ಮಂಗಳೂರು: ಶಕ್ತಿನಗರದ ಸಾನಿಧ್ಯ ಶಾಲೆಯಲ್ಲಿ ಈದ್ ಸ್ನೇಹಕೂಟ
ಮಂಗಳೂರು, ಜೂ.18: ತ್ಯಾಗ, ಬಲಿದಾನದ ಸಂಕೇತವಾಗಿರುವ ಬಕ್ರೀದ್ ಹಬ್ಬದ ಪ್ರಯುಕ್ತ ಸಾನಿಧ್ಯ ವಸತಿ ಶಾಲೆಯಲ್ಲಿ ಏರ್ಪಡಿಸಲಾದ ಸ್ನೇಹಕೂಟ ಅರ್ಥಪೂರ್ಣ ಎಂದು ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತ ಮುಹಮ್ಮದ್ ನಝೀರ್ ಅಭಿಪ್ರಾಯಪಟ್ಟಿದ್ದಾರೆ.
ಜಮೀಯ್ಯತುಲ್ ಫಲಾಹ್ ಮಂಗಳೂರು ಕಾರ್ಪೊರೇಶನ್ ಘಟಕದ ಆಶ್ರಯದಲ್ಲಿ ಶಕ್ತಿ ನಗರದ ಸಾನಿಧ್ಯ ವಸತಿ ಶಾಲೆಯಲ್ಲಿ ಬುಧವಾರ ನಡೆದ ‘ ಈದ್ ಸ್ನೇಹ ಕೂಟ ’ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಭಿನ್ನ ಸಾಮರ್ಥ್ಯದ ಮಕ್ಕಳನ್ನು ನಿಯಂತ್ರಿಸುವುದು ಕಷ್ಟ. ಇಲ್ಲಿನ ಶಿಕ್ಷಕರು ತ್ಯಾಗದ ಮನೋಭಾವನೆ ಯಿಂದ ಅತ್ಯಂತ ಪ್ರೀತಿಯಿಂದ ಅವರನ್ನು ನೋಡಿಕೊಳ್ಳುತ್ತಿರುವುದು ಶ್ಲಾಘನೀಯ ಎಂದರು.
ಜಮೀಯ್ಯುತಲ್ ಫಲಾಹ್ ಮಂಗಳೂರು ಕಾರ್ಪೊರೇಶನ್ ಘಟಕದ ಅಧ್ಯಕ್ಷ ಬಿ.ಎಸ್. ಮುಹಮ್ಮದ್ ಬಶೀರ್ ಅಧ್ಯಕ್ಷತೆ ವಹಿಸಿ ಮಾತನಾಡಿ
ಕಳೆದ 11 ವರ್ಷಗಳಿಂದ ಈದ್ ಸ್ನೇಹ ಕೂಟ ಆಯೋಜಿಸಲಾಗುತ್ತಿದೆ. ಇಲ್ಲಿನ ಮಕ್ಕಳೊಂದಿಗೆ ಬೆರೆತಾಗ ಹಬ್ಬದ ಸಂಭ್ರಮ ದ್ವಿಗುಣಗೊಳ್ಳುತ್ತದೆ ಎಂದರು.
ಡೆಲ್ಟಾ ಇನ್ಫ್ರಾಲಾಜಿಸ್ಟಿಕ್ಸ್(ವರ್ಲ್ಡ್ ವೈಡ್) ಲಿಮಿಟೆಡ್‌ನ ಚೇಯರ್‌ಮೆನ್ ಅಹ್ಮದ್ ಮೊಹಿದ್ದೀನ್ , ಮಾಸ್ಕೊ ಬಿಲ್ಡರ್ಸ್ ಆ್ಯಂಡ್ ಡೆವಲಪರ್‌ನ ಅಬ್ದುಲ್ ರಶೀದ್ ಮುಖ್ಯ ಅತಿಥಿಯಾಗಿದ್ದರು.
ಜಮೀಯತುಲ್ ಫಲಾಹ್ ಕೋಶಾಧಿಕಾರಿ ಇಮ್ತಿಯಾಝ್ ಖತೀಬ್ ಸ್ವಾಗತಿಸಿದರು. ಸಾನಿಧ್ಯ ಶಾಲೆಯ ಆಡಳಿತಾಧಿಕಾರಿ ವಸಂತ ಕುಮಾರ್ ಶೆಟ್ಟಿ ಪ್ರಸ್ತಾವನೆಗೈದರು. ಸಾನಿಧ್ಯ ಸಂಸ್ಥೆಯ ಅಧ್ಯಕ್ಷ ಮಹಾಬಲ ಮಾರ್ಲ ವಂದಿಸಿದರು. ಶಿಕ್ಷಕ ಹನೀಫ್ ಕಾರ್ಯಕ್ರಮ ನಿರೂಪಿಸಿದರು.