25 IST

ಮಂಗಳೂರು: ಮಂಗಳೂರು ಸ್ಮಾರ್ಟ್‌ಸಿಟಿ ವತಿಯಿಂದ ನೇತ್ರಾವತಿ ರೈಲ್ವೆ ಸೇತುವೆಯಿಂದ ಬೋಳಾರ ಸೀ ಫೇಸ್ ವರೆಗಿನ ಜಲಾಭಿಮುಖ ವಾಯುವಿಹಾರ ಅಭಿವೃದ್ಧಿ ಕಾಮಗಾರಿಗೆ ಸಂಬಂಧಿಸಿ ಸಾರ್ವಜನಿಕರಿಗೆ ಮಾಹಿತಿ ನೀಡಲು ಬುಧವಾರ ಕರೆಯಲಾದ ಸಭೆಯು ಗೊಂದಲದಲ್ಲಿ ಕೊನೆಗೊಂಡಿದೆ.

ನಗರದ ಮಂಗಳಾದೇವಿ ಕಾಂತಿ ಚರ್ಚ್ ಹಾಲ್‌ನಲ್ಲಿ ಕರೆಯಲಾದ ಮಂಗಳೂರು ಸ್ಮಾರ್ಟ್‌ಸಿಟಿ ಮಾಹಿತಿ ಸಭೆಯಲ್ಲಿ ಸಾರ್ವನಿಕರಿಗೆ ಸರಿಯಾದ ಮಾಹಿತಿ ನೀಡಲು ಉನ್ನತ ಅಧಿಕಾರಿಗಳು ಇಲ್ಲದೆ ಇರುವ ವಿಚಾರದ ಬಗ್ಗೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದರು.

ಸ್ಮಾರ್ಟ್ ಸಿಟಿ ಯೋಜನೆಯ ಉನ್ನತ ಅಧಿಕಾರಿಗಳು, ಜಿಲ್ಲಾಧಿಕಾರಿ, ಸಹಾಯಕ ಆಯುಕ್ತರು, ಶಾಸಕರು, ಮೇಯರ್ ಉಪಸ್ಥಿತಿಯಲ್ಲಿ ಸಭೆ ಕರೆಯುವಂತೆ ಆಗ್ರಹಿಸಿ ಸಾರ್ವಜನಿಕರು ಸಭೆಯಿಂದ ಹೊರನಡೆಯುವುದರೊಂದಿಗೆ ಮಾಹಿತಿ ಸಭೆ ಅರ್ಧದಲ್ಲೇ ಸ್ಥಗಿತಗೊಂಡಿತು.

ಸ್ಮಾರ್ಟ್ ಸಿಟಿ ಪ್ರಧಾನ ವ್ಯವಸ್ಥಾಪಕ ಅರುಣ್ ಪ್ರಭ ಅವರು ಸಭೆಯಲ್ಲಿ ಜಲಾಭಿಮುಖ ವಾಯುವಿಹಾರ ಅಭಿವೃದ್ಧಿ ಯೋಜ ನೆಯ ಬಗ್ಗೆ ಮಾಹಿತಿ ನೀಡಲಾರಂಭಿಸಿದಾಗ ತರಾತುರಿಯಲ್ಲಿ ಸಭೆ ಕರೆಯುವ ಉದ್ದೇಶದ ಬಗ್ಗೆ ಪ್ರಶ್ನಿಸಿದರು.

ಯೋಜನೆಯಿಂದ ತೊಂದರೆಗೊಳಗಾಗುವ ಸ್ಥಳೀಯರನ್ನು,ಮೀನುಗಾರರನ್ನು, ಉದ್ದಿಮೆದಾರರಿಗೆ ಸಭೆಗೆ ಬರುವಂತೆ ಮಾಹಿತಿ ನೀಡಿದ್ದಿರಾ ? ಸಭೆಗೆ ಯಾಕೆ ಪ್ರಚಾರ ನೀಡಿಲ್ಲ. ಇವತ್ತಿನ ಪತ್ರಿಕೆಗಳಲ್ಲಿ ಸಭೆಯ ಬಗ್ಗೆ ಹೇಳಿಕೆ ಕೊಟ್ಟದ್ದು ಯಾಕೆ? ಎಂದು ಸಾರ್ವಜನಿಕರು ಅಧಿಕಾರಿಯನ್ನು ತರಾಟೆಗೆ ತೆಗೆದುಕೊಂಡರು.

ಸುಮಾರು 45 ನಿಮಿಷಗಳ ನಡೆದ ಸಭೆಯಲ್ಲಿ ಸಾರ್ವಜನಿಕರ ಪ್ರಶ್ನೆಗಳಿಗೆ ಸಮರ್ಪಕ ನೀಡಲು ಅಧಿಕಾರಿಗೆ ಸಾಧ್ಯವಾ ಗಲಿಲ್ಲ. ಪರಿಸರವಾದಿ, ಕಲಾವಿದ ದಿನೇಶ ಹೊಳ್ಳ, ಪ್ರಾಧ್ಯಾಪಕ ಡಾ. ಪ್ರವೀಣ್ ಎನ್‌ಸಿಎಫ್‌ನ ಸಂಘಟನಾ ಕಾರ್ಯದರ್ಶಿ ಹರೀಶ್ ರಾಜ್‌ಕುಮಾರ್, ಡಾ.ಶೆರಿಲ್ ಕೊಲಾಸೊ , ಕಾಂಗ್ರೆಸ್ ಧುರೀಣ ಲಾರೆನ್ಸ್ ಡಿ ಸೋಜ ಅವರು ಎತ್ತಿದ ಪ್ರಶ್ನೆಗಳಿಗೆ ಸ್ಮಾರ್ಟ್ ಸಿಟಿ ಅಧಿಕಾರಿಗೆ ಸಮರ್ಪಕ ಉತ್ತರ ನೀಡಲು ಸಾಧ್ಯವಾಗಲಿಲ್ಲ.

ಜಲಾಭಿಮುಖ ವಾಯುವಿಹಾರ ಅಭಿವೃದ್ಧಿ ಕಾಮಗಾರಿಗೆ ಟೆಂಡರ್ ಆಗಿದೆ, ಅರ್ಧ ಕೆಲಸ ಆಗಿರುವಾಗ ಈಗ ಯಾಕೆ ಸ್ಥಳಿಯರಿಗೆ ಮಾಹಿತಿ ನೀಡುವುದು. ಮೊದಲು ಯಾಕೆ ನೀಡಿಲ್ಲ ಎಂದು ಪ್ರಶ್ನಿಸಿದರು.

ಸಾರ್ವಜನಿಕರನ್ನು ಕತ್ತಲೆಯಲ್ಲಿಟ್ಟು ಈ ಯೋಜನೆ ಯಾಕೆ ? ಜಲಾಭಿಮುಖ ಅಭಿವೃದ್ಧಿಗೆ ಗೆ ಸಂಬಂಧಿಸಿ ಆರ್‌ಟಿಐ ಮೂಲಕ ಕೇಳಿದ ಪ್ರಶ್ನೆಗಳಿಗೂ ಉತ್ತರ ಸಿಕ್ಕಿಲ್ಲ. ಯೋಜನೆ ಪ್ರಾರಂಭಿಸುವ ಮೊದಲು ಸೃಳೀಯರೊಂದಿಗೆ ಸಮಾ ಲೋಚನೆ ನಡೆಸಲಾಗಿಲ್ಲ. 70 ಕೋಟಿ ರೂ. ವೆಚ್ಚದ ಯೋಜನೆಯ ಮಾಹಿತಿಯನ್ನು ಅಡಗಿಸಿಡಲಾಗಿದೆ ಎಂದು ಭಾಗವಹಿಸಿದ್ದ ಸ್ಥಳೀಯರ ಆಕ್ರೋಶ ವ್ಯಕ್ತಪಡಿಸಿದರು. ಇದರಿಂದಾಗಿ ಸ್ಮಾರ್ಟ್ ಸಿಟಿ ಯೋಜನೆಯ ಮಾಹಿತಿ ನೀಡಲು ಕರೆಯಲಾದ ಸಭೆ ಗೊಂದಲದಲ್ಲೇ ಮುಗಿಯಿತು.






Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News