ಮಂಗಳೂರಿನಿಂದ ದಿಲ್ಲಿಗೆ ಏರ್ ಇಂಡಿಯಾ ಎಕ್ಸ್‌ಪ್ರೆಸ್ ನೇರ ವಿಮಾನ ಹಾರಾಟ ಆರಂಭ
ಮಂಗಳೂರು, ಫೆ.1: ಮಂಗಳೂರು ಅಂತರ್‌ರಾಷ್ಟ್ರೀಯ ವಿಮಾನ ನಿಲ್ದಾಣದಿಂದ ರಾಜಧಾನಿ ದಿಲ್ಲಿಗೆ ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನವು ಶನಿವಾರ ಹಾರಾಟ ಆರಂಭಿಸಿದೆ.
ಏರ್‌ಇಂಡಿಯಾ ಎಕ್ಸ್‌ಪ್ರೆಸ್ (ನಂ.1552) ಉದ್ಘಾಟನಾ ವಿಮಾನವು ಬೆಳಗ್ಗೆ 6:40 ಕ್ಕೆ ಮಂಗಳೂರು ಅಂತರ್‌ರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಹೊರಟು ಬೆಳಗ್ಗೆ 9:35 ಕ್ಕೆ ದಿಲ್ಲಿ ಅಂತರ್‌ರಾಷ್ಟ್ರೀಯ ವಿಮಾನ ನಿಲ್ದಾಣ ತಲುಪಿತು. ಇದೇ ವೇಳೆ ಇನ್ನೊಂದು ವಿಮಾನ( ನಂ. 2768) ಬೆಳಿಗ್ಗೆ 6:40ಕ್ಕೆ ರಾಷ್ಟ್ರ ರಾಜಧಾನಿಯಿಂದ ಹೊರಟು ಬೆಳಗ್ಗೆ 9:35 ಕ್ಕೆ ಮಂಗಳೂರಿಗೆ ಬಂದಿಳಿಯಿತು. ಕ್ಯಾಪ್ಟನ್ ವಿನೀತ್ ಕುಮಾರ್ ದಿಲ್ಲಿಯಿಂದ ಬಂದಿಳಿದ ಉದ್ಘಾಟನಾ ವಿಮಾನದ ಕಮಾಂಡರ್ ಆಗಿದ್ದರು.
ಮಂಗಳೂರು-ದಿಲ್ಲಿ ನಡುವಿನ ಉದ್ಘಾಟನಾ ವಿಮಾನದಲ್ಲಿ 167 ಪ್ರಯಾಣಿಕರು ಪ್ರಯಾಣಿಸಿದರೆ, ರಾಷ್ಟ್ರ ರಾಜಧಾನಿಯಿಂದ ಹಾರಾಟ ನಡೆಸಿದ ವಿಮಾನದಲ್ಲಿ 144 ಪ್ರಯಾಣಿಕರು ಮಂಗಳೂರಿಗೆ ಆಗಮಿಸಿದರು. ಏರ್ ಇಂಡಿಯಾ ಎಕ್ಸ್‌ಪ್ರೆಸ್ ಜನವರಿ 4ರಿಂದ ಪುಣೆಗೆ ಪ್ರತಿ ಶನಿವಾರ ಎರಡು ವಾರಾಂತ್ಯದ ವಿಮಾನಗಳನ್ನು ಪರಿಚಯಿಸಿತ್ತು. ಇದೀಗ ರಾಜಧಾನಿಗೆ ವಿಮಾನ ಸಂಚಾರ ಸೌಲಭ್ಯವನ್ನು ಒದಗಿಸಿದೆ.