ಅಹಿತಕರ ಘಟನೆ ಬಗ್ಗೆ ಅವಲೋಕನ: ದ.ಕ.ಜಿಲ್ಲೆಗೆ ಕೆಪಿಸಿಸಿ ನಿಯೋಗ ಭೇಟಿ
ಮಂಗಳೂರು: ದ.ಕ.ಜಿಲ್ಲೆಯಲ್ಲಿ ಇತ್ತೀಚೆಗೆ ನಡೆದ ಅಹಿತಕರ ಘಟನೆಗಳ ಸತ್ಯಾಸತ್ಯತೆ ಅರಿತುಕೊಳ್ಳಲು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರಿಂದ ನಿಯುಕ್ತಿಗೊಂಡಿರುವ ಏಳು ಮಂದಿಯನ್ನು ಒಳಗೊಂಡ ಸಮಿತಿಯ ನಿಯೋಗದ ಸದಸ್ಯರು ಬುಧವಾರ ರಾತ್ರಿ ಮಂಗಳೂರಿಗೆ ಆಗಮಿಸಿದ್ದಾರೆ.
ನಗರದ ಖಾಸಗಿ ಹೊಟೇಲಿನಲ್ಲಿ ತಂಗಿರುವ ಸಮಿತಿಯ ಸದಸ್ಯರಾಗಿರುವ ಎಐಸಿಸಿ ಪ್ರಧಾನ ಕಾರ್ಯ ದರ್ಶಿ ಸೈಯದ್ ನಾಸೀರ್ ಹುಸೇನ್, ಬಿಡಿಎ ಅಧ್ಯಕ್ಷ ಹಾಗೂ ಶಾಸಕ ಎನ್.ಎ. ಹಾರೀಸ್, ಮಾಜಿ ಸಂಸದ ಜಯಪ್ರಕಾಶ್ ಹೆಗ್ಡೆ, ವಿ.ಆರ್.ಸುದರ್ಶನ್ ಅವರು ಮಾಜಿ ಸಚಿವ ರಮಾನಾಥ ರೈ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿಗಳಾದ ಜಿ.ಎ. ಬಾವ, ಮಿಥುನ್ ರೈ, ಪದ್ಮರಾಜ ಪೂಜಾರಿ, ದ.ಕ.ಜಿಲ್ಲಾ ವಕ್ಫ್ ಸಲಹಾ ಸಮಿತಿಯ ಅಧ್ಯಕ್ಷ ನಾಸಿರ್ ಲಕ್ಕಿಸ್ಟಾರ್, ದ.ಕ.ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕದ ಮಾಜಿ ಅಧ್ಯಕ್ಷ ಎನ್.ಎಸ್.ಕರೀಂ, ಯು.ಬಿ.ಸಲೀಂ, ಹಮೀದ್ ಬಜ್ಪೆ ಮತ್ತಿತರರ ಜೊತೆ ಚರ್ಚೆ ಆರಂಭಿಸಿದ್ದಾರೆ ಎಂದು ತಿಳಿದುಬಂದಿದೆ.
ಜಿಲ್ಲೆಯಲ್ಲಿ ಹಿಂದುತ್ವವಾದಿಗಳಿಂದ ಮುಸ್ಲಿಂ ಸಮುದಾಯದ ಮೇಲೆ ನಡೆದ ದೌರ್ಜನ್ಯದ ಬಗ್ಗೆ ಮೌನ ತಾಳಿರುವ ಪಕ್ಷ ಮತ್ತು ರಾಜ್ಯ ಸರಕಾರದ ವಿರುದ್ಧ ಆಕ್ರೋಶಗೊಂಡು ಪಕ್ಷಕ್ಕೆ ರಾಜೀನಾಮೆ ನೀಡಿರುವ ಎಂ.ಎಸ್. ಮುಹಮ್ಮದ್, ಕೆ.ಕೆ. ಶಾಹುಲ್ ಹಮೀದ್, ಮಾಜಿ ಮೇಯರ್ ಕೆ.ಅಶ್ರಫ್, ಮಾಜಿ ಕಾರ್ಪೊರೇಟರ್ ಗಳಾದ ಲತೀಫ್ ಕಂದಕ್, ರವೂಫ್ ಬಜಾಲ್ ಹಾಗು ಮುಹಮ್ಮದ್ ಬಪ್ಪಳಿಗೆ, ವಹಾಬ್ ಕುದ್ರೋಳಿ, ಇಮ್ರಾನ್ ಎ.ಆರ್., ಮುಹಮ್ಮದ್ ಶಮೀರ್ ಸುರತ್ಕಲ್ ಮತ್ತಿತರರ ಜೊತೆಯೂ ಸಮಿತಿಯ ಸದಸ್ಯರು ಮಾತುಕತೆಗೆ ನಡೆಸುತ್ತಿರುವುದಾಗಿ ತಿಳಿದು ಬಂದಿದೆ.
ಈ ಸಮಿತಿಯು ಕೊಲೆಕೃತ್ಯ ನಡೆದ ಸ್ಥಳ ಹಾಗೂ ಸಂಬಂಧಪಟ್ಟ ಕುಟುಂಬಗಳು ಮತ್ತು ಸ್ಥಳೀಯ ರೊಂದಿಗೆ ಚರ್ಚಿಸಿ ಪ್ರಕರಣಗಳ ಬಗ್ಗೆ ಕೂಲಂಕಷವಾಗಿ ಪರಿಶೀಲಿಸಿ ಕೆಪಿಸಿಸಿಗೆ ಸಮಗ್ರ ವರದಿ ನೀಡಲಿದೆ.