ಸುರತ್ಕಲ್: ಪುತ್ತಿಗೆ ರಘುರಾಮ ಹೊಳ್ಳರಿಗೆ ಪ್ರತಿಷ್ಠಿತ ಅಗರಿ ಪ್ರಶಸ್ತಿ
ಸುರತ್ಕಲ್: ಯುವಚೇತನ ಹೊಸಬೆಟ್ಟು ಕುಳಾಯಿ ಇದರ 31ನೇ ವರ್ಷದ ವಾರ್ಷಿಕೋತ್ಸವ ಸಮಾರಂಭ ಹಾಗೂ ಅಗರಿ ಶ್ರೀನಿವಾಸ ಭಾಗವತ ಸಂಸ್ಮರಣೆ ವೇದಿಕೆ ಸುರತ್ಕಲ್ ಪ್ರತೀ ವರ್ಷ ನಡೆಸಿಕೊಂಡು ಬರುತ್ತಿರುವ ಪ್ರತಿಷ್ಠಿತ ಅಗರಿ ಪ್ರಶಸ್ತಿ, ಅಗರಿ ರಘುರಾಮ ಸಮ್ಮಾನ, ಅಗರಿ ಸಂಸ್ಮರಣೆ, ವಿದ್ಯಾರ್ಥಿವೇತನ ವಿತರಣೆ, ಪ್ರತಿಭಾ ಪುರಸ್ಕಾರ, ಅಭಿನಂದನಾ ಸಮಾರಂಭ ಹಾಗೂ ಯಕ್ಷಗಾನ ಬಯಲಾಟ ಕಾರ್ಯಕ್ರಮವು ಜು.28ರಂದು ಹೊಸಬೆಟ್ಟು ನವಗಿರಿ ಕಲ್ಯಾಣ ಮಂಟಪದಲ್ಲಿ ಜರುಗಲಿದೆ.
ಈ ಸಂಬಂಧ ಸುರತ್ಕಲ್ ಅಗರಿಯಲ್ಲಿ ಆಯೋಜಿಸಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ ಯುವಚೇತನ ಹೊಸ ಬೆಟ್ಟು ಕುಳಾಯಿ ಇದರ ಅಧ್ಯಕ್ಷ ಪ್ರಶಾಂತ್ ರಾವ್ ಎಚ್., ಜು.28ರಂದು ಬೆಳಗ್ಗೆ 9.30ರಿಂದ ಬ್ರಾಹ್ಮಣ ಸಮಾಜಕ್ಕಾಗಿ ಮಾತ್ರ ಸೀಮಿತವಾಗಿರುವ "ಭಲೇ ಜೋಡಿ ಸೀಸನ್ -3ʼ ಆಯೋಜಿಸಲಾಗಿದ್ದು ವಿಜೇತರಾಗುವ ಜೋಡಿಗೆ ಪ್ರಥಮ ಚಿನ್ನದ ನಾಣ್ಯ ಮತ್ತು ದ್ವತೀಯ ಬಹುಮಾನವಾಗಿ ಬೆಳ್ಳಿಯ ನಾಣ್ಯ ನೀಡಿ ಪುರಸ್ಕರಿಸಲಾಗುವುದು. ಜೊತೆಗೆ ಎಲ್ಲಾ ಸಮುದಾಯ ದವರಿಗಾಗಿ ಕ್ರೀಡೋತ್ಸವ ಆಯೋಜಿಸಲಾಗಿದೆ ಎಂದರು.
ಅಗರಿ ರಾಘವೇಂದ್ರ ರಾವ್ ಅವರು ಮಾತನಾಡಿ, ಈ ವೇಳೆ 2023ನೇ ಸಾಲಿನ ಪ್ರತಿಷ್ಠಿತ ಅಗರಿ ಪ್ರಶಸ್ತಿಗೆ ಅಭಿಜ್ಞ ಯಕ್ಷಗಾನ ಭಾಗವತರಾದ ಪುತ್ತಿಗೆ ರಘುರಾಮ ಹೊಳ್ಳ ಅವರು ಆಯ್ಕೆಯಾಗಿದ್ದು, ಅಗರಿ ರಘುರಾಮ ಸಮ್ಮಾನ ಪುರಸ್ಕಾರಕ್ಕೆ ಉಡುಪಿಯ ಕಲೆ ಮತ್ತು ಸಮಾಜ ಸೇವಾ ಸಂಸ್ಥೆ ಯಕ್ಷಗಾನ ಕಲಾರಂಗ(ರಿ) ಆಯ್ಕೆಯಾಗಿದೆ. ಅಗರಿ ಸಂಸ್ಮರಣೆಯನ್ನು ಭರತನಾಟ್ಯ ಮತ್ತು ಯಕ್ಷಗಾನ ಕಲಾವಿದೆ ವಿದುಷಿ ಸಮಂಗಳಾ ರತ್ನಾಕರ ನಡೆಸಿಕೊಡಲಿದ್ದಾರೆ. ಅಭಿನಂದನಾ ಭಾಷಣವನ್ನು ಉಪನ್ಯಾಸಕರು ಮತ್ತು ಯಕ್ಷಗಾನ ಕಲಾವಿದ ವಾದಿರಾಜ ಕಲ್ಲೂರಾಯ ಮಾಡಲಿದ್ದಾರೆ ಎಂದು ನುಡಿದರು.
ಸಂಜೆ 3ರಿಂದ ಸಭಾ ಕಾರ್ಯಕ್ರಮ ನಡೆಯಲಿದ್ದು, ಅಧ್ಯಕ್ಷತೆಯನ್ನು ಮೂಡುಬಿದಿರೆ ಧನಲಕ್ಷ್ಮೀ ಕ್ಯಾಶ್ಯಾಸ್‌ನ ಶ್ರೀಪತಿ ಭಟ್ ವಹಿಸಲಿದ್ದಾರೆ. ಆಶೀರ್ವಚನವನ್ನು ಕಟೀಲು ಕ್ಷೇತ್ರದ ಅನುವಂಶಿಕ ಅರ್ಚಕರಾದ ಹರಿನಾರಾಯಣದಾಸ ಅಸ್ರಣ್ಣ ನೀಡಲಿ ದ್ದಾರೆ. ಮುಖ್ಯಅತಿಥಿಗಳಾಗಿ ಸಂಸದ ಕ್ಯಾಪ್ಟನ್ ಬ್ರಜೇಶ್ ಚೌಟ, ಶ್ರೀಕಾಂತ ಭಟ್, ಗುರುರಾಜ ಆಚಾರ್ಯ ಹೊಸಬೆಟ್ಟು, ರಮೇಶ್ ರಾವ್ ಮೊದಲಾದವರು ಭಾಗವಹಿಸಲಿದ್ದಾರೆ ಎಂದು ಮಾಹಿತಿ ನೀಡಿದರು.
ಇದೇ ಸಂದರ್ಭ ಸಾಧನೆ ಗೈದಿರುವ ಸಂಘದ ಸದಸ್ಯರಾದ ನಿಧಿಶ ಹೊಸಬೆಟ್ಟು, ರಾಘವೇಂದ್ರ ಎಚ್.ವಿ., ರಾಕೇಶ್ ಹೊಸಬೆಟ್ಟು ಅವರನ್ನು ಅಭಿನಂಧಿಸಲಾಗುವುದು ಎಂದು ಅವರು ಮಾಹಿತಿ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಅಗರಿ ರಾಘವೇಂದ್ರ ರಾವ್, ಯುವಚೇತನ ಹೊಸಬೆಟ್ಟು ಅಧ್ಯಕ್ಷ ಪ್ರಶಾಂತ್ ರಾವ್ ಎಚ್., ಉಪಾಧ್ಯಕ್ಷ ಅಗರಿ ಕಿರಣ್ ರಾವ್, ಶೇಷಶಯನ, ಅಗರಿ ಅಭಿನಿತ್ ರಾವ್ ಮತ್ತಿತರರು ಉಪಸ್ಥಿತರಿದ್ದರು.