×
Ad

ಗಾಂಧಿ ತತ್ವಾದರ್ಶ ಬಗ್ಗೆ ಜನರಿಗೆ ಅರಿವು ಮೂಡಿಸುವುದು ಅಗತ್ಯ: ರಮಾನಾಥ ರೈ

Update: 2025-01-30 19:39 IST

ಮಂಗಳೂರು: ಮಹಾತ್ಮ ಗಾಂಧಿ ವಿಚಾರಧಾರೆ, ಮೌಲ್ಯಗಳು ಭಾರತದಲ್ಲಿ ಮಾತ್ರವಲ್ಲ ಜಗತ್ತಿನಲ್ಲಿಯೇ ಇಂದಿಗೂ ಪ್ರಸ್ತುತ ಎಂದು ಮಾಜಿ ಸಚಿವ ಬಿ.ರಮಾನಾಥ ರೈ ಹೇಳಿದ್ದಾರೆ.

ಗುರುವಾರ ನಗರದ ಮಲ್ಲಿಕಟ್ಟೆಯ ಕಾಂಗ್ರೆಸ್ ಭವನದಲ್ಲಿ ಗುರುವಾರ ಆಯೋಜಿಸಲಾದ ಮಹಾತ್ಮ ಗಾಂಧಿ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಗಾಂಧಿ ಸಿನೆಮಾ ಬಂದ ನಂತರ ಗಾಂಧೀಜಿಯ ಪರಿಚಯ ಆಗಿದ್ದು ಎನ್ನುವ ವ್ಯಕ್ತಿ ಪ್ರಧಾನಿಯಾಗಿರುವುದು ದುರ್ದೈವ. ಸಮಾಜದಲ್ಲಿ ಹಿಂಸೆಯ ವಾತಾವರಣ ಹೆಚ್ಚುತ್ತಿದ್ದು, ಇದನ್ನು ತಡೆಗಟ್ಟಲು ಗಾಂಧೀಜಿಯವರ ಅಹಿಂಸಾ ಧೋರಣೆಯನ್ನು ಮತ್ತೆ ಸಮಾಜಕ್ಕೆ ತಿಳಿಸಬೇಕಾಗಿದೆ. ಅವರ ತತ್ವಾದರ್ಶ, ಜಾತ್ಯತೀತ ನಿಲುವು ಮತ್ತು ಸಂದೇಶಗಳ ಬಗ್ಗೆ ಜನರಿಗೆ ಅರಿವು ಮೂಡಿಸುವುದು ಅಗತ್ಯತೆ ಇದೆ ತಿಳಿಸಿದರು.

ಗಾಂಧಿ ಸಾಮಾಜಿಕ ಸುಧಾರಕ, ಧರ್ಮನಿಷ್ಠರು, ಸತ್ಯವಂತರು ಮತ್ತು ಧಾರ್ಮಿಕ ವ್ಯಕ್ತಿ ಎಂದು ಬಣ್ಣಿಸಿದರು.

ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕೆ.ಹರೀಶ್ ಕುಮಾರ್ ಮಾತನಾಡಿ, ಮಹಾತ್ಮಾ ಗಾಂಧಿ ಅಹಿಂಸಾ ಮಾರ್ಗದ ಮೂಲಕ ದೇಶಕ್ಕೆ ಸ್ವಾತಂತ್ರ್ಯ ತಂದು ಕೊಟ್ಟರು. ಸತ್ಯ, ಅಹಿಂಸೆಯನ್ನು ಪ್ರತಿಪಾದಿಸಿದ ಅವರು ನುಡಿದಂತೆ ಬದುಕಿದ್ದ ಅಪರೂಪದ ಮಹಾನ್ ವ್ಯಕ್ತಿ. ದೇಶದ ಸಾಮಾನ್ಯ ವ್ಯಕ್ತಿಗೂ ರಾಜಕೀಯ ಚಿಂತನೆಗೆ ಹಚ್ಚಿದವರು ಗಾಂಧೀಜಿ. ಗಾಂಧಿ ಎಂದರೆ ಕೇವಲ ವ್ಯಕ್ತಿಯಲ್ಲ ಜೀವನ ವಿಧಾನ ಎಂದರು.

ಕಾರ್ಯಕ್ರಮದಲ್ಲಿ ಮಾಜಿ ಶಾಸಕ ಜೆ.ಆರ್.ಲೋಬೊ, ಕೆಪಿಸಿಸಿ ಮಾಜಿ ಪ್ರಧಾನ ಕಾರ್ಯದರ್ಶಿ ಪದ್ಮರಾಜ್.ಆರ್ ನುಡಿನಮನ ಸಲ್ಲಿಸಿದರು. ಮಂಗಳೂರು ನಗರ ಬ್ಲಾಕ್ ಅಧ್ಯಕ್ಷ ಪ್ರಕಾಶ್ ಸಾಲ್ಯಾನ್, ಜಿಲ್ಲಾ ಮುಂಚೂಣಿ ಘಟಕಾಧ್ಯಕ್ಷ ಕೆ.ಕೆ.ಶಾಹುಲ್ ಹಮೀದ್, ಜೋಕಿಂ ಡಿಸೋಜ, ದಿನೇಶ್ ಮೂಳೂರು, ಮುಖಂಡರಾದ ಟಿ.ಹೊನ್ನಯ್ಯ, ನೀರಜ್ ಚಂದ್ರಪಾಲ್, ಟಿ.ಕೆ.ಸುಧೀರ್, ಶಬ್ಬೀರ್ ಸಿದ್ದಕಟ್ಟೆ, ಕೆ.ಅಪ್ಪಿ, ಯೋಗೀಶ್ ಕುಮಾರ್, ಸಲೀಂ ಪಾಂಡೇಶ್ವರ, ಅಬ್ದುಲ್ ರಹಿಮಾನ್ ಪಡ್ಪು, ವಹಾಬ್ ಕುದ್ರೋಳಿ, ರಮಾನಂದ ಪೂಜಾರಿ, ಟಿ.ಸಿ.ಗಣೇಶ್, ಮೋಹನ್ ದಾಸ್ ಕೊಟ್ಟಾರಿ, ಸಬಿತಾ ಮಿಸ್ಕಿತ್, ಚಂದ್ರಕಲಾ ಜೋಗಿ, ಮಂಜುಳಾ ನಾಯಕ್, ಜಾರ್ಜ್, ದುರ್ಗಾ ಪ್ರಸಾದ್, ಸೌಹಾನ್ ಎಸ್.ಕೆ, ಸಮರ್ಥ್ ಭಟ್ ಉಪಸ್ಥಿತರಿದ್ದರು.





Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News