ಅಂಬಿಕಾರೋಡ್: ಕಿರು ಸೇತುವೆಯ ಕೆಳಭಾಗ ಕುಸಿತ
ಉಳ್ಳಾಲ: ಸೋಮೇಶ್ವರ ಪುರಸಭೆ ವ್ಯಾಪ್ತಿಯ ಅಂಬಿಕಾರೋಡ್ ಮೂರನೇ ಅಡ್ಡ ರಸ್ತೆಯ ರಾಜ ಕಾಲುವೆಯ ಕಿರು ಸೇತುವೆಯ ಅಡಿ ಭಾಗ ಬುಧವಾರ ಸಂಜೆ ವೇಳೆಗೆ ಕುಸಿತಗೊಂಡಿದೆ.
ಈ ಸೇತುವೆಯು ಉರುಳಿ ಬೀಳಲು ಕ್ಷಣಗಣನೆ ಆರಂಭವಾಗಿದ್ದು, ಸುರಕ್ಷತೆ ದೃಷ್ಟಿಯಿಂದ ಸೇತುವೆ ಸಂಚಾರವನ್ನು ಸೋಮೇಶ್ವರ ಪುರಸಭಾ ಅಧಿಕಾರಿಗಳು ನಿಷೇಧ ಗೊಳಿಸಿದ್ದಾರೆ . ಇದರ ಪರಿಣಾಮ ಸ್ಥಳೀಯ ಅಂಬಿಕಾರೋಡ್ ಲೇ ಔಟ್ ನ ಸುಮಾರು ಎಪ್ಪತ್ತು ಮನೆಗಳ ಸಂಪರ್ಕ ರಸ್ತೆ ಕುಂಠಿತ ಗೊಂಡಿದ್ದು, ಜನರು ಮನೆ ತಲುಪಲು ಬವಣೆ ಪಡುವಂತಾಗಿದೆ.
ಹಳೆಯದಾದ ಈ ಕಿರು ಸೇತುವೆಯ ದುರಸ್ತಿ ಕಾರ್ಯ ವನ್ನು ಕಳೆದ ನಾಲ್ಕು ವರುಷದ ಹಿಂದಷ್ಟೆ ಸೋಮೇಶ್ವರ ಪುರಸಭೆ ನಡೆಸಿತ್ತು. ಸೇತುವೆಯ ಕಳಪೆ ಕಾಮಗಾರಿಯಿಂದಾಗಿ ಅಡಿಭಾಗವು ಕುಸಿತ ಗೊಂಡಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಕೆಲವರು ಸ್ಥಳೀಯ ಅಂಬಿಕಾರೋಡ್ ಲೇ ಔಟ್ ನಲ್ಲಿ ಮನೆ ನಿರ್ಮಾಣ ಕಾಮಗಾರಿಗೆ ರಾಜ ಕಾಲುವೆಯ ಕಿರು ಸೇತುವೆಯ ಮೇಲೆ ದಿನ ನಿತ್ಯಲೂ ಕಲ್ಲು ,ಮರಳು ಇತರ ಕಟ್ಟಡ ನಿರ್ಮಾಣ ಸಾಮಾಗ್ರಿಗಳ ಘನ ವಾಹನಗಳು ಚಲಿಸುತ್ತಿತ್ತು .ಈ ಕಾರಣದಿಂದ ಹಳೆಯ ಸೇತುವೆಯು ಶಿಥಿಲಗೊಂಡು ಕುಸಿದಿರುವುದಾಗಿ ಆರೋಪ ವ್ಯಕ್ತವಾಗಿದೆ.
ಮತ್ತೆ ಧಾರಾಕಾರವಾಗಿ ಮಳೆ ಸುರಿದರೆ ಸೇತುವೆ ಸಂಪೂರ್ಣ ಕುಸಿದು ಬಿದ್ದು ನೀರು ಸ್ಥಳೀಯ ಅನೇಕ ಮನೆಗಳಿಗೆ ನುಗ್ಗಿ ಮತ್ತೆ ಅವಾಂತರ ಸೃಷ್ಟಿಸುವ ಭೀತಿ ಎದುರಾಗಿದೆ.
ಸ್ಥಳಕ್ಕೆ ಸೋಮೇಶ್ವರ ಪುರಸಭೆಯ ಮುಖ್ಯಾಧಿಕಾರಿ ಮತ್ತಡಿ ಮತ್ತು ಪ್ರಬಂಧಕರಾದ ಕೃಷ್ಣ, ಸ್ಥಳೀಯ ಪುರಸಭೆ ಸದಸ್ಯರಾದ ಪರ್ವೀಣ್ ಅವರು ಭೇಟಿ ನೀಡಿದ್ದು ಪರಿಸ್ಥಿತಿ ಪರಿಶೀಲನೆ ನಡೆಸಿದರು. ಇದೀಗ ಕುಸಿದಿರುವ ಸೇತುವೆ ಬೀಳದಂತೆ ತಡೆಯುವುದೇ ಅಧಿಕಾರಿಗಳಿಗೆ ಸವಾಲಾಗಿದೆ.
ಇನ್ನೊಂದೆಡೆ ಕುಂಪಲ ಮುಖ್ಯ ರಸ್ತೆಯು ಪೈಪ್ ಲೈನ್ ಕಾಮಗಾರಿಯಿಂದ ಕೆಟ್ಟು ಹೋಗಿದ್ದು,ದುರಸ್ಥಿ ಕಾಮಗಾರಿಗೆಂದು ಅಲ್ಲಿನ ರಸ್ತೆ ಸಂಚಾರ ನಿರ್ಬಂಧಿಸಲಾಗಿದೆ. ಕುಂಪಲ ಪ್ರದೇಶಕ್ಕೆ ತೆರಳುವವರೂ ಕೂಡ ಅಂಬಿಕಾ ರೋಡಿನ ಮೂರನೇ ಅಡ್ಡ ರಸ್ತೆಯನ್ನೇ ಪರ್ಯಾಯವಾಗಿ ನೆಚ್ಚಿಕೊಂಡಿದ್ದರು.