×
Ad

ದ.ಕ.ಜಿಲ್ಲೆಯನ್ನು ನಿರ್ಲಕ್ಷಿಸಿದ ರಾಜ್ಯ ಕಾಂಗ್ರೆಸ್ ಸರಕಾರ: ಶಾಸಕ ವೇದವ್ಯಾಸ್ ಕಾಮತ್, ಭರತ್ ಶೆಟ್ಟಿ ಆರೋಪ

Update: 2025-06-19 17:52 IST

ಮಂಗಳೂರು: ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದ ಬಳಿಕ ದ.ಕ.ಜಿಲ್ಲೆಯನ್ನು ಸಂಪೂರ್ಣ ವಾಗಿ ನಿರ್ಲಕ್ಷಿಸಿದೆ. ಕಳೆದ ಎರಡು ವರ್ಷಗಳಲ್ಲಿ ಕರಾವಳಿಯ ಶಾಸಕರು ಅಭಿವೃದ್ಧಿ ಕಾಮಗಾರಿಗೆ ಸಂಬಂಧಿಸಿ ಯಾವುದೇ ಶಿಲಾನ್ಯಾಸ ನಡೆಸಿಲ್ಲ. ಅಭಿವೃದ್ಧಿಗಾಗಿ ಒಂದೇ ಒಂದು ರೂಪಾಯಿಯ ಅನುದಾನವನ್ನು ಸರಕಾರ ಬಿಡುಗಡೆಗೊಳಿಸಿಲ್ಲ ಎಂದು ಶಾಸಕರಾದ ವೇದವ್ಯಾಸ್ ಕಾಮತ್ ಮತ್ತು ಭರತ್ ಶೆಟ್ಟಿ ಆರೋಪಿಸಿದ್ದಾರೆ.

ನಗರದ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಗುರುವಾರ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಯಥಾಪ್ರಕಾರ ಸಿಗುವ ತಲಾ 2 ಕೋ.ರೂ.ಗಳ ಶಾಸಕರ ನಿಧಿಯನ್ನು ಹೊರತುಪಡಿಸಿದರೆ ಹೊಸ ಕಾಮಗಾರಿಗೆ ಯಾವುದೇ ಅನುದಾನಗಳು ಬಿಡುಗಡೆಯಾಗುತ್ತಿಲ್ಲ. ಇದು ಕರಾವಳಿಯ ಕಾಂಗ್ರೆಸ್ ಶಾಸಕ ರನ್ನೂ ಹೊರತುಪಡಿಸಿಲ್ಲ. ಕಳೆದ ವರ್ಷದ ಪ್ರಾಕೃತಿಕ ವಿಕೋಪದ ಪರಿಹಾರ ಮೊತ್ತ ಇನ್ನೂ ಪಾವತಿಯಾ ಗಿಲ್ಲ. ಕರಾವಳಿ, ಮಲೆನಾಡಿಗೆ ಆಗಿನ ಬಿಜೆಪಿ ಸರಕಾರ ತಡೆಗೋಡೆ ಹಾನಿಗೆ ಪರಿಹಾರ ನೀಡಿತ್ತು. ಕಾಂಗ್ರೆಸ್ ಸರಕಾರ ತಡೆಗೋಡೆ ಹಾನಿಗೆ ಎನ್‌ಡಿಆರ್‌ಎಫ್ ನಿಯಮ ಪ್ರಕಾರ ಪರಿಹಾರ ನೀಡಲು ಸಾಧ್ಯ ವಿಲ್ಲ ಎನ್ನುತ್ತಿದೆ. ಮಳೆಹಾನಿ ಪರಿಹಾರ ಮೊತ್ತವನ್ನು ಗಣನೀಯವಾಗಿ ಕಡಿಮೆ ಮಾಡಿ ಸಂತ್ರಸ್ತರಿಗೆ ಅನ್ಯಾಯ ಎಸಗುತ್ತಿದೆ ಎಂದು ಹೇಳಿದರು.

*ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ)ದಲ್ಲಿ ಯಾವುದೇ ಕೆಲಸ ಆಗಬೇಕಾದರೆ ಬೆಂಗಳೂ ರಲ್ಲಿ ಅರ್ಜಿ ಸಲ್ಲಿಸಿ ಮಂಗಳೂರಿನಲ್ಲಿ ನಡೆಯುವ ಸಭೆಗೆ ಅಜೆಂಡಾ ಆಗಿರಿಸಬೇಕಾದ ಪ್ರಮೇಯ ಬಂದಿದೆ. ಈ ಹಿಂದೆ ಇಲ್ಲಿ ಅರ್ಜಿ ಸಲ್ಲಿಸಿ, ಇಲ್ಲಿಂದಲೇ ಅರ್ಜಿ ವಿಲೇವಾರಿ ಮಾಡಬಹುದಿತ್ತು. ತೀರ್ಮಾನಗಳೆಲ್ಲವೂ ಬೆಂಗಳೂರಿನಲ್ಲೇ ಆಗಬೇಕಾದರೆ ಇಲ್ಲಿ ಮುಡಾ ಯಾಕೆ ಎಂದು ವೇದವ್ಯಾಸ್ ಕಾಮತ್ ಪ್ರಶ್ನಿಸಿದರು.

ಕೇಂದ್ರ ಸರಕಾರದ 2.0 ಆವಾಸ್ ಯೋಜನೆಯನ್ನು ರಾಜ್ಯ ಸರಕಾರ ಇನ್ನೂ ಕಾರ್ಯಗತಗೊಳಿಸಿಲ್ಲ. ರಾಜ್ಯದ ಪಾಲು ಇಲ್ಲದೆ ಇದನ್ನು ಕಾರ್ಯಗತಗೊಳಿಸಲು ಸಾಧ್ಯವಾಗುತ್ತಿಲ್ಲ. ಇದರಿಂದ ನಿವೇಶನ ರಹಿತ ಬಡವರು ಸೌಲಭ್ಯದಿಂದ ವಂಚಿತರಾಗುತ್ತಿದ್ದಾರೆ. ಮಂಗಳೂರು ಜೈಲಿನಲ್ಲಿ ಜಾಮರ್‌ನಿಂದ ಸಾಮಾನ್ಯ ರಿಗೆ, ಸಂಘಸಂಸ್ಥೆಗಳಿಗೆ ತೊಂದರೆಯಾಗುತ್ತಿದೆ. ಜೈಲಿನ ಒಳಗೆ ಮೊಬೈಲ್‌ನಲ್ಲಿ ಮಾತನಾಡಲು ಸಾಧ್ಯವಿದೆ. ಆದರೆ ಹೊರಗೆ ಜಾಮರ್ ತೊಂದರೆ ನೀಡುತ್ತಿದೆ ಎಂದು ಕಾಮತ್ ಆರೋಪಿಸಿದರು.

ಮಂಗಳೂರು ಮಹಾನಗರ ಪಾಲಿಕೆ ಹಾಗೂ ಮುಡಾ ಕಲೆಕ್ಷನ್ ಕೇಂದ್ರವಾಗಿದೆ. ಮುಡಾದಲ್ಲಿ ಅರ್ಜಿ ಸಲ್ಲಿಸಿದರೆ ಅನುಮತಿಗೆ ಬೆಂಗಳೂರಿಗೆ ಯಾಕೆ ತೆರಳಬೇಕು ಎಂಬುದು ಅರ್ಥವಾಗುವ ವಿಷಯವಾಗಿದೆ. ಮಂಗಳೂರಿನ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಔಷಧ ಇಲ್ಲ, ವೈದ್ಯರೇ ಕೈಯಿಂದ ಹಣ ಹಾಕಿ ಬಡವರಿಗೆ ಔಷಧ ನೀಡುವಂತಾಗಿದೆ. ಪ್ರಾಕೃತಿಕ ತೊಂದರೆ ಸೇರಿದಂತೆ ಯಾವುದೇ ವಿಚಾರದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು ಶಾಸಕರನ್ನು ಸೇರಿಸಿ ಸಭೆ ನಡೆಸುತ್ತಿಲ್ಲ. ಈ ನಿಟ್ಟಿನಲ್ಲಿ ಜೂ.23ರಂದು ಬಿಜೆಪಿಯು ನಗರ ಪಾಲಿಕೆಯ ಮುಂದೆ ಪ್ರತಿಭಟನೆ ನಡೆಸಲಿದೆ ಎಂದು ಭರತ್ ಶೆಟ್ಟಿ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News