ಮಂಗಳೂರು: ಎಸ್‌ಐಒ ದ.ಕ. ಹಾಗೂ ಸೋಲಿಡಾರಿಟಿ ಯೂತ್ ಮೂವ್ಮೆಂಟ್ ಪ್ರತಿಭಟನೆ
ಮಂಗಳೂರು: ಸ್ಟೂಡೆಂಟ್ಸ್ ಇಸ್ಲಾಮಿಕ್ ಆರ್ಗನೈಸೇಶನ್ ಹಾಗೂ ಸೋಲಿಡಾರಿಟಿ ಯೂತ್ ಮೂವ್ಮೆಂಟ್ ದ.ಕ.ಜಿಲ್ಲಾ ಘಟಕದ ವತಿಯಿಂದ ಧರ್ಮದ ಆಧಾರದಲ್ಲಿ ಕೇರಳದ ಅಶ್ರಫ್ ಮತ್ತು ಕೊಳತ್ತಮಜಲಿನ ಅಬ್ದುಲ್ ರಹ್ಮಾನ್‌ರ ಹತ್ಯೆಯ ಪ್ರಕರಣಗಳಲ್ಲಿ ಶೀಘ್ರ ನ್ಯಾಯ ಒದಗಿಸಬೇಕು ಎಂದು ಆಗ್ರಹಿಸಿ ಕ್ಲಾಕ್ ಟವರ್ ಬಳಿ ಶುಕ್ರವಾರ ಪ್ರತಿಭಟನೆ ನಡೆಯಿತು.
ಧರ್ಮದ ಹೆಸರಿನಲ್ಲಿ ನಡೆಯುತ್ತಿರುವ ಹಿಂಸಾಚಾರದ ವಿರುದ್ಧ ರಾಜ್ಯ ಸರಕಾರವು ಸ್ಪಷ್ಟ ಮತ್ತು ಕಟ್ಟುನಿಟ್ಟಾದ ಕ್ರಮ ಕೈಗೊಳ್ಳಬೇಕೆಂದು ಪ್ರತಿಭಟನಾಕಾರರು ಆಗ್ರಹಿಸಿದರು.
ಸೋಲಿಡಾರಿಟಿ ಮೂವ್ಮೆಂಟ್ ಕೇರಳ ರಾಜ್ಯಾಧ್ಯಕ್ಷ ತೌಫಿಕ್ ಮಂಬಾಡ್ ಮಾತನಾಡಿ ಅಶ್ರಫ್ ಅವರ ಗುಂಪು ಹತ್ಯೆ ಹಾಗೂ ಅಬ್ದುಲ್ ರಹ್ಮಾನ್ ಅವರ ಹತ್ಯೆಗೆ ಸಂಬಂಧಿಸಿದಂತೆ ನಡೆಯುವ ಹೋರಾಟದಲ್ಲಿ ಕೇರಳ ಮತ್ತು ಕರ್ನಾಟಕದ ಜನತೆ ಭಾಗಿಯಾಗಬೇಕು ಎಂದರು.
ಅಡ್ವೊಕೇಟ್ ಅಮೃತ್ ಶೆಣೈ ಮಾತನಾಡಿ ಯಾವುದೇ ವ್ಯಕ್ತಿಯು ಧರ್ಮದ ಹೆಸರಿನಲ್ಲಿ ಅಥವಾ ಇನ್ನಾವುದೇ ಕಾರಣಕ್ಕೂ ಹಿಂಸೆಗೆ ಒಳಗಾಗಬಾರದು ಎಂದರು.
ಅಶ್ರಫ್‌ರ ಸಹೋದರ ಜಬ್ಬಾರ್ ಮಾತನಾಡಿ ಎಸ್‌ಐಒ ನಡೆಸುವ ಹೋರಾಟಕ್ಕೆ ತನ್ನ ಸಂಪೂರ್ಣ ಬೆಂಬಲವಿದೆ ಎಂದು ಹೇಳಿದರು.
ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾದ ದ.ಕ. ಜಿಲ್ಲಾ ಕಾರ್ಯದರ್ಶಿ ಮುನೀರ್ ಪದ್ರಂಗಿ ಮಾತನಾಡಿ ಬಜರಂಗದಳವನ್ನು ನಿಷೇಧಿಸಬೇಕೆಂದು ಮತ್ತು ಎರಡು ಕುಟುಂಬಗಳಿಗೂ ತಲಾ 50 ಲಕ್ಷ ರೂ.ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು.
ಎಸ್‌ಐಒ ರಾಜ್ಯ ಕಾರ್ಯದರ್ಶಿ ಆಸಿಫ್ ಡಿ.ಕೆ. ಮಾತನಾಡಿ ರಾಜ್ಯ ಸರಕಾರವು ಸಮುದಾಯಗಳ ನಡುವೆ ಶಾಂತಿಯನ್ನು ಕಾಪಾಡುವಲ್ಲಿ ವಿಫಲವಾಗಿದೆ ಎಂದು ಟೀಕಿಸಿದರಲ್ಲದೆ ಅಬ್ದುಲ್ ರಹ್ಮಾನ್‌ರ ಪತ್ನಿಗೆ ಸರಕಾರಿ ಉದ್ಯೋಗ ನೀಡಬೇಕೆಂದು ಒತ್ತಾಯಿಸಿದರು.