ಭಾರೀ ಮಳೆ: ಬಂಟ್ವಾಳ ತಾಲೂಕಿನಾದ್ಯಂತ ಮನೆ, ಆಸ್ತಿಗಳಿಗೆ ಹಾನಿ
ಬಂಟ್ವಾಳ: ತಾಲೂಕಿನಾದ್ಯಂತ ಶನಿವಾರ ರಿಂದ ಬಿರುಸಿನ ಮಳೆಯಾಗುತ್ತಿರುವ ಹಿನ್ನಲೆಯಲ್ಲಿ ವಿವಿಧೆಡೆ ಮನೆ, ಆಸ್ತಿಗಳಿಗೆ ಹಾನಿಯಾಗಿದೆ.
ಕಾಡಬೆಟ್ಟು ಗ್ರಾಮದ ಮೇಗಿನಮನೆ ಎಂಬಲ್ಲಿನ ರಿಚಾರ್ಡ್ ಡಿ ಸೋಜ ರವರ ಪಕ್ಕಾ ಮನೆಗೆ ಅಡಿಕೆ ಮರ ಬಿದ್ದು ಹಾನಿಯಾದೆ. ಕರಿಯಂಗಳ ಗ್ರಾಮದ ಶಾಂತ ಎಂಬವರ ಮನೆಯ ತಡೆಗೋಡೆ ಕುಸಿದಿದೆ.
ಕಾವಳಪಡೂರು ಗ್ರಾಮದ ಆಲಂಪುರಿ ಎಂಬಲ್ಲಿ ರೇವತಿ ರಮೇಶ್ ಗಾಣಿಗರವರ ಮನೆಯ ಮುಂಭಾಗದ ಬಾವಿ ಹಾಗೂ ಆವರಣ ಗೋಡೆ ಕುಸಿದ್ದಿದ್ದು ಅವರನ್ನು ಸಂಬಂಧಿಕರ ಮನೆಗೆ ಸ್ಥಳಾಂತರಿಸಲಾಗಿದೆ.
ಅಮ್ಟಾಡಿ ಗ್ರಾಮದ ಬಾಂಬಿಲ ಎಂಬಲ್ಲಿ ಬಾಂಬಿಲ ಮತ್ತು ತಲೆಂಬಿಲ ಸಂಪರ್ಕಿಸುವ ಗ್ರಾಮ ಪಂಚಾಯತ್ ರಸ್ತೆಗೆ ಗುಡ್ಡ ಕುಸಿದಿರುತ್ತದೆ.
ಕರಿಯಂಗಳ ಗ್ರಾಮದ ಪುಂಚಮಿ ನಿವಾಸಿ ಸರೋಜಿನಿ ಅವರ ದನದ ಹಟ್ಟಿಗೆ ಗುಡ್ಡೆ ಜರಿದು ಹಟ್ಟಿ ಸಂಪೂರ್ಣ ಜರಿದು ಬಿದ್ದಿದೆ. ಸುಮಾರು 10 ದನಗಳಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದು ಪ್ರಾಣಾಪಾಯದಿಂದ ಪಾರಾಗಿದೆ.
ಅರಳ ಗ್ರಾಮದ ಪಂಬದಗದ್ದೆ ನಿವಾಸಿ ದಿನಕರ ಪಿ ಬಿನ್ ರಾಮ ಶೆಟ್ಟಿಗಾರ್ ರವರ ವಾಸದ ಮನೆಯ ಮೇಲೆ ಮಣ್ಣು ಬಿದ್ದು ಮನೆಯ ಗೋಡೆಗೆ ಹಾನಿಯಾಗಿದ್ದು, ಯಾವುದೇ ಪ್ರಾಣ ಹಾನಿಯಾಗಿರುವುದಿಲ್ಲ. ಅವರು ಶನಿವಾರವೇ ಪಕ್ಕದ ಮನೆಗೆ ಸ್ಥಳಾಂತರಗೊಂಡಿರುತ್ತಾರೆ ಎಂದು ತಿಳಿದುಬಂದಿದೆ.