×
Ad

ಒಕ್ಕಲಿಗರಿಗೆ ಉನ್ನತ ಹುದ್ದೆ, ಚುನಾವಣೆಗಳಲ್ಲಿ ಅವಕಾಶ ನೀಡಲು ದ.ಕ. ಜಿಲ್ಲಾ ಸಂಘ ಆಗ್ರಹ

Update: 2024-02-12 23:32 IST

ಮಂಗಳೂರು, ಫೆ.12: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಒಕ್ಕಲಿಗರು ದೊಡ್ಡ ಸಂಖ್ಯೆಯಲ್ಲಿದ್ದರೂ, ಸಮುದಾಯದ ನಾಯಕರಿಗೆ ರಾಜಕೀಯ ಪಕ್ಷಗಳಲ್ಲಿ ಉನ್ನತ ಹುದ್ದೆಗಳನ್ನು ನೀಡಲಾಗುತ್ತಿಲ್ಲ. ಮುಂಬರುವ ಚುನಾವಣೆಗಳಲ್ಲಿ ಸಮುದಾಯದ ಅರ್ಹ ಅಭ್ಯರ್ಥಿಗಳಿಗೆ ಅವಕಾಶ ನೀಡುವಂತೆ ದಕ್ಷಿಣ ಕನ್ನಡ ಜಿಲ್ಲಾ ಒಕ್ಕಲಿಗ ಗೌಡರ ಸೇವಾ ಸಂಘ(ರಿ) ಆಗ್ರಹಿಸಿದೆ.

ನಗರದ ಖಾಸಗಿ ಹೋಟೆಲೊಂದರಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಘದ ಅಧ್ಯಕ್ಷ ಬಾಲಕೃಷ್ಣ ಡಿ .ಬಿ. ಅವರು 6.50 ಲಕ್ಷಕ್ಕೂ ಅಧಿಕ ಒಕ್ಕಲಿಗರು ವಾಸಿಸುವ ಜಿಲ್ಲೆಯಲ್ಲಿ ಈ ಸಮುದಾಯದ 3.80ಲಕ್ಷಕ್ಕೂ ಮತದಾರರು ಇದ್ದಾರೆ. ದೊಡ್ಡ ಸಮುದಾಯವಾದರೂ ಯಾವುದೇ ರಾಜಕೀಯ ಪಕ್ಷಗಳಲ್ಲಿ ಉನ್ನತ ಹುದ್ದಗಳನ್ನು ನೀಡದೆ ಕಡೆಗಣಿಸಲಾಗುತ್ತದೆ ಎಂದರು.

ಒಕ್ಕಲಿಗ ಸಮುದಾಯಕ್ಕೆ ಹೆಚ್ಚಿನ ಆದ್ಯತೆಯನ್ನು ರಾಜಕೀಯ ಪಕ್ಷಗಳು ನೀಡುವುದರೊಂದಿಗೆ ಸಾಮಾಜಿಕ ಸಮತೋಲನ ವನ್ನು ಕಾಪಾಡಿಕೊಳ್ಳಬೇಕೆಂದು ಸಂಘ ಒತ್ತಾಯಿಸುತ್ತದೆ. ಕರ್ನಾಟಕ ರಾಜ್ಯಾದ್ಯಂತ ಪ್ರಬಲ ಸಮುದಾಯವಾಗಿದೆ. ಸತ್ಯ, ಧರ್ಮ, ನಿಷ್ಠೆಯಲ್ಲಿ ನಡೆಯುವ ಒಕ್ಕಲಿಗ ಸಮುದಾಯ ರಾಜಪರಂಪರೆಯ ಹಿನ್ನೆಲೆಯ ಸಮುದಾಯವಾಗಿದ್ದು ಕೇವಲ ಕೃಷಿಕರಾಗಿ ಮಾತ್ರ ಗುರುತಿಸಿಕೊಂಡಿಲ್ಲ ಶೈಕ್ಷಣಿಕ, ವೈದ್ಯಕೀಯ, ರಾಜಕೀಯ, ಆರ್ಥಿಕ ಮತ್ತು ಸಾಮಾಜಿಕವಾಗಿಯೂ ಇತರೆ ಸಮುದಾಯಕ್ಕೆ ಸಮಾನವಾಗಿ ಬಹಳಷ್ಟು ಕೊಡುಗೆ ನೀಡಿದೆ. ಅದಲ್ಲದೆ ದೇಶದ ಪ್ರಪ್ರಥಮ ಸ್ವಾತಂತ್ರ್ಯ ಹೋರಾಟದಲ್ಲಿ ಗೌಡ ಸಮುದಾಯದ ನಾಯಕರು ಕೊಡುಗೆ ನೀಡಿದ್ದಾರೆ. ಕೆದಂಬಾಡಿ ರಾಮಯ್ಯ ಗೌಡರು, ಗುಡ್ಡೆಮನೆ ಅಪ್ಪಯ್ಯ ಗೌಡರು, ಬೆಂಗಳೂರು ನಿರ್ಮಾತೃ ನಾಡ ಪ್ರಭು ಕೆಂಪೇಗೌಡರು, ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಹಾಗೂ ಈವರೆಗೆ ಏಳು ಮುಖ್ಯಮಂತ್ರಿಗಳನ್ನು ಈ ಸಮುದಾಯ ನೀಡಿದೆ. ಕರ್ನಾಟಕ ವಿಧಾನ ಸೌಧ ಕಟ್ಟಿಸಿದ, ಮೊದಲ ರಾಷ್ಟ್ರ ಕವಿಯನ್ನು ನೀಡಿದ ಸಮುದಾಯ ಅಂದರೆ ಅದು ಒಕ್ಕಲಿಗ ಸಮುದಾಯ. ಅಂತರ್‌ರಾಷ್ಟ್ರೀಯ ಮಟ್ಟದಲ್ಲೂ ಪ್ರಭಾವ ಇರುವ ಶ್ರೀ ಕ್ಷೇತ್ರ ಆದಿಚುಂಚನಗಿರಿ ಮಹಾಸಂಸ್ಥಾನ ಮಠವನ್ನು ಹೊಂದಿದೆ. ಇತರ ಸಮುದಾಯವರೊಂದಿಗೆ ಅನ್ನೋನ್ಯತೆಯಿಂದ ನಡೆದುಕೊಂಡು ಎಲ್ಲ ಸಮುದಾಯವನ್ನು ಅಪ್ಪಿಕೊಂಡು ಒಪ್ಪಿಕೊಂಡು ಒಕ್ಕಲಿಗ ಸಮುದಾಯ ಬಂದಿದೆ.

ದಕ್ಷಿಣ ಕನ್ನಡ ಜಿಲ್ಲೆಯ ಪ್ರತಿ ತಾಲೂಕಿನಲ್ಲಿ ಈ ಹಿಂದಿನಿಂದಲೂ ಒಕ್ಕಲಿಗ ಸಂಘಗಳು ಬಲಿಷ್ಠವಾಗಿ ಸಂಘಟನೆಯಲ್ಲಿ ತೊಡಗಿಸಿಕೊಂಡು ಸಮಾಜಮುಖಿ ಕೆಲಸ ಕಾರ್ಯಗಳನ್ನು ನಡೆಸುತ್ತಾ ಬಂದಿದೆ. ಹಾಗಾಗಿ ಜಿಲ್ಲೆಯಾದ್ಯಾಂತ ಬೇರೆ ಬೇರೆ ಸಮುದಾಯ ಸಂಘಟನೆಗಳಿದ್ದರೂ, ಒಕ್ಕಲಿಗ ಸಮುದಾಯವನ್ನು ಇನ್ನಷ್ಟು ಪ್ರಬಲಗೊಳಿಸುವ ನಿಟ್ಟಿನಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಒಕ್ಕಲಿಗ ಗೌಡರ ಸೇವಾ ಸಂಘ (ರಿ) ಮಂಗಳೂರು ಸಂಘವನ್ನು ಸ್ಥಾಪಿಸಲಾಗಿದೆ. ಈ ಸಂಘದಲ್ಲಿ ಪ್ರತಿ ತಾಲೂಕಿನಲ್ಲಿ ಆಯ್ಕೆಗೊಂಡವರು ನಿರ್ದೇಶಕರಾಗಿರುತ್ತಾರೆ. ಶೈಕ್ಷಣಿಕ, ವೈದ್ಯಕೀಯ, ರಾಜಕೀಯ, ಆರ್ಥಿಕತೆ ಮತ್ತು ಸಾಮಾಜಿಕವಾಗಿ ನಮ್ಮ ಸಮುದಾಯವರನ್ನು ಸದೃಡಗೊಳಿಸಿ ರಾಜ್ಯದ ಮತ್ತು ದೇಶದ ಅಭಿವೃದ್ಧಿಗೆ ತೊಡಗಿಸಿ ಕೊಳ್ಳುವುದು ನಮ್ಮ ಸಂಘದ ಪ್ರಮುಖ ಉದ್ದೇಶವಾಗಿದೆ.

ಇತ್ತೀಚಿನ ದಿನಗಳಲ್ಲಿ ನಮ್ಮ ಸಮುದಾಯದವರನ್ನು ಕೀಳಾಗಿ ಕಾಣುವುದು, ಅವಕಾಶಗಳಿಂದ ವಂಚಿಸುವುದು ಮುಂತಾದ ಬೆಳವಣಿಗೆಗಳನ್ನು ಗಮನಿಸಿದ್ದೇವೆ. ರಾಜಕೀಯವಾಗಿ ನಮ್ಮ ಸಮುದಾಯದ ಅರ್ಹ ವ್ಯಕ್ತಿಗಳನ್ನು ಕಡೆಗಣಿಸುವುದು ಕಂಡು ಬರುತ್ತದೆ. ಮುಂಬರುವ ಚುನಾವಣೆಗಳಲ್ಲಿ ನಮ್ಮ ಸಮುದಾಯದ ಅರ್ಹ ಅಭ್ಯರ್ಥಿಗಳಿಗೆ ಅವಕಾಶವನ್ನು ನೀಡಿ ನಮಗಾದ ಅನ್ಯಾಯವನ್ನು ಸರಿಪಡಿಸಬೇಕಾಗಿ ಎಲ್ಲಾ ರಾಜಕೀಯ ಪಕ್ಷದವರಲ್ಲೂ ಕೇಳಿಕೊಳ್ಳುತ್ತಿದ್ದೇವೆ. ಇದು ಸಾಧ್ಯವಾಗದೇ ಹೋದರೆ ಮುಂದಿನ ದಿನಗಳಲ್ಲಿ ನಾವುಗಳು ಸೂಕ್ತ ನಿರ್ಧಾರಗಳನ್ನು ತೆಗೆದುಕೊಳ್ಳುತ್ತೇವೆ ಎಂದು ಬಾಲಕೃಷ್ಣ ಗೌಡ ಡಿ.ಬಿ ಪ್ರಕಟಿಸಿದರು.

ಸಂಘದ ಉಪಾಧ್ಯಕ್ಷರಾದ ಪುರಂದರ ಗೌಡ ಮತ್ತು ಭಾಸ್ಕರ ಗೌಡ ದೇವಸ್ಯ, ಪ್ರಧಾನ ಕಾರ್ಯದರ್ಶಿ ಡಾ.ಎನ್.ಎ. ಜ್ಞಾನೇಶ್, ಜಂಟಿ ಕಾರ್ಯದರ್ಶಿ ದಾಮೋದರ ಗೌಡ, ಕೋಶಾಧಿಕಾರಿ ಕೆ.ವಿಶ್ವನಾಥ ಗೌಡ, ಜಂಟಿ ಕೋಶಾಧಿಕಾರಿ ಸೂರಜ್ ಕುಮಾರ್ ಯು, ಕಾರ್ಯಕಾರಿ ಸಮಿತಿ ಸದಸ್ಯರುಗಳಾದ ರಕ್ಷಿತ್ ಪುತ್ತಿಲ, ಕೆ.ವಿಜಯ ಗೌಡ, ಸೌಮ್ಯಲತಾ, ಯಶವಂತ, ಬಿ.ಅಮರನಾಥ, ಗೌರಿ ಎಚ್, ಶ್ರೀಕಾಂತ್ ಎಂ, ಎಚ್‌ಎ ಅನೂಪ್, ಮಧುರಾ ಎಂ.ಆರ್, ವಿಶ್ವನಾಥ ಎನ್, ಸಾರಿಕಾ ಸುರೇಶ್, ಎಸ್.ಶಾಂತರಾಜ್ ಮತ್ತು ಯುಎಸ್ ಲಿಂಗಯ್ಯ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News