"ತುರ್ತು ಪರಿಸ್ಥಿತಿ" ಬಗ್ಗೆ ಸಂವಾದ ಕಾರ್ಯಕ್ರಮ
ಮಂಗಳೂರು: ಸಾಮಾಜಿಕ ನ್ಯಾಯಕ್ಕಾಗಿ ನಾಗರಿಕರು ಸಂಘಟನೆ ವತಿಯಿಂದ ʼತುರ್ತು ಪರಿಸ್ಥಿತಿ- ಸಂವಿಧಾನಕ್ಕೆ ಮಾಡಿದ ಅಪಚಾರʼ ಎಂಬ ವಿಷಯದ ಕುರಿತ ಸಂವಾದ ಕಾರ್ಯಕ್ರಮವು ಮಂಗಳವಾರ ನಗರದ ಟಿ.ವಿ.ರಮಣ ಪೈ ಸಭಾಂಗಣದಲ್ಲಿ ನಡೆಯಿತು.
ಮಾಜಿ ಸಂಸದ ಪ್ರತಾಪ ಸಿಂಹ ಮಾತನಾಡಿ ಡಾ. ಬಿ.ಆರ್. ಅಂಬೇಡ್ಕರ್ ರಚಿಸಿದ ಸಂವಿಧಾನದವನ್ನು ಬದಲಾಯಿಸಿದ್ದೇ ಕಾಂಗ್ರೆಸ್. 50 ವರ್ಷದ ಹಿಂದೆ ತುರ್ತು ಪರಿಸ್ಥಿತಿ ಹೇರಿಕೆ ಹಾಗೂ ತಿದ್ದುಪಡಿ ಮೂಲಕ ಸಂವಿಧಾನವನ್ನು ಬುಡಮೇಲು ಮಾಡಿರುವುದು ಇಂದಿರಾ ಗಾಂಧಿ. ಕಾಂಗ್ರೆಸ್‌ನಂತೆ ಸಂವಿಧಾನವನ್ನು ಬುಡಮೇಲು ಮಾಡಲು ಯಾರಿಂದಲೂ ಸಾಧ್ಯ ವಿಲ್ಲ. ತುರ್ತು ಪರಿಸ್ಥಿತಿ ವಿರುದ್ಧ ಹೋರಾಟ ನಡೆಸಿದವರಿಗೆ ಮುಂದಿನ ದಿನಗಳಲ್ಲಿ ಪಿಂಚಣಿ ನೀಡುವ ಬಿಜೆಪಿಯ ಭರವಸೆಗೆ ಬದ್ಧರಾಗಿದ್ದೇವೆ ಎಂದರು.
ಸಕಲೇಶಪುರ ಶಾಸಕ ಸಿಮೆಂಟ್ ಮಂಜು ಮಾತನಾಡಿ ದೇಶದಲ್ಲಿ ತುರ್ತು ಪರಿಸ್ಥಿತಿ ಹೇರಿದ ದಿನ ದೇಶಕ್ಕೆ ಕರಾಳ ದಿನವಾಗಿದೆ. ಪ್ರಜಾಪ್ರಭುತ್ವವನ್ನು ಕಗ್ಗೊಲೆ ಮಾಡಿದ ದಿನವದು. ಅಕ್ರಮವಾಗಿ ಚುನಾವಣೆ ಗೆದ್ದ ಇಂದಿರಾ ಗಾಂಧಿ ನ್ಯಾಯಾಲಯದ ವಿರುದ್ಧ ಹೋರಾಡಲು ಸರಕಾರಿ ಯಂತ್ರವನ್ನು ಬಳಸಿಕೊಂಡಿದ್ದರು ಎಂದರು.
ದ.ಕ. ಜಿಲ್ಲಾ ಕೊಟ್ಟಾರಿ ಸಮಾಜ ಸುಧಾರಕ ಸಂಘದ ಅಧ್ಯಕ್ಷ ಮಹಾಬಲ ಕೊಟ್ಟಾರಿ ಅಧ್ಯಕ್ಷತೆ ವಹಿಸಿದ್ದರು. ಶಾಸಕ ವೇದವ್ಯಾಸ ಕಾಮತ್, ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ ಮತ್ತಿತರರು ಉಪಸ್ಥಿತರಿದ್ದರು.
ಕಾರ್ಯಕ್ರಮದ ಸಂಚಾಲಕ ಮೇಯರ್ ಸುಧೀರ್ ಶೆಟ್ಟಿ ಕಣ್ಣೂರು ಸ್ವಾಗತಿಸಿದರು. ರಾಕೇಶ್ ರೈ ಕಡೆಂಜಿ ಕಾರ್ಯಕ್ರಮ ನಿರೂಪಿಸಿದರು.