×
Ad

ಉಪ್ಪಿನಂಗಡಿ: ಮೈತುಂಬಿ ಹರಿಯುತ್ತಿರುವ ಜೀವನದಿಗಳು

Update: 2025-06-15 21:57 IST

ಉಪ್ಪಿನಂಗಡಿ: ರವಿವಾರ ಸತತವಾಗಿ ಸುರಿದ ಭಾರೀ ಮಳೆಯಿಂದಾಗಿ ಜಿಲ್ಲೆಯ ಜೀವ ನದಿಗಳಾದ ನೇತ್ರಾವತಿ ಮತ್ತು ಕುಮಾರಧಾರಾ ನದಿಗಳೆರಡು ಮೈ ತುಂಬಿ ಹರಿಯುತ್ತಿದ್ದು, ಸಮುದ್ರ ಮಟ್ಟಕಿಂತ 27.5 ಮೀಟರ್ ಎತ್ತರದಲ್ಲಿ ಹರಿಯುತ್ತಿದೆ.

ಶನಿವಾರ ನದಿ ನೀರಿನ ಮಟ್ಟ 24.5 ಮೀಟರ್ ನಲ್ಲಿದ್ದರೆ, ಆದಿತ್ಯವಾರ ಸಾಯಂಕಾಲದ ವೇಳೆ ಏಕಾಏಕಿ ಏರಿಕೆಯನ್ನು ಕಂಡಿತು. ಪಶ್ಚಿಮಘಟ್ಟ ಪ್ರದೇಶದಲ್ಲೂ ಸತತ ಮಳೆಯಾಗುತ್ತಿರುವುದರಿಂದ ನದಿಯ ನೀರಿನ ಮಟ್ಟ ಗಣನೀಯ ಹೆಚ್ಚಳ ಕಾಣುವಂತಾಗಿದೆ. ಇಲ್ಲಿನ ಶ್ರೀ ಸಹಸ್ರಲಿಂಗೇಶ್ವರ- ಮಹಾಕಾಳಿ ದೇವಾಲಯದ ಬಳಿ ನದಿಗಿಳಿಯಲು ಇರುವ 36 ಮೆಟ್ಟಿಲುಗಳಲ್ಲಿ 14 ಮೆಟ್ಟಿಲುಗಳು ಮಾತ್ರ ಕಾಣುತ್ತಿದ್ದು, ಉಳಿದ ಮೆಟ್ಟಿಲುಗಳು ಮುಳುಗಿವೆ. ಕುಮಾರಧಾರ ನದಿಗಿಂತ ನೇತ್ರಾವತಿಯಲ್ಲಿ ಹೆಚ್ಚಿನ ನೀರಿನ ಹರಿವು ಕಂಡು ಬರುತ್ತಿದೆ.

ಶನಿವಾರ ರಾತ್ರಿಯಿಂದ ಮೊದಲುಗೊಂಡು ಪದೇ ಪದೇ ಬಿರುಸಿನ ಮಳೆಯಾಗುತ್ತಿರುವ ಕಾರಣಕ್ಕೆ ಗುಡ್ಡ ಜರಿತದ ಭೀತಿ ಪರಿಸರದ ಜನರನ್ನು ಮತ್ತೆ ಮತ್ತೆ ಕಾಡುತ್ತಿದೆ. ನೇತ್ರಾವತಿ ಕುಮಾರಧಾರಾ ನದಿ ಸಂಗಮ ಸ್ಥಳದಲ್ಲಿ ಗೃಹ ರಕ್ಷಕ ದಳದ ಪ್ರವಾಹ ರಕ್ಷಣಾ ತಂಡ ಮೊಕ್ಕಾಂ ಹೂಡಿದ್ದು, ಸಂಭಾವ್ಯ ಸಮಸ್ಯೆಗಳನ್ನು ಎದುರಿಸಲು ಸನ್ನದ್ದವಾಗಿದೆ.



 


Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News