×
Ad

ಕರಾವಳಿ ಉತ್ಸವವನ್ನು ಪ್ರತಿವರ್ಷ ಅರ್ಥಪೂರ್ಣವಾಗಿ ನಡೆಸಿ: ನಿರ್ಗಮನ ದ.ಕ. ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್

Update: 2025-06-18 17:43 IST

ಮಂಗಳೂರು, ಜೂ.18: ದ.ಕ. ಜಿಲ್ಲೆಯ ಬಹುಸಂಸ್ಕೃತಿಯ ಪ್ರತಿಬಿಂಬವಾಗಿ ನಡೆಸುವ ಕರಾವಳಿ ಉತ್ಸವವನ್ನು ಪ್ರತಿವರ್ಷವೂ ಅರ್ಥಪೂರ್ಣವಾಗಿ ನಡೆಸಿಕೊಂಡು ಹೋಗಬೇಕು. ಈ ನಿಟ್ಟಿನಲ್ಲಿ ಕಳೆದ ವರ್ಷದ ಉತ್ಸವದಿಂದ ಉಳಿಕೆಯಾದ ಮೊತ್ತವನ್ನು ಕಾಯ್ದಿರಿಸಲಾಗಿದೆ ಎಂದು ದ.ಕ.ಜಿಲ್ಲೆಯ ನಿರ್ಗಮನ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಹೇಳಿದರು.

ವರ್ಗಾವಣೆ ಹಿನ್ನೆಲೆಯಲ್ಲಿ ಡಿಸಿ ಅವರನ್ನು ಬುಧವಾರ ಕೊಂಕಣಿ, ಬ್ಯಾರಿ, ತುಳು ಅಕಾಡಮಿಯ ಅಧ್ಯಕ್ಷರು ಭೇಟಿಯಾಗಿ ಬೀಳ್ಕೊಟ್ಟ ಸಂದರ್ಭ ಅವರು ಮಾತನಾಡಿದರು.

ಕಳೆದ ಸಾಲಿನ ಕರಾವಳಿ ಉತ್ಸವದಲ್ಲಿ 1.20 ಕೋ. ರೂ. ಉಳಿತಾಯವಾಗಿದೆ. ಮುಂದಿನ ಕರಾವಳಿ ಉತ್ಸವ ನಡೆಸುವವರಿಗೆ ಯಾವುದೇ ಆರ್ಥಿಕ ಹೊರೆಯಾಗದು. ಉತ್ಸವವನ್ನು ಮತ್ತಷ್ಟು ಅರ್ಥಪೂರ್ಣ ವಾಗಿ ನಡೆಸಿಕೊಂಡು ಹೋಗಬೇಕು. ಈ ವೇಳೆ ಕರಾವಳಿ ಉತ್ಸವ ಮೈದಾನದ ಒಂದು ಪಾರ್ಶ್ವದಲ್ಲಿ ವಾಣಿಜ್ಯ ಕಟ್ಟಡವನ್ನು ನಿರ್ಮಿಸಿ ಅದರ ಆದಾಯದ ಅರ್ಧ ಭಾಗವನ್ನು ಕರಾವಳಿ ಉತ್ಸವ ಹಾಗೂ ಇನ್ನರ್ಧ ಭಾಗವನ್ನು ಮಂಗಳಾ ಕ್ರೀಡಾಂಗಣದ ನಿರ್ವಹಣೆಗೆ ಬಳಸಿಕೊಳ್ಳಬಹುದು. ಈ ನಿಟ್ಟಿನಲ್ಲಿ ಚಿಂತನೆಗಳನ್ನು ನಡೆಸುವಂತೆ ಮುಲ್ಲೈ ಮುಗಿಲನ್ ಸಲಹೆ ನೀಡಿದರು.

ಜಿಲ್ಲಾಧಿಕಾರಿ ಕಚೇರಿಯ ಹಳೆಯ ಕಟ್ಟಡವನ್ನು ಪಾರಂಪರಿಕ ಕಟ್ಟಡವಾಗಿ ರೂಪಿಸಿ ಕಲೆ, ಸಂಸ್ಕ್ರತಿಯ ಚಟುವಟಿಕೆಯ ಕೇಂದ್ರವಾಗಿ ರೂಪಿಸುವ ಬಗ್ಗೆ ಈಗಾಗಲೇ ಚಿಂತಿಸಲಾಗಿದೆ. ಈ ಯೋಜನೆಗೆ ಅಕಾಡಮಿ ಗಳು ಹಾಗೂ ಕಲಾವಿದರು ಪೂರಕವಾಗಿ ಸ್ಪಂದಿಸಬೇಕು ಅವರು ಮುಲ್ಲೈ ಮುಗಿಲನ್ ಅಭಿಪ್ರಾಯಪಟ್ಟರು.

ನಿರ್ಗಮನ ಜಿಲ್ಲಾಧಿಕಾರಿಗಳನ್ನು ತುಳು, ಕೊಂಕಣಿ, ಬ್ಯಾರಿ ಭಾಷೆಯ ಪುಸ್ತಕ ನೀಡಿ ಗೌರವಿಸಲಾಯಿತು. ಈ ಸಂದರ್ಭ ಕೊಂಕಣಿ, ತುಳು, ಬ್ಯಾರಿ ಅಕಾಡಮಿಗಳ ಅಧ್ಯಕ್ಷರಾದ ಜೋಕಿಂ ಸ್ಟಾನ್ಲಿ ಅಲ್ವಾರಿಸ್, ತಾರಾನಾಥ ಗಟ್ಟಿ ಕಾಪಿಕಾಡ್, ಉಮರ್ ಯು.ಎಚ್. ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News