×
Ad

"ಕೊಂಕಣಿ ಭಾಷೆ, ಸಾಹಿತ್ಯದ ರುಚಿ ಸವಿಯಲು ಭಿನ್ನತೆ ಅಡ್ಡಿಬೇಡ"

Update: 2024-02-10 22:27 IST

ಮಂಗಳೂರು: ಕೊಂಕಣಿ ಭಾಷೆ ಮತ್ತು ಸಾಹಿತ್ಯದ ರುಚಿ ಸವಿಯಲು, ಕಲೆಯನ್ನು ಅಸ್ವಾದಿಸಲು ಕೊಂಕಣಿಯೊಳಗಿನ ಸಮುದಾಯದ ಭಿನ್ನತೆ ಅಡ್ಡಿಬರುತ್ತಿದೆ. ಇದು ಭಾಷೆ, ಸಾಹಿತ್ಯದ ಬೆಳವಣಿಗೆಗೆ ತಡೆಯಾಗುವ ಅಪಾಯವೂ ಇದೆ. ಹಾಗಾಗಿ ಕೊಂಕಣಿ ಭಾಷೆ, ಸಾಹಿತ್ಯ, ಕಲೆಯನ್ನು ಭಿನ್ನತೆ ಮೀರಿ ಬೆಳೆಸಬೇಕು ಎಂದು ರಂಗಕರ್ಮಿ ಎಲ್.ಕೃಷ್ಞಭಟ್ ಅಭಿಪ್ರಾಯಪಟ್ಟರು.

ವಿಶ್ವ ಕೊಂಕಣಿ ಕೇಂದ್ರದ ಕೊಂಕಣಿ ಭಾಷೆ ಮತ್ತು ಸಾಂಸ್ಕೃತಿಕ ಪ್ರತಿಷ್ಠಾನವು ಶಕ್ತಿನಗರದ ಕಲಾಂಗಣ್‌ನಲ್ಲಿ ಏರ್ಪಡಿಸಿ ರುವ ವಿಶ್ವ ಕೊಂಕಣಿ ಸಮಾರಂಭದಲ್ಲಿ ಶನಿವಾರ ನಡೆದ ‘ಕೊಂಕಣಿ ರಂಗಭೂಮಿ ಇಂದು ಮತ್ತು ಮುಂದೆ’ ಎಂಬ ವಿಚಾರ ಗೋಷ್ಠಿಯಲ್ಲಿ ಅವರು ಮಾತನಾಡಿದರು.

ಗೌಡ ಸಾರಸ್ವತರ ನಾಟಕ ನೋಡಲು ಕೆಥೋಲಿಕ್ ಸಮುದಾಯದವರು ಬರುವುದಿಲ್ಲ. ಕೆಥೋಲಿಕ್ ಸಮುದಾಯದ ನಾಟಕಗಳನ್ನು ನೋಡಲು ಗೌಡ ಸಾರಸ್ವತರಿಗೆ ಹೋಗುವುದಿಲ್ಲ. ಇದು ಕಂದಕವನ್ನು ಸೃಷ್ಟಿಸಲಿದೆಯೇ ವಿನಃ ಒಗ್ಗೂಡಿ ಸದು. ಈ ನಿರ್ಲಕ್ಷ್ಯವನ್ನು ಮೀರಿ ನಿಲ್ಲುವ ಪ್ರಯತ್ನ ಆಗಬೇಕಿದೆ ಎಂದು ಎಲ್.ಕೃಷ್ಞಭಟ್ ಹೇಳಿದರು.

ರಂಗ ಕರ್ಮಿ ಕ್ರಿಸ್ಟೋಫರ್ ಕೊಂಕಣಿ ರಂಗಭೂಮಿಯಲ್ಲೂ ಸಾಕಷ್ಟು ವಿಭಿನ್ನ ಪ್ರಯೋಗಗಳಾಗಿವೆ. ಆದರೆ ಮರಾಠಿಗೆ ಹೋಲಿಸಿದರೆ, ನಾವು ತುಂಬಾ ಹಿಂದೆ ಬಿದ್ದಿದ್ದೇವೆ ಎಂದರು.

ಸಮನ್ವಯಕಾರ ಜಾನ್‌ಎಂ.ಪೆರ್ಮನ್ನೂರು ಮಾತನಾಡಿ ನಾಟಕ ಕೇವಲ ಮನರಂಜನೆಯ ಮಾಧ್ಯಮ ಅಲ್ಲ. ಅದು ಸಮಾಜ ಪರಿವರ್ತನೆಯ ಚಿಂತನೆಗಳಿಗೆ ಕಿಡಿಹಚ್ಚಬೇಕು. ಜೊತೆಗೆ ಪ್ರಭುತ್ವಕ್ಕೆ ಸವಾಲೆಸೆಯುಂತಹ ನಾಟಕಗಳು ಹೆಚ್ಚಬೇಕು ಎಂದರು.

ಇತರ ರಂಗಭೂಮಿಗಳಂತೆಯೇ ಕೊಂಕಣಿ ರಂಗಭೂಮಿಯೂ ಇತ್ತೀಚಿನ ದಿನಗಳಲ್ಲಿ ಸೊರಗುತ್ತಿವೆ. ಶಾಲಾ ಕಾಲೇಜು ಗಳಲ್ಲಿ ತರಬೇತಿ ನೀಡಿ ರಂಗಾಸಕ್ತರನ್ನು ಹುಟ್ಟುಹಾಕುವ ಕೆಲಸ ಆಗಬೇಕು ಎಂದು ರಂಗಕರ್ಮಿ ಪ್ರಕಾಶ್ ಶೆಣೈ ಹೇಳಿದರು.

*4 ರಾಜ್ಯಗಳಲ್ಲಿ 25 ಲಕ್ಷಕ್ಕೂ ಅಧಿಕ ಜನರು ಬಳಸುವ ಸುಮಾರು 42 ಆಡುಭಾಷೆಗಳ ಕೊಂಕಣಿಯ ಶೈಲಿಯು ರಾಜ್ಯ ದಿಂದ ರಾಜ್ಯಕ್ಕೆ ವಿಭಿನ್ನವಾಗಿದೆ. ಕೊಂಕಣಿ ಸಾಹಿತ್ಯ ರಚನೆಗೆ ಬಳಸುವ ಲಿಪಿಗಳೂ ಬೇರೆ ಇದೆ. ಹಾಗಾಗಿ ಜಗತ್ತಿನ ಬೇರೆ ಬೇರೆ ದೇಶದಲ್ಲಿ ನೆಲೆಸಿರುವ ಎಲ್ಲಾ ಕೊಂಕಣಿಗರೂ ಒಪ್ಪುವಂತೆ ಭಾಷೆಗೆ ಸಾಂಸ್ಥಿಕ ರೂಪ ನೀಡಬೇಕಿದೆ ಎಂಬ ಅಭಿಪ್ರಾಯವು ‘ಕೊಂಕಣಿ ಭಾಷಾಭಿವೃದ್ಧಿಗೆ ಕೃತಕ ಬುದ್ಧಿಮತ್ತೆ ಅಳವಡಿಕೆ’ ಗೋಷ್ಠಿಯಲ್ಲಿ ವ್ಯಕ್ತವಾಯಿತು. ಗೌರೀಶ ಪ್ರಭು ಸಮನ್ವಯಕಾರರಾಗಿದ್ದರು.

*ವಿಶ್ವ ಕೊಂಕಣಿ ಸಮಾರಂಭವನ್ನು ಎಂಆರ್‌ಪಿಎಲ್‌ನ ಮುಖ್ಯ ಪ್ರಧಾನ ವ್ಯವಸ್ಥಾಪಕ ಯು.ಎಸ್. ಸುರೇಂದ್ರ ನಾಯಕ್ ಉದ್ಘಾಟಿಸಿದರು. ಗೋವಾದ ಸಾಹಿತಿ ದಾಮೋದರ್ ಕಾಮತ್ ಗಣೇಕರ್ ಗೋಷ್ಠಿಯಲ್ಲಿ ಭಾಗವಹಿಸಿದರು. ಕೃತಕ ಬುದ್ಧಿಮತ್ತೆ ತಜ್ಞರಾದ ವೆಂಕಟರಮಣ ಕಿಣಿ ಅಮೆರಿಕದಿಂದ ವೀಡಿಯೊ ಕಾನ್ಫರೆನ್ಸ್ ಮೂಲಕ ಸಲಹೆ ನೀಡಿದರು. ಸಾಹಿತಿಗಳಾದ ಗೋಕುಲ್ ದಾಸ್ ಪ್ರಭು ಹಾಗೂ ಮೆಲ್ವಿನ್ ರಾಡ್ರಿಗಸ್, ಕಿರಣ್ ಬುಡ್ಕುಳೆ, ನಂದಗೋಪಾಲ ಶೆಣೈ ಮಾತನಾಡಿದರು.






 


 


Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News