×
Ad

ಮಂಗಳೂರು ವಿ.ವಿ. ಕಾಲೇಜು ಹಾಗೂ ಪಿ.ಎ. ಪ್ರಥಮ ದರ್ಜೆ ಕಾಲೇಜಿನ ನಡುವೆ ಒಡಂಬಡಿಕೆ

Update: 2025-01-03 20:19 IST

ಮಂಗಳೂರು, ಜ.3: ನಗರದ ವಿಶ್ವ ವಿದ್ಯಾನಿಲಯ ಕಾಲೇಜಿನ ಸ್ನಾತಕೋತ್ತರ ವಾಣಿಜ್ಯ ವಿಭಾಗ, ಆಂತರಿಕ ಗುಣಮಟ್ಟ ಖಾತರಿ ಕೋಶ ಹಾಗೂ ಕೊಣಾಜೆ ನಡುಪದವಿನ ಪಿ.ಎ ಪ್ರಥಮ ದರ್ಜೆ ಕಾಲೇಜಿನ ಆಶ್ರಯದಲ್ಲಿ ಗ್ರಾಹಕ ಹಿತರಕ್ಷಣೆ ಮತ್ತು ಹಕ್ಕುಗಳಿಗೆ ಸಂಬಂಧಿಸಿದಂತೆ ವಿವಿ ಕಾಲೇಜು ಮತ್ತು ಪಿ.ಎ. ಪ್ರಥಮ ದರ್ಜೆ ಕಾಲೇಜುಗಳ ನಡುನ ಒಡಂಬಡಿಕೆ ಪತ್ರಕ್ಕೆ ನಗರದ ಶಿವರಾಮ ಕಾರಂತ ಭವನದಲ್ಲಿ ಸಹಿ ಹಾಕಲಾಯಿತು.

ಮಂಗಳೂರು ಬಾರ್ ಅಸೋಸಿಯೇಶನ್‌ನ ನಿಕಟಪೂರ್ವ ಕಾರ್ಯದರ್ಶಿ ಶ್ರೀಧರ್ ಏಣ್ಮಕಜೆ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು ನಮ್ಮ ದೇಶದಲ್ಲಿ ಪ್ರತಿಯೊಬ್ಬರೂ ಕಾನೂನಿನ ಚೌಕಟ್ಟಿನ ಒಳಗೆ ಬದುಕುತ್ತಿದ್ದೇವೆ. ಹಾಗಾಗಿ ಗ್ರಾಹಕ ಹಿತರಕ್ಷಣಾ ಕಾನೂನಿನ ಬಗೆಗೆ ಜಾಗೃತಿ ಹೊಂದಿರುವುದು ಈ ಹೊತ್ತಿನ ಅಗತ್ಯ ಎಂದರು.

ಪಿ.ಎ. ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ. ಸರ್ಫರಾಜ್ ಹಸೀಂ ಮಾತನಾಡಿ ಡಿಜಿಟಲ್ ಯುಗದಲ್ಲಿ ಇಂತಹ ಒಪ್ಪಂದಗಳ ಅಗತ್ಯವಿದೆ. ಸಮಾಜದ ಪ್ರತಿಯೊಬ್ಬರೂ ಒಂದಲ್ಲ ಒಂದು ರೀತಿಯಲ್ಲಿ ಮೋಸ ಹೋಗಿರುವ ಸಾಧ್ಯತೆ ಇದೆ. ಹಾಗಾಗಿ ಈ ಬಗ್ಗೆ ಸಮಾಜದಲ್ಲಿ ಜಾಗೃತಿ ಮೂಡಿಸುವ ಅಗತ್ಯವಿದೆ. ಮೋಸ ಹೋದ ಸಂದರ್ಭ ಮೌಖಿಕ ದೂರಿಗಿಂತ ಲಿಖಿತ ದೂರುಗಳು ಹೆಚ್ಚು ಪರಿಣಾಮಕಾರಿಯಾಗಿರುತ್ತದೆ ಎಂದರು.

ಒಡಂಬಡಿಕೆಯ ಸಂಯೋಜಕ ಡಾ.ಎ.ಸಿದ್ದೀಕ್ ಮಾತನಾಡಿ ಇವತ್ತಿನ ದಿನಗಳಲ್ಲಿ ಗ್ರಾಹಕರ ಧ್ವನಿ ಇಲ್ಲವಾಗಿದೆ. ಭ್ರೂಣದಲ್ಲಿರುವ ಶಿಶುನಿಂದ ಹಿಡಿದು ಸಾವನ್ನಪ್ಪಿದ ವ್ಯಕ್ತಿವರೆಗೂ ಗ್ರಾಹಕ ಹಿತರಕ್ಷಣಾ ಕಾಯ್ದೆ ಅನ್ವಯವಾಗುತ್ತಿದೆ. ಮಾರುಕಟ್ಟೆಯಲ್ಲಿ ವಿದ್ಯಾವಂತರೇ ಮೋಸ ಹೋಗುತ್ತಿರುವ ಈ ಕಾಲದಲ್ಲಿ ಗ್ರಾಮೀಣ ಜನರ ಪಾಡೇನು ಎಂಬುದರ ಬಗ್ಗೆ ಗಂಭೀರವಾಗಿ ಆಲೋಚನೆ ಮಾಡಬೇಕಾಗಿದೆ. ದೇಶದಲ್ಲಿ ಇಂದಿಗೂ ಗ್ರಾಹಕರ ಪರವಾಗಿ ಮಾತನಾಡುವ ಧ್ವನಿ ಇಲ್ಲವಾ ಗಿರುವುದು ವಿಷಾದನೀಯ. ಗ್ರಾಹಕರ ಹಕ್ಕುಗಳ ಬಗ್ಗೆ ಜಾಗೃತಿ ಮೂಡಿಸುವುದು ಇಂದಿನ ಅಗತ್ಯ ಎಂದರು.

ವಿವಿ ಕಾಲೇಜಿನ ಪ್ರಾಂಶುಪಾಲ ಪ್ರೊ. ಗಣಪತಿ ಗೌಡ ಎಸ್. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಪಿ.ಎ ಎಜುಕೇಶನ್ ಸಂಸ್ಥೆಗಳ ವಿದ್ಯಾರ್ಥಿ ಕ್ಷೇಮಪಾಲನಾ ಮುಖ್ಯಸ್ಥ ಡಾ. ಸೈಯದ್ ಅಮೀನ್ ಅಹ್ಮದ್, ವಿವಿ ಕಾಲೇಜಿನ ವಾಣಿಜ್ಯ ವಿಭಾಗದ ಮುಖ್ಯಸ್ಥೆ ಡಾ. ಸುಧಾ ಎನ್. ವೈದ್ಯ ಮಾತನಾಡಿದರು.

ಪೇಸ್ ನಾಲೆಜ್ ಸಿಟಿಯ ಎ.ಜಿ.ಎಂ ಶರ್ಫುದ್ಧೀನ್ ಪಿ.ಕೆ. ಉಪಸ್ಥಿತರಿದ್ದರು. ಆಂತರಿಕ ಗುಣಮಟ್ಟ ಖಾತರಿಕೋಶದ ಸಂಯೋಜಕ ಡಾ. ಸಿದ್ಧರಾಜು ಎಂ.ಎನ್ ಸ್ವಾಗತಿಸಿದರು. ಉಪನ್ಯಾಸಕಿ ಶೀತಲ್ ವಂದಿಸಿದರು. ಡಾ. ರಮ್ಯಾ ಕೆ. ಆರ್. ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News