ಪೋಪ್ ಫ್ರಾನ್ಸಿಸ್ ನಿಧನಕ್ಕೆ ಸ್ಪೀಕರ್ ಯು.ಟಿ.ಖಾದರ್ ಸಂತಾಪ
ಮಂಗಳೂರು: ಪೋಪ್ ಫ್ರಾನ್ಸಿಸ್ ನಿಧನಕ್ಕೆ ಕರ್ನಾಟಕ ವಿಧಾನಸಭೆಯ ಸ್ಪೀಕರ್ ಯು.ಟಿ. ಖಾದರ್ ಸಂತಾಪ ವ್ಯಕ್ತಪಡಿಸಿದ್ದಾರೆ.
ಆಧ್ಯಾತ್ಮಿಕ ಗುರುಗಳಾಗಿದ್ದ ಅವರು ಸಹಾನುಭೂತಿ, ಸರಳತೆ, ನ್ಯಾಯ ಮತ್ತು ಶಾಂತಿ ಬಯಸುವ ನೈತಿಕ ಧ್ವನಿಯಾಗಿದ್ದರು. ಪೋಪ್ ಆಗಿ ಅವರ ಸರಳ ಜೀವನ ಮತ್ತು ಬಡವರ ಬಗ್ಗೆ ಪ್ರೀತಿ, ವಿಶೇಷ ಕಾಳಜಿ, ಪ್ರತಿಯೊಬ್ಬ ಮನುಷ್ಯನ ಘನತೆಯ ಬಗ್ಗೆ ಆಳವಾದ ಕಾಳಜಿಯನ್ನು ಹೊಂದಿದ್ದರು ಎಂದು ಹೇಳಿದ್ದಾರೆ.
ಪೋಪ್ ಫ್ರಾನ್ಸಿಸ್ ಅವರನ್ನು 2024ರ ಡಿಸೆಂಬರ್‌ನಲ್ಲಿ ಭೇಟಿಯಾಗಿ ಅವರ ಆಶೀರ್ವಾದವನ್ನು ಪಡೆದ ಕ್ಷಣಗಳನ್ನು ನೆನಪಿಸಿಕೊಂಡಿರುವ ಸ್ಪೀಕರ್ ಯು.ಟಿ.ಖಾದರ್ ಅವರು ಪೋಪ್ ಅವರನ್ನು ಭೇಟಿಯಾಗಿ ಅವರ ಆಶೀರ್ವಾದ ಸ್ವೀಕರಿಸಿರುವುದು ಬದುಕಿನ ಅಮೂಲ್ಯ ಕ್ಷಣವಾಗಿ ಸದಾ ನೆನಪಿನಲ್ಲಿ ಉಳಿಯಲಿದೆ. ಅವರ ಸೌಮ್ಯ ಸ್ವಭಾವ ಮತ್ತು ವಿವೇಕಪೂರ್ಣ ಮಾತುಗಳಿಂದ ಆಕರ್ಷಿತನಾಗಿದ್ದೆ. ಈ ಉದಾತ್ತ ಗುಣ ಗಳು ನನ್ನಲ್ಲಿ ಮಾತ್ರವಲ್ಲ ಜಗತ್ತಿನ ಕೋಟ್ಯಂತರ ಜನರ ಹೃದಯದಲ್ಲಿ ಅಚ್ಚಳಿಯದೆ ಉಳಿಯಲಿವೆ.
ಅವರು ನೀಡಿರುವ ಸಲಹೆಯು ತನ್ನ ಮೇಲೆ ಪ್ರಭಾವ ಬೀರಿದೆ. ಕರ್ನಾಟಕ ವಿಧಾನಸಭೆಯ ಸದಸ್ಯರು ಮತ್ತು ನಮ್ಮ ರಾಜ್ಯದ ಜನರ ಪರವಾಗಿ, ಸಂತಾಪ ವ್ಯಕ್ತಪಡಿಸುವೆನು. ಅವರ ಆತ್ಮಕ್ಕೆ ಶಾಶ್ವತ ಶಾಂತಿ ಸಿಗಲಿ . ಅವರ ದಯೆ ಮತ್ತು ಏಕತೆಯ ಪರಂಪರೆ ಮಾನವತೆಗಾಗಿ ಬೆಳಕು ನೀಡುವ ದಾರಿಯಾಗಿ ಮುಂದುವರಿಯಲಿ ಎಂದು ನಾವು ಆಶಿಸುತ್ತೇವೆ ಎಂದು ಖಾದರ್ ಶೋಕ ಸಂದೇಶದಲ್ಲಿ ತಿಳಿಸಿದ್ದಾರೆ.