×
Ad

ದ.ಕ. ಜಿಲ್ಲೆಯ ಹೆದ್ದಾರಿ ಸಮಸ್ಯೆಗಳ ಪರಿಹಾರಕ್ಕೆ ಒತ್ತಾಯಿಸಿ ಸಾಮೂಹಿಕ ಧರಣಿ: ಹಲವು ಸಂಘಟನೆಗಳು ಭಾಗಿ, ವ್ಯಾಪಕ ಬೆಂಬಲ

Update: 2025-02-05 21:36 IST

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯನ್ನು ಹಾದುಹೋಗುವ ನಾಲ್ಕು ಹೆದ್ದಾರಿಗಳು ಸಮಸ್ಯೆಯ ಆಗರವಾಗಿದ್ದು, ಶೀಘ್ರವೇ ಸಮಸ್ಯೆಗಳನ್ನು ಪರಿಹರಿಸಬೇಕು, ಹೆದ್ದಾರಿ ಅಗಲೀಕರಣ ಕಾಮಗಾರಿಗಳನ್ನು ಶರವೇಗದಲ್ಲಿ ಪೂರ್ಣಗೊಳಿ ಸಬೇಕು, ನಂತೂರು ಮೇಲ್ಸೇತುವೆ, ಕೂಳೂರು ಸೇತುವೆ ಕಾಮಗಾರಿಗಳನ್ನು ಕಾಲಮಿತಿಯಲ್ಲಿ ಪೂರ್ತಿಗೊಳಿಸಬೇಕು, ಬ್ರಹ್ಮರಕೂಟ್ಲು ಟೋಲ್ ಗೇಟ್ ತೆರವುಗೊಳಿಸಬೇಕು, ಹೊಸ ಟೋಲ್ ಗೇಟ್‌ಗಳನ್ನು ಸ್ಥಾಪಿಸುವಾಗ ಅಂತರದ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು, ಮುಂತಾದ ಬೇಡಿಕೆಗಳನ್ನು ಮುಂದಿಟ್ಟು ಸುರತ್ಕಲ್ ಟೋಲ್ ಗೇಟ್ ವಿರೋಧಿ ಹೋರಾಟ ಸಮಿತಿ ನೇತೃತ್ವದಲ್ಲಿ ನಂತೂರು ಜಂಕ್ಷನ್‌ನಲ್ಲಿ ಬುಧವಾರ ಸಾಮೂಹಿಕ ಧರಣಿ ನಡೆಯಿತು.

ಜಿಲ್ಲೆಯ ಹಲವು ಜನಪರ ಸಂಘಟನೆಗಳ ಧುರೀಣರು ಧರಣಿಯಲ್ಲಿ ಭಾಗಿಯಾಗಿ ಬೆಂಬಲ ವ್ಯಕ್ತಪಡಿಸಿದರು. ಹೆದ್ದಾರಿಗೆ ಸಂಬಂಧಿಸಿದ ಗಂಭೀರ ಸಮಸ್ಯೆಗಳ ಮೇಲೆ ನಡೆದ ಧರಣಿಗೆ ನಾಗರಿಕರಿಂದ ಬೆಂಬಲ ವ್ಯಕ್ತವಾಯಿತು. ಧರಣಿಯ ಬಳಿಕ ದ.ಕ. ಜಿಲ್ಲೆಯ ಹೆದ್ದಾರಿ ಸಮಸ್ಯೆಗಳ ಕುರಿತು ಚರ್ಚಿಸಲು ಮಂಗಳೂರಿನಲ್ಲಿ ಹೆದ್ದಾರಿ ಪ್ರಾಧಿಕಾರದ ವಿಶೇಷ ಸಭೆ ಕರೆಯು ವಂತೆ ಆಗ್ರಹಿಸಿ ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಅವರಿಗೆ ಮನವಿ ಪತ್ರವನ್ನು ಕಳುಹಿಸಿಕೊಡಲಾ ಯಿತು. ದ.ಕ. ಸಂಸದ ಬ್ರಿಜೇಶ್ ಚೌಟರಿಗೆ ವಿವಿಧ ಬೇಡಿಕೆಗಳನ್ನು ಒಳಗೊಂಡ ಮನವಿಯನ್ನು ಸಲ್ಲಿಸಲಾಯಿತು.

ಟೋಲ್ ಗೇಟ್ ವಿರೋಧಿ ಹೋರಾಟ ಸಮಿತಿ ಸಂಚಾಲಕ ಮುನೀರ್ ಕಾಟಿಪಳ್ಳ ಸಾಮೂಹಿಕ ಧರಣಿಯನ್ನು ಉದ್ಘಾಟಿಸಿ ಮಾತನಾಡಿ ‘‘ಸತತ ಹೋರಾಟ ಫಲವಾಗಿ ಸುರತ್ಕಲ್ ಟೋಲ್‌ಗೇಟ್ ತೆರವುಗೊಂಡಿದೆ. ನಿಯಮ ಉಲ್ಲಂಘಿಸಿ ಕಾರ್ಯಾಚರಿಸುತ್ತಿರುವ ಬ್ರಹ್ಮರಕೂಟ್ಲೂ ಟೋಲ್‌ಗೇಟ್‌ನ್ನು ತಕ್ಷಣ ತೆರವುಗೊಳಿಸಬೇಕು. ನಂತೂರ್ ಸರ್ಕಲ್‌ನಲ್ಲಿ ಅದೆಷ್ಟೋ ಮಂದಿ ಅಪಘಾತದಿಂದಾಗಿ ಪ್ರಾಣ ಕಳೆದುಕೊಂಡಿದ್ದಾರೆ. ನಂತೂರ್ ಮೇಲ್ಸೇತುವೆ ಕಾಮಗಾರಿಯನ್ನು ಕಾಲಮಿತಿಯೊಳಗೆ ಫೂರ್ಣಗೊಳಿಸಬೇಕು ಮತ್ತು ಮೇಲ್ಸೇತುವೆಯನ್ನು ಕೆಪಿಟಿ ಜಂಕ್ಷನ್ ವರೆಗೆ ವಿಸ್ತರಿಸಬೇಕು, ಸುರತ್ಕಲ್-ನಂತೂರ್ ರಸ್ತೆಯಲ್ಲಿ ಗುಂಡಿ ಮುಚ್ಚುವ ತೇಪೆ ಕಾಮಗಾರಿ ಬದಲಿಗೆ ರಾಷ್ಟ್ರೀಯ ಹೆದ್ದಾರಿ ನಿಯಮದಂತೆ ಗುಣಮಟ್ಟದ ಡಾಂಬರೀಕರಣದ ಮೂಲಕ ಪೂರ್ಣಪ್ರಮಾಣದಲ್ಲಿ ದುರಸ್ತಿಗೊಳಿಸಬೇಕು ಮತ್ತು ಮಳೆಗಾಲಕ್ಕೆ ಮುನ್ನ ಈ ಕೆಲಸ ಮುಗಿಸಲಿ, ಬಿ.ಸಿ.ರೋಡ್-ಗುಂಡ್ಯ, ಪುಂಜಾಲಕಟ್ಟೆ-ಚಾರ್ಮಾಡಿ, ನಂತೂರು-ಮೂಡಬಿದ್ರೆ -ಕಾರ್ಕಳ ರಾ.ಹೆದ್ದಾರಿಗಳನ್ನು ಮೇಲ್ದರ್ಜೆಗೆ ಏರಿಸುವ ಕಾಮಗಾರಿಗಳನ್ನು ವೇಗವಾಗಿ ಪೂರ್ಣಗೊಳಿಸಬೇಕು, ಬಿ.ಸಿ.ರೋಡ್-ಕಲ್ಲಡ್ಕ-ಮಾಣಿ ಅಂಡರ್‌ಪಾಸ್ ,ಫ್ಲೈ ಓವರ್ ಕಾಮಗಾರಿಗಳನ್ನು ಮುಂದಿನ ಮಳೆಗಾಲಕ್ಕೆ ಪೂರ್ಣಗೊಳಿಸಲಿ, ಜಿಲ್ಲೆಯ ಶಾಸಕರು ಮತ್ತು ಸಂಸದರು ಸಮಸ್ಯೆ ಪರಿಹಾರಕ್ಕೆ ಗಮನ ಹರಿಸಲಿ ಎಂದು ಆಗ್ರಹಿಸಿದರು.

ಮಾಜಿ ಸಚಿವ ಬಿ ರಮಾನಾಥ ರೈ ಸಮಾರೋಪ ಭಾಷಣ ಮಾಡಿದರು.

ಕೆಪಿಸಿಸಿ ವಕ್ತಾರ ಎಮ್ ಜಿ ಹೆಗ್ಡೆ, ಸಿಪಿಐ ಜಿಲ್ಲಾ ಕಾರ್ಯದರ್ಶಿ ಬಿ ಶೇಖರ್, ದಲಿತ ಮುಖಂಡ ಎಂ.ದೇವದಾಸ್, ಸಾಮರಸ್ಯ ಮಂಗಳೂರು ಇದರ ಮಂಜುಳಾ ನಾಯಕ್, ಆಮ್ ಆದ್ಮಿಯ ಎಸ್ ಎಲ್ ಪಿಂಟೊ, ಬಂಟ್ವಾಳ ತಾಲೂಕು ಹೋರಾಟ ಸಮಿತಿಯ ಸುರೇಶ್ ಕುಮಾರ್ ಬಂಟ್ವಾಳ, ಮಾಜಿ ಕಾರ್ಪೊರೇಟರ್ ಮರಿಯಮ್ಮ ಥಾಮಸ್, ರೈತ ಸಂಘದ ಕೆ ಯಾದವ ಶೆಟ್ಟಿ, ಆಲ್ವಿನ್ ಮಿನೇಜಸ್, ಡಿವೈಎಫ್‌ಐ ಜಿಲ್ಲಾ ಕಾರ್ಯದರ್ಶಿ ಸಂತೋಷ್ ಬಜಾಲ್ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.

ವಿವಿಧ ಸಂಘಟನೆಗಳ ಮುಖಂಡರಾದ ಸುನಿಲ್ ಕುಮಾರ್ ಬಜಾಲ್, ವಸಂತ ಆಚಾರಿ, ಬಿ ಕೆ ಇಮ್ತಿಯಾಜ್, ಸದಾಶಿವ ದಾಸ್ ಕುಪ್ಪೆಪದವು, ರಾಧಾ ಮೂಡಬಿದ್ರೆ, ವಿ ಕುಕ್ಯಾನ್, ಎಚ್ ವಿ ರಾವ್, ಯೋಗೀಶ್ ಜಪ್ಪಿನಮೊಗರು, ಸದಾಶಿವ ಪಡುಬಿದ್ರೆ, ಅನುರಾಧ ಬಾಳಿಗಾ, ಕರಿಯ ವಾಮಂಜೂರು, ಕೃಷ್ಣಾ ಇನ್ನಾ, ಕೃಷ್ಣಪ್ಪ ಸಾಲ್ಯಾನ್, ಜೆ ಬಾಲಕೃಷ್ಣ ಶೆಟ್ಟಿ, ಸುಂದರ ಶೆಟ್ಟಿ, ವಸಂತಿ ಕುಪ್ಪೆಪದವು, ಲೋಲಾಕ್ಷಿ ಬಂಟ್ವಾಳ, ಪ್ರಮೀಳಾ, ಕೃಷ್ಣ ತಣ್ಣೀರುಬಾವಿ, ಬಾವಾ ಪದರಂಗಿ, ಟಿ ಎನ್ ರಮೇಶ್, ಮೂಡಾ ಸದಸ್ಯರಾದ ಅಬ್ದುಲ್ ಜಲೀಲ್, ನಿತಿನ್ ಕುತ್ತಾರ್, ಇಕ್ಬಾಲ್ ಮುಲ್ಕಿ, ಮೋಹನ್ ಶೆಟ್ಟಿ ಪಂಜಿಕಲ್ಲು, ಸಂಜೀವ ಬಲ್ಕೂರು, ಅಶ್ರಫ್ ಬದ್ರಿಯಾ, ಮಾಜಿ ಉಪಮೇಯರ್ ಮುಹಮ್ಮದ್ ಕುಂಜತ್ತಬೈಲ್, ಮಾಜಿ ಕಾರ್ಪೊರೇಟರ್‌ಗಳಾದ ಜಯಂತಿ ಶೆಟ್ಟಿ, ದಯಾನಂದ ಶೆಟ್ಟಿ, ಹಯಾಜ್ ಕೃಷ್ಣಾಪುರ ಮತ್ತಿತರರು ಧರಣಿಯ ನೇತೃತ್ವ ವಹಿಸಿದ್ದರು. ಹೋರಾಟ ಸಮಿತಿ ಸಹ ಸಂಚಾಲಕ ಶ್ರೀನಾಥ್ ಕುಲಾಲ್ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News