Mangaluru | ಬಸ್‌ನಿಂದ ಕೆಳಗೆ ಬಿದ್ದು ಮಹಿಳೆ ಮೃತಪಟ್ಟ ಪ್ರಕರಣ: ಬಸ್ ಚಾಲಕನಿಗೆ ಆರು ತಿಂಗಳ ಜೈಲು ಶಿಕ್ಷೆ
ಮಂಗಳೂರು: ಎಂಟು ವರ್ಷಗಳ ಹಿಂದೆ ನಗರದಲ್ಲಿ ಬಸ್‌ನಿಂದ ಕೆಳಗೆ ಬಿದ್ದು ಮಹಿಳೆ ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿ ಖಾಸಗಿ ಬಸ್ ಚಾಲಕ ಸೈಯದ್ ಇರ್ಫಾನ್ ಅಲಿ ವಿರುದ್ಧದ ಆರೋಪ ನ್ಯಾಯಾಲಯದಲ್ಲಿ ರುಜುವಾತು ಆಗಿದ್ದು, ಆತನಿಗೆ ಮಂಗಳೂರಿನ ಜೆಎಂಎಫ್‌ಸಿ ಎಂಟನೆ ನ್ಯಾಯಾಲಯವು ಆರು ತಿಂಗಳ ಸಾದಾ ಜೈಲು ಶಿಕ್ಷೆ ಮತ್ತು 3, 500 ರೂ. ದಂಡ ವಿಧಿಸಿ ತೀರ್ಪು ನೀಡಿದ್ದಾರೆ.
ಆರೋಪಿ ಬಸ್ ಚಾಲಕನು ತನ್ನ ಬಸ್‌ನ್ನು ಅತಿ ವೇಗದಿಂದ ಚಲಾಯಿಸಿಕೊಂಡು ಬಂದು ತನ್ನ ಮುಂದೆ ನಿಂತಿದ್ದ ಬಸ್‌ನ್ನು ಓವರ್‌ಟೇಕ್ ಮಾಡಿ ನಂತರ ಜಂಕ್ಷನ್ ಬಳಿ ಪದವು ಕಡೆಯಿಂದ ಪಂಪು ವೆಲ್ ಕಡೆಗೆ ಹೋಗುತ್ತಿರುವ ಕಂಟೇನರ್ ಲಾರಿಗೆ ಬಸ್ ಢಿಕ್ಕಿ ಹೊಡೆದು ಅಪಘಾತಕ್ಕೆ ಕಾರಣವಾಗಿರುವುದಾಗಿ ಆರೋಪಿಸಲಾಗಿತ್ತು. ಬಸ್ ಡಿಕ್ಕಿ ಹೊಡೆದ ಪರಿಣಾಮ ಕಂಟೇನರ್ ಲಾರಿ ಬಲಕ್ಕೆ ತಿರುಗಿ ಕಾರಿಗೆ ಗುದ್ದಿದ್ದು, ಇದೇ ಸಂದರ್ಭದಲ್ಲಿ ಬಸ್ಸಿನ ಎಡ ಬದಿ ಸೀಟಿನಲ್ಲಿ ಕುಳಿತಿದ್ದ ಕವಿತಾ ಎಂಬವರು ಬಸ್‌ನಿಂದ ಕೆಳಗೆ ಬಿದ್ದು ಮೃತಪಟ್ಟಿದ್ದರು.
ಬಸ್ಸಿನಲ್ಲಿದ್ದ ಹಲವು ಮಂದಿ ಪ್ರಯಾಣಿಕರಿಗೆ ಗಾಯವಾಗಿತ್ತು. ಪ್ರಯಾಣಿಕರಿಗೆ ಗಾಯವಾಗಲು ಬಸ್ಸಿನ ಚಾಲಕ ಕಾರಣವಾಗಿದ್ದು , ಆತನ ಅತಿ ವೇಗದ ಚಾಲನೆ ಅಪಘಾತಕ್ಕೆ ಕಾರಣವಾಗಿರುದಾಗಿ ಆರೋಪಿಸಲಾಗಿತ್ತು.
ಈ ಸಂಬಂಧ ಸಂಚಾರ ಪೂರ್ವ ಪೊಲೀಸ್ ಠಾಣೆಯ ನಿರೀಕ್ಷಕರಾಗಿದ್ದ ಸುರೇಶ್ ಮತ್ತು ಶಿವಪ್ರಕಾಶ್ ಎಚ್ ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪನಾ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು. ಸರಕಾರಿ ಸಹಾಯಕ ಅಭಿಯೋಜಕರಾದ ನೇತ್ರಾವತಿ ಹಾಗೂ ಗೀತಾ ರೈ ರವರು ಸಾಕ್ಷಿ ವಿಚಾರ ನಡೆಸಿದ್ದು, ಸರಕಾರಿ ಸಹಾಯಕ ಅಭಿಯೋಜಕರಾದ ಆರೋನ್ ಡಿ ಸೋಜ ವಿಟ್ಲ ವಾದ ಮಂಡಿಸಿದ್ದರು . ಜೆಎಂಎಫ್‌ಸಿ ಎಂಟನೇ ನ್ಯಾಯಾಲಯದ ನ್ಯಾಯಾಧೀಶ ಫವಾಜ್ ಪಿ ಎ ಅವರು ಪ್ರಾಸಿಕ್ಯೂಷನ್ ಪರ ವಾದವನ್ನು ಎತ್ತಿ ಹಿಡಿದು, ಆರೋಪಿಗೆ ಶಿಕ್ಷೆ ವಿಧಿಸಿ ತೀರ್ಪು ನೀಡಿದ್ದಾರೆ.