ತಲಪಾಡಿ: ಅಪಘಾತಕ್ಕೀಡಾದ ಕಾರಿನಲ್ಲಿ ಡ್ರಗ್ಸ್ ಪತ್ತೆ
ಅಪಘಾತದಿಂದ ಕಾರಿನಲ್ಲಿದ್ದ ಓರ್ವನಿಗೆ ಗಾಯ, ಆರೋಪಿ ಕಾರು ಚಾಲಕ ಪರಾರಿ
ಸಾಂದರ್ಭಿಕ ಚಿತ್ರ
ಮಂಗಳೂರು: ರಾಷ್ಟ್ರೀಯ ಹೆದ್ದಾರಿ 66ರ ತಲಪಾಡಿ ಟೋಲ್ ಗೇಟ್ ಬಳಿ ಮಂಗಳವಾರ ಬೆಳಗ್ಗೆ ನಿಲ್ಲಿಸಿದ್ದ ಗ್ಯಾಸ್ ಟ್ಯಾಂಕರ್‌ಗೆ ಹಿಂದಿನಿಂದ ಕಾರೊಂದು ಢಿಕ್ಕಿ ಹೊಡೆದ ಪರಿಣಾಮವಾಗಿ ಕಾರಿನಲ್ಲಿದ್ದ ಓರ್ವನಿಗೆ ಗಾಯವಾಗಿದ್ದು, ಅಪಘಾತಕ್ಕೀಡಾದ ಕಾರಿನಲ್ಲಿ ಮಾದಕ ವಸ್ತು ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಸಂಬಂಧ ಕಾರು ಚಾಲಕ ಉಪ್ಪಳದ ಅಬೂಬಕರ್ ಸಿದ್ದಿಕ್ ಅಲಿಯಾಸ್ ಪಾಲನ್ ಮತ್ತು ಆದಮ್ ಖಾನ್ ವಿರುದ್ಧ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಂಗಳೂರಿನಿಂದ ತಮಿಳುನಾಡು ಕಡೆಗೆ ಹೋಗುತ್ತಿದ್ದ ಟ್ಯಾಂಕರ್ ಟೋಲ್‌ಗೇಟ್ ಬಳಿ ನಿಂತಿದ್ದಾಗ ಹಿಂದಿನಿಂದ ಬಂದು ಕಾರು ಢಿಕ್ಕಿ ಹೊಡೆಯಿತೆನ್ನಲಾಗಿದೆ. ಪರಿಣಾಮವಾಗಿ ಕಾರ್‌ನಲ್ಲಿದ್ದ ಉಪ್ಪಳದ ಆದಮ್ ಖಾನ್ ಗಾಯಗೊಂಡಿದ್ದಾನೆ. ಅಪಘಾತಕ್ಕೀಡಾದ ಕಾರನ್ನು ಪರಿಶೀಲಿಸಿದಾಗ ಅದರಲ್ಲಿ ಮಾದಕ ವಸ್ತು ಪತ್ತೆಯಾಗಿದೆ. ಗಾಯಾಳು ಆದಮ್ ನನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಕಾರು ಚಾಲಕ ಅಬೂಬಕರ್ ಸಿದ್ದಿಕ್ ಕಾರನ್ನು ಬಿಟ್ಟು ಪರಾರಿಯಾಗಿದ್ದಾನೆ ಎನ್ನಲಾಗಿದೆ.
ಲಾರಿ ಚಾಲಕನು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಾಗಿದೆ ಎಂದು ಮಂಗಳೂರು ಪೊಲೀಸ್ ಆಯುಕ್ತ ಸುಧೀರ್ ಕುಮಾರ್ ರೆಡ್ಡಿ ತಿಳಿಸಿದ್ದಾರೆ.