×
Ad

ಡ್ರೀಮ್ ಡೀಲ್ ಸಂಸ್ಥೆಯಿಂದ ಮೋಸ; ಪ್ರಶ್ನಿಸಿದಕ್ಕೆ ಜೀವ ಬೆದರಿಕೆ: ಇರ್ಫಾನ್ ಆರೋಪ

Update: 2025-02-08 22:51 IST

ಮಹಮ್ಮದ್ ಇರ್ಫಾನ್

ಮುಲ್ಕಿ: ಡ್ರೀಮ್ ಡೀಲ್ ಸಂಸ್ಥೆಯ ಮೋಸದ ಬಗ್ಗೆ ಇತರರ ಜೊತೆ ಹಂಚಿಕೊಂಡಿದ್ದಕ್ಕೆ ಡ್ರೀಮ್ ಡೀಲ್ ಸಂಸ್ಥೆ ಗುಲಾಂ ಮುಹಮ್ಮದ್ ಹೆಜಮಾಡಿ ಮೂಲಕ ತನಗೆ ಜೀವ ಬೆದರಿಕೆ ಒಡ್ಡಿರುವುದಾಗಿ ಡ್ರೀಮ್ ಡೀಲ್ ಸೀಸನ್-2ರಲ್ಲಿ 3 ಕಾರ್ಡ್ ಹೊಂದಿದ್ದ ಮುಲ್ಕಿಯ ಗೇರುಕಟ್ಟೆ ಮುನ್ನ ಮಂಝಿಲ್ ನಿವಾಸಿ ಮಹಮ್ಮದ್ ಇರ್ಫಾನ್ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದ್ದಾರೆ.

ಮುಲ್ಕಿ ಪುನರೂರು ಟೂರಿಸ್ಟ್ ಹೋಮ್ ಸಭಾಂಗಣದಲ್ಲಿ ಶನಿವಾರ ಲಿಖಿತ ಹೇಳಿಕೆಯೊಂದಿಗೆ ಸುದ್ದಿಗೋಷ್ಠಿ ನಡೆಸಿದ ಮುಹಮ್ಮದ್ ಇರ್ಫಾನ್ ಈ ಬಗ್ಗೆ ಮಾಹಿತಿ ನೀಡಿದರು.

ಡ್ರೀಮ್ ಡೀಲ್ ಸೀಸನ್ 2ರಲ್ಲಿ ನಾನು 3 ಕಾರ್ಡ್ ಹೊಂದಿದ್ದಲ್ಲದೆ ನೂರಾರು ಜನರನ್ನು ಸದಸ್ಯರನ್ನಾಗಿ ಸೇರಿಸಿದ್ದೇನೆ. ಬಳಿಕ ಸಂಸ್ಥೆಯಲ್ಲಿ ಆಗುತ್ತಿರುವ ಮೋಸದ ಬಗ್ಗೆ ನ್ಯಾಯಕ್ಕಾಗಿ ಧ್ವನಿ ಎತ್ತಿದೆ. ಈ ಬಗ್ಗೆ ತೀವ್ರ ವಿಚಾರಣೆ ನಡೆಸಿದ್ದಕ್ಕೆ ಡ್ರೀಮ್ ಡೀಲ್ ಕಾರ್ಯಕರ್ತ ಅಶ್ರಫ್ ಎಂಬವರು ನನ್ನ ಮನವೊಲಿಸಿ ಸೂಕ್ತ ಕ್ರಮದ ಭರವಸೆ ನೀಡಿದ್ದರು.

ಬಳಿಕ ಗುಲಾಂ ಮುಹಮ್ಮದ್ ಹೆಜಮಾಡಿ ಮೂಲಕ ನನಗೆ ಜೀವ ಬೆದರಿಕೆ ಹಾಕಿರುತ್ತಾರೆ. ಅಷ್ಟೇ ಅಲ್ಲದೆ ಪಣಂಬೂರು ಎಸಿಪಿ ನನ್ನ ಆತ್ಮೀಯರು. ಅವರ ಮೂಲಕ ನಿನ್ನ ಮೇಲೆ ಸುಳ್ಳು ಕೇಸು ಹಾಕಿಸಿ ನಿನ್ನನ್ನು ಮುಗಿಸಿ ಬಿಡುತ್ತೇನೆ ಎಂದು ಗುಲಾಂ ಮೊಹಮ್ಮದ್ ಜೀವ ಬೆದರಿಕೆ ಒಡ್ಡಿದ್ದಾರೆ. ಹಾಗಾಗಿ ನನಗೆ ಜೀವ ಭಯ ಇದ್ದು ಸೂಕ್ತ ರಕ್ಷಣೆ ನೀಡುವಂತೆ ಈಗಾಗಲೇ ಜಿಲ್ಲಾಧಿಕಾರಿ ಸಹಿತ ವಿವಿಧ ಅಧಿಕಾರಿಗಳಿಗೆ ದೂರು ನೀಡಿದ್ದಾಗಿ ಇರ್ಫಾನ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಗುಲಾಂ ಮುಹಮ್ಮದ್‌ಗೆ ಕೊಲೆ ಬೆದರಿಕೆ

ಗುತ್ತಿಗೆ ಸಂಸ್ಥೆಯ ಮುಖ್ಯಸ್ಥ ಗುಲಾಂ ಮುಹಮ್ಮದ್ ಹೆಜಮಾಡಿಯವರಿಗೆ ಕೊಲೆ ಬೆದರಿಕೆ ಒಡ್ಡಿರುವ ಬಗ್ಗೆ ಪಡುಬಿದ್ರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಝಿಯಾನ್ ಕನ್‌ಸ್ಟ್ರಕ್ಷನ್ ಸಂಸ್ಥೆಯ ಮ್ಯಾನೇಜಿಂಗ್ ಡೈರೆಕ್ಟರ್ ಹಾಗೂ ಸಾಮಾಜಿಕ ಕಾರ್ಯಕರ್ತರಾದ ಗುಲಾಂ ಮುಹಮ್ಮದ್ ಹೆಜಮಾಡಿ ಇವರ ಬಗ್ಗೆ ಮುಲ್ಕಿ ಕಾರ್ನಾಡು ನಿವಾಸಿ ಮುಹಮ್ಮದ್ ಇರ್ಫಾನ್ ಮಾನಹಾನಿಯಾಗುವ ರೀತಿ ಪತ್ರ ಬರೆದು ಜಾಲತಾಣಗಳಲ್ಲಿ ರವಾನಿಸಿದ್ದನು ಎನ್ನಲಾಗಿದ್ದು, ಆ ಬಗ್ಗೆ ಈತನಲ್ಲಿ ವಿಚಾರಿಸಿದಾಗ ಇರ್ಫಾನ್ ಅವಾಚ್ಯ ಶಬ್ದಗಳಿಂದ ಬೈದು ಕೊಲೆ ಬೆದರಿಕೆ ಒಡ್ಡಿದ್ದಾರೆ ಎಂದು ಗುಲಾಂ ಮುಹಮ್ಮದ್ ದೂರಿನಲ್ಲಿ ಆರೋಪಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News