ಜನಿವಾರ ತೆಗೆಸಿದ ಪ್ರಕರಣ: ಅನ್ಯಾಯಕ್ಕೊಳಗಾದ ವಿದ್ಯಾರ್ಥಿಗಳಿಗೆ ಪರಿಹಾರ ನೀಡಲು ಒತ್ತಾಯ
ಮಂಗಳೂರು: ರಾಜ್ಯದಲ್ಲಿ ಸಿಇಟಿ ಪರೀಕ್ಷೆ ವೇಳೆ ವಿದ್ಯಾರ್ಥಿಗಳ ಜನಿವಾರ ತೆಗೆಸಿದ ಪ್ರಕರಣವನ್ನು ರಾಜ್ಯ ಸರಕಾರ ಗಂಭೀರವಾಗಿ ಪರಿಗಣಿಸಿ, ತಪ್ಪಿತಸ್ಥರ ವಿರುದ್ಧ ಕ್ರಮಕೈಗೊಳ್ಳಬೇಕು.ಅನ್ಯಾಯಕ್ಕೊಳಗಾದ ವಿದ್ಯಾರ್ಥಿಗಳಿಗೆ ಪರಿಹಾರ ನೀಡಬೇಕು ಎಂದು ವಿಧಾನ ಪರಿಷತ್ ಸದಸ್ಯ ಪ್ರತಾಪ ಸಿಂಹ ನಾಯಕ್ ಹೇಳಿದ್ದಾರೆ.
ದ.ಕ. ಬಿಜೆಪಿ ಕಚೇರಿಯಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪ್ರಕರಣದಲ್ಲಿ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಬೇಕು. ಇಲ್ಲವಾದಲ್ಲಿ ಬಿಜೆಪಿ ವತಿಯಿಂದ ನ್ಯಾಯಾಲಯದ ಮೊರೆ ಹೋಗಲಾಗುವುದು ಎಂದು ಎಚ್ಚರಿಸಿದರು.
ಜನಿವಾರ ಧರಿಸುವುದು ಧಾರ್ಮಿಕ ನಂಬಿಕೆ. ವಿದ್ಯಾರ್ಥಿಗಳ ಜನಿವಾರವನ್ನು ತೆಗೆಸುವ ಮೂಲಕ ಧಾರ್ಮಿಕ ಭಾವನೆಗಳಿಗೆ ನೋವುಂಟು ಮಾಡಲಾಗಿದೆ. ಶಿವಮೊಗ್ಗ, ಬೀದರ್, ಧಾರವಾಡ ಸೇರಿದಂತೆ 4-5 ಪರೀಕ್ಷಾ ಕೇಂದ್ರಗಳಲ್ಲಿ ಇಂತಹ ಘಟನೆಗಳು ನಡೆದಿವೆ. ಹೀಗಾಗಿ ಇದೊಂದು ಪೂರ್ವಯೋಜಿತ ಕೃತ್ಯದಂತೆ ಕಂಡು ಬರುತ್ತದೆ ತ್ತಿದೆ ಎಂದು ಹೇಳಿದರು.
ಜನಿವಾರ ತೆಗೆಯಿಸಿದ್ದನ್ನು ಒಂದು ಜಾತಿ ಅಥವಾ ಸಮುದಾಯದ ವಿರುದ್ಧ ಕೈಗೊಂಡ ಕ್ರಮವೆಂದು ಭಾವಿಸಬಾರದು. ಇದು ಸನಾತನ ಸಂಸ್ಕೃತಿ ಮತ್ತು ನಂಬಿಕೆಗೆ ನೀಡಿದ ಹೊಡೆತವಾಗಿದೆ ಎಂದರು.
ಹಿಂದೂ ವಿಚಾರಧಾರೆಗಳನ್ನು ಕಾಂಗ್ರೆಸ್ ಮೊದಲಿನಿಂದರೂ ದ್ವೇಷಿಸುತ್ತಾ ಬಂದಿದೆ. ಜಾತಿ ಗಣತಿ ಹೆಸರಿನಲ್ಲಿ ಹಿಂದೂ ಸಮಾಜವನ್ನು ವಿಭಜಿಸುವುದು, ಹಿಂದೂ ಸಂಪ್ರದಾಯಗಳನ್ನು ಅವಹೇಳನ ಮಾಡುವುದು, ಹಿಂದೂಗಳ ಧಾರ್ಮಿಕ ಆಚರಣೆಗಳನ್ನು ನಿರ್ಬಂಧಿಸುವುದು, ಹಿಂದೂ ಸಂಪ್ರದಾಯ ಗಳನ್ನು ಅವಹೇಳನ ಮಾಡುವವರಿಗೆ ಪ್ರಶಸ್ತಿ ನೀಡುತ್ತಾ ಬಂದಿದೆ. ಪರೀಕ್ಷೆ ಬರೆಯಲು ಬಂದ ವಿದ್ಯಾರ್ಥಿಗಳ ಜನಿವಾರ ತೆಗೆಸಿರುವುದು ಇದಕ್ಕೆ ಹೊಸ ಸೇರ್ಪಡೆ ಎಂದರು.
ವಿದ್ಯಾರ್ಥಿನಿಯರು ತರಗತಿ ಒಳಗೆ ಹಿಜಾಬ್ ಧರಿಸಬಾರದು ಎಂಬ ನಿಯಮವನ್ನು ಜಾರಿಗೊಳಿಸಿದ್ದನ್ನು, ಹೈಕೋರ್ಟ್ ತೀರ್ಪು ಪುರಸ್ಕರಿಸಿದರೂ ಅದನ್ನು ಸ್ಥಾಪಿತ ಹಿತಾಸಕ್ತಿಗಳು ಅಂತರ್‌ರಾಷ್ಟ್ರೀಯ ವಿವಾದವನ್ನಾಗಿಸಿದವು. ಆದರೆ ಜನಿವಾರ ತೆಗೆಯಿಸಿದ ಘಟನೆ ನಡೆದು ನಾಲ್ಕು ದಿನಗಳಾದರೂ ಮುಖ್ಯಮಂತ್ರಿ ಸಿದ್ದರಾಮಯ್ಯ ಇದುವರೆಗೂ ಖಂಡಿಸಿಲ್ಲ. ಅವರು ತಕ್ಷಣವೇ ಇದಕ್ಕೆ ಪರಿಹಾರ ಕ್ರಮವನ್ನು ಸೂಚಿಸಬೇಕಿತ್ತು ಎಂದರು.
ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ದಕ್ಷಿಣ ಕನ್ನಡ ಜಿಲ್ಲೆಯ ಧಾರ್ಮಿಕ ಕೇಂದ್ರಗಳಿಗೆ ತರಳಿ ಪ್ರವಚನ ನೀಡುತ್ತಿದ್ದಾರೆ. ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ 10 ಸ್ಥಾನ ಗೆಲ್ಲುವುದಾಗಿ ಅವರು ಹೇಳಿದ್ದಾರೆ. ದಕ್ಷಿಣ ಕನ್ನಡ ಜನತೆ ಅವರು ತಿಳಿದಷ್ಟು ಅಮಾಯಕರಲ್ಲ. ಜನತೆ ಕಾಂಗ್ರೆಸ್‌ಗೆ ತಕ್ಕ ಉತ್ತರ ನೀಡುತ್ತಾರೆ. ಈ ಸಲ ಗೆದ್ದ ಎರಡು ಕ್ಷೇತ್ರಗಳನ್ನೂ ಕಾಂಗ್ರೆಸ್ ಉಳಿಸಿಕೊಳ್ಳುವುದಿಲ್ಲ ಎಂದರು.
ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾ ಜಿಲ್ಲಾಧ್ಯಕ್ಷ ಮಹೇಶ ಜೋಗಿ, ಎಸ್‌ಸಿ ಮೋರ್ಚಾ ಮಂಗಳೂರು ದಕ್ಷಿಣ ಮಂಡಲ ಅಧ್ಯಕ್ಷ ಭರತ್‌ಕುಮಾರ್, ಜಿಲ್ಲಾ ಕಾರ್ಯಾಲಯ ಕಾರ್ಯದರ್ಶಿ ಗುರುಚರಣ್, ಕೋಶಾಧಿಕಾರಿ ಸಂಜಯ ಪ್ರಭು, ಜಿಲ್ಲಾ ಮಾಧ್ಯಮ ಸಂಚಾಲಕ ವಸಂತ ಪೂಜಾರಿ, ಸಹ ಸಂಚಾಲಕ ಮನೋಹರ ಶೆಟ್ಟಿ ಕದ್ರಿ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.