ಕೃತಕ ನೆರೆ ಆವೃತವಾಗುವ ಪಂಪ್‌ವೆಲ್ ವೃತ್ತದಲ್ಲಿ ದ.ಕ. ಡಿಸಿಯಿಂದ ಪರಿಸ್ಥಿತಿಯ ಅವಲೋಕನ
ಮಂಗಳೂರು: ಪಂಪುವೆಲ್ ಮೇಲ್ಸೇತುವೆ ನಿರ್ಮಾಣ ಸಂದರ್ಭ ಸಂಬಂಧಿಸಿದ ಇಂಜಿನಿಯರ್ ಗಳು ಮಾಡಿಕೊಂಡಿರುವ ಎಡವಟ್ಟು ಗಳಿಂದ ಸ್ಥಳೀಯ ನಿವಾಸಿಗಳು ಪ್ರತಿ ವರ್ಷದ ಮಳೆಗಾಲದಲ್ಲಿ ಸಮಸ್ಯೆ ಎದುರಿಸುವಂತಾಗಿದೆ.
ಪಂಪ್‌ವೆಲ್ ಮೇಲ್ಸೇತುವೆಯ ಅಡಿಭಾಗದಲ್ಲಿರುವ ಪ್ರದೇಶಕ್ಕೆ ಅಷ್ಟ ದಿಕ್ಕುಗಳ ನೀರು ಧುಮ್ಮಿಕ್ಕಿ ಬರುತ್ತದೆ. ಕಂಕನಾಡಿ ಹಳೇ ರಸ್ತೆ, ಬೈಪಾಸ್ ರಸ್ತೆ, ನಂತೂರು ರಸ್ತೆ, ಬೆಂಗಳೂರು ರಸ್ತೆ ಹಾಗೂ ತೊಕ್ಕೊಟ್ಟು ರಸ್ತೆಗಳೆಲ್ಲ - ಪಂಪುವೆಲ್ ವ್ರತ್ತದಿಂದ ಮೇಲಿವೆ. ಅಲ್ಲಿಂದ ಹರಿದು ಬರುವ ನೀರು ಹೊರಗೆ ಹರಿದು ಹೋಗುವ ಚರಂಡಿ ಸಾಮರ್ಥ್ಯ ಕಡಿಮೆ ಇದೆ. ಇಲ್ಲಿ ಚರಂಡಿ ಇನ್ನಷ್ಟು ಆಳ ಮಾಡಿದರೆ ಸಮಸ್ಯೆ ಇನ್ನಷ್ಟು ಬಿಗಡಾಯಿಸುತ್ತದೆ.
ಚರಂಡಿ ಅಗಲಗೊಳಿಸಿದರೆ ಅನುಕೂಲವಾಗುತ್ತದೆ. ಅಗಲಗೊಳಿಸಲು ಸ್ಥಳಾವಕಾಶದ ಕೊರತೆ ಇದೆ. ನೆರೆ ನೀರು ಸುಮಾರು 3.5 ಕಿ.ಮೀ ಹರಿದು ನದಿ ಸೇರುತ್ತದೆ. ಪಂಪ್‌ವೆಲ್ ಸಂಪರ್ಕಿಸುವ ರಸ್ತೆಯ ಉಭಯ ಕಡೆಗಳಲ್ಲಿ ದುಬಾರಿ ಬಹು ಅಂತಸ್ತಿನ ಕಟ್ಟಡಗಳು ಇವೆ. ಇಷ್ಟು ದೂರ ಸ್ಥಳ ಸ್ವಾಧೀನಗೊಳಿಸಿ ಅಗತ್ಯ ಚರಂಡಿ ನಿರ್ಮಾಣ ಅತ್ಯಂತ ದುಬಾರಿಯಾಗಲಿದೆ.
ಮಳೆಯ ನೀರು ಹರಿದು ಹೋಗಿ ನದಿ ಸೇರುವ ಪ್ರತಿ ಡ್ರೈನೇಜ್ ಚರಂಡಿಯ ಒಳಗೆ; ವಿವಿಧ ಇಲಾಖೆಗಳ ಬಹಳ ಕೇಬಲ್ಗಳು ಹಾಗೂ ಪೈಪ್ಗಳು ಇದ್ದು ಇವುಗಳಿಂದಾಗಿಯೇ ನೀರು ಸರಾಗವಾಗಿ ಹರಿದು ಹೋಗಲು ಸಾಧ್ಯವಾಗುತ್ತಿಲ್ಲ. ಮಳೆ ನೀರಿನ ಜೊತೆ ಕಸಕಡ್ಡಿಗಳು, ಪ್ಲಾಸ್ಟಿಕ್ ಪೇಪರ್ ಹಾಗೂ ಇತರ ವಸ್ತುಗಳು ಬಂದು ಚರಂಡಿಯ ಒಳಗಿರುವ ಈ ಪೈಪ್ ಹಾಗೂ ಕೇಬಲ್ ಗಳಿಗೆ ತಾಗಿನಿಂತು ನೀರು ಶಾಶ್ವತವಾಗಿ ಸರಾಗವಾಗಿ ಹರಿದು ಹೋಗಲು ಅಡ್ಡಿಯನ್ನುಂಟು ಮಾಡುತ್ತವೆ. ಆದುದರಿಂದ ಸಂಬಂಧ ಪಟ್ಟವರಿಗೆ ಪತ್ರವನ್ನು ನೀಡಿ ಮೂರು ದಿನಗಳೊಳಗೆ ಚರಂಡಿ ಒಳಗಿನ ಕೇಬಲ್ ಹಾಗೂ ಪೈಪುಗಳನ್ನು ಬೇರೆ ರಹದಾರಿಯ ಮೂಲಕ ಹಾಕಲು ತಿಳಿಸಿ ಎಂದು ಜಿಲ್ಲಾಧಿಕಾರಿಯವರು ಅಧಿಕಾರಿಗಳಿಗೆ ಸೂಚಿಸಿದರು.
ನಂತೂರಿನಿಂದ ಬಂದ ರಸ್ತೆ ಪಂಪುವೆಲ್ ಬಂದು ಮುಟ್ಟುವಲ್ಲಿ ಇರುವ ಸೇತುವೆಯು ತೀರಾ ಕೆಳಮಟ್ಟ ದಲ್ಲಿದ್ದು ಮಳೆ ನೀರು ಸರಾಗವಾಗಿ ಹೋಗಲು ಅಡ್ಡಿಯನ್ನುಂಟುಮಾಡುತ್ತದೆ ಈ ಸೇತುವೆಯ ಎತ್ತರವನ್ನು ಹೆಚ್ಚಿಸಬೇಕು ಎಂಬ ಅಭಿಪ್ರಾಯವೂ ಕೇಳಿ ಬಂತು.
ನಾಲ್ಕೂ ದಿಕ್ಕುಗಳಿಂದ ಪಂಪುವೆಲ್ ವ್ರತ್ತಕ್ಕೆ ಹರಿದು ಬರುವ ಮಳೆ ನೀರನ್ನು ಅರ್ಧದಲ್ಲೇ ಪ್ರತೇಕಿಸಲು ಸಾಧ್ಯವೇ ಎಂದು ತಜ್ಞರ ಅಭಿಪ್ರಾಯ ಪಡೆದು ಪರಿಹಾರ ಕಂಡುಕೊಳ್ಳಬೇಕಾಗಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಹೇಳಿದ್ದಾರೆ.
ಜೂನ್ 17 ರಂದು, ಮಂಗಳೂರು ಮಹಾನಗರ ಪಾಲಿಕೆಯ ಆಯುಕ್ತ ರವಿಚಂದ್ರ ನಾಯಕ್, ಸ್ಥಳೀಯ ಮಾಜಿ ಕೋರ್ಪರೇಟರ್ ಸಂದೀಪ್ ಗರೋಡಿ, ಮಂಗಳೂರು ಮಹಾನಗರ ಪಾಲಿಕೆಯ ಸೂಪರಿಂಟೆಂಡೆಂಟ್ ಇಂಜಿನಿಯರ್ ನರೇಶ್ ಶೆಣೈ, ಉಪ ಆಯುಕ್ತರು ಅಭಿವೃದ್ಧಿ, ಸಹಾಯಕ ಕಾರ್ಯ ಪಾಲ ಅಭಿಯಂತರದ ರಾಜೇಶ್ ಕುಮಾರ್ ಮತ್ತು ಶಿವಲಿಂಗಪ್ಪ, ರಸ್ತೆ ಸಾರಿಗೆ ಸಲಹಾ ಸಮಿತಿಯ ಸದಸ್ಯರಾದ ಗೋಪಾಲಕೃಷ್ಣ ಭಟ್, ಸಮಾಜ ಸೇವಕ ಅಮ್ರುತ್ ಪ್ರಭು ಗಂಜೀಮಠ ಇವರ ಜೊತೆ ಜಿಲ್ಲಾಧಿಕಾರಿ ಪರಿಸ್ಥಿತಿಯ ಅವಲೋಕನ ನಡೆಸಿದರು.