×
Ad

ವಿಜಯಪುರ-ಮಂಗಳೂರು ವಿಶೇಷ ಎಕ್ಸ್‌ಪ್ರೆಸ್ ರೈಲು ಖಾಯಂ

Update: 2025-06-28 22:54 IST

ಮಂಗಳೂರು, ಜೂ.28: ಹೆಚ್ಚುವರಿ ಪ್ರಯಾಣ ದರದೊಂದಿಗೆ ಸಂಚರಿಸುತ್ತಿದ್ದ ವಿಜಯಪುರ ಮತ್ತು ಮಂಗಳೂರು ಸೆಂಟ್ರಲ್ ನಡುವಿನ ವಿಜಯಪುರ ಎಕ್ಸ್‌ಪ್ರೆಸ್ ವಿಶೇಷ ರೈಲು (ಸಂಖ್ಯೆ 07377/378) ಸಂಚಾರವನ್ನು ಖಾಯಂಗೊಳಿಸುವಂತೆ ನೈರುತ್ಯ ರೈಲ್ವೆಯು ಕಳುಹಿಸಿರುವ ಪ್ರಸ್ತಾವನೆಯನ್ನು ಕೇಂದ್ರ ರೈಲ್ವೆ ಸಚಿವಾಲಯವು ಅನುಮೋದಿಸಿದೆ.

ಈ ಪ್ರಕ್ರಿಯೆಯು ಕರಾವಳಿ ಮತ್ತು ಉತ್ತರ ಕರ್ನಾಟಕ ಭಾಗದ ಜನರ ದೀರ್ಘ ಕಾಲದ ಬೇಡಿಕೆಯೊಂದು ಈಡೇರಿದೆ ಎಂಬ ಮಾತು ಕೇಳಿ ಬರುತ್ತಿದೆ.

ಉತ್ತರ ಕರ್ನಾಟಕ ಭಾಗದ ವೈದ್ಯಕೀಯ ಸೇವೆ ಪಡೆಯುವ ರೋಗಿಗಳು, ಶಿಕ್ಷಣ ಉದ್ದೇಶಗಳಿಗಾಗಿ ಪ್ರಯಾಣಿಸುವ ವಿದ್ಯಾರ್ಥಿಗಳು ಹಾಗೂ ನಿತ್ಯ ಪ್ರಯಾಣಿಕರಿಗೆ ಇದರಿಂದ ಹೆಚ್ಚಿನ ಅನುಕೂಲವಾಗಲಿದೆ. ಕೇಂದ್ರ ರೈಲ್ವೆ ಸಚಿವ ಅಶ್ವನಿ ವೈಷ್ಣವ್ ಮತ್ತು ರೈಲ್ವೆ ರಾಜ್ಯ ಸಚಿವ ವಿ. ಸೋಮಣ್ಣ ಅವರಿಗೆ ಕೃತಜ್ಞತೆ ಸಲ್ಲಿಸುವುದಾಗಿ ದ.ಕ.ಸಂಸದ ಬ್ರಿಜೇಶ್ ಚೌಟ ಪ್ರತಿಕ್ರಿಯಿಸಿದ್ದಾರೆ.

ಈ ರೈಲು ವಿಶೇಷ ರೈಲು ಆಗಿ ಸಂಚರಿಸುತ್ತಿದ್ದ ಸಂದರ್ಭ ಪ್ರಯಾಣಿಕರು ಹೆಚ್ಚಿನ ದರ ಪಾವತಿಸಬೇಕಾ ಗಿತ್ತು. ರೈಲು ಸೇವೆ ಖಾಯಂಗೊಂಡಿರುವ ಹಿನ್ನೆಲೆಯಲ್ಲಿ ಪ್ರಯಾಣಿಕರಿಗೆ ಆರ್ಥಿಕವಾಗಿ ಲಾಭವಾಗಲಿದೆ ಎಂದು ವಿಶ್ಲೇಷಿಸಲಾಗುತ್ತಿದೆ.

*ನಿರ್ಗಮನ ಸಮಯ ಬದಲಾವಣೆ: ಜುಲೈ 1ರಿಂದ ಅನ್ವಯವಾಗುವಂತೆ ಮಂಗಳೂರು ಸೆಂಟ್ರಲ್‌ನಿಂದ ರೈಲು ಸಂಖ್ಯೆ 17378ರ ನಿರ್ಗಮನ ಸಮಯವನ್ನು ಮಧ್ಯಾಹ್ನ 2:35ರ ಬದಲು ಸಂಜೆ 4:45ಕ್ಕೆ ಪರಿಷ್ಕರಿಸಲಾಗಿದೆ.

ಜುಲೈ 1ರಿಂದ ಪ್ರಮುಖ ನಿಲ್ದಾಣಗಳಲ್ಲಿ ಮಂಗಳೂರು ಸೆಂಟ್ರಲ್-ವಿಜಯಪುರ ಎಕ್ಸ್‌ಪ್ರೆಸ್‌ನ ಹೊರಡುವ ಸಮಯ ಹೀಗಿವೆ: ಸುಬ್ರಹ್ಮಣ್ಯ ರೋಡ್ ಸಂಜೆ 7ಕ್ಕೆ, ಹಾಸನ ರಾತ್ರಿ 10:30, ದಾವಣಗೆರೆ ತಡರಾತ್ರಿ 1:50, ಹಾವೇರಿ ಮುಂಜಾವ 3:02, ಹುಬ್ಬಳ್ಳಿ ಮುಂಜಾವ 4:50, ಗದಗ ಬೆಳಗ್ಗೆ 6:20, ಬಾಗಲಕೋಟೆ ಬೆಳಗ್ಗೆ 7:58.

ಬೆಳಗ್ಗೆ 9:35ರ ಬದಲಿಗೆ ಪೂ.11:15ಕ್ಕೆ ವಿಜಯಪುರ ತಲುಪುತ್ತದೆ. ಅಪರಾಹ್ನ 3ಕ್ಕೆ ವಿಜಯಪುರದಿಂದ ಹೊರಟು ಬೆಳಗ್ಗೆ 9:50ಕ್ಕೆ ಮಂಗಳೂರು ಸೆಂಟ್ರಲ್ ತಲುಪುವ ರೈಲು (ಸಂಖ್ಯೆ 17377) ವಿಜಯಪುರ-ಮಂಗಳೂರು ಸೆಂಟ್ರಲ್ ಎಕ್ಸ್‌ಪ್ರೆಸ್‌ನ ಸಮಯದಲ್ಲಿ ಯಾವುದೇ ಬದಲಾವಣೆಗಳಿಲ್ಲ ಎಂದು ಪ್ರಕಟನೆ ತಿಳಿಸಿದೆ.

* 2019 ರಲ್ಲಿ ಆರಂಭ: 2019ರ ನವೆಂಬರ್‌ನಲ್ಲಿ ವಿಜಯಪುರ ಮತ್ತು ಮಂಗಳೂರು ಜಂಕ್ಷನ್ ನಡುವೆ ಪರಿಚಯಿಸಲಾದ ವಿಶೇಷ ರೈಲನ್ನು ಕೋವಿಡ್-19 ಸಮಯದಲ್ಲಿ ರದ್ದುಗೊಳಿಸಲಾಯಿತು. 2021ರ ಡಿಸೆಂಬರ್ 1ರಿಂದ ಮತ್ತೆ ಆರಂಭಿಸಲಾಯಿತು. ಅವುಗಳನ್ನು 2024ರ ಎಪ್ರಿಲ್ 20ರಿಂದ ಮಂಗಳೂರು ಸೆಂಟ್ರಲ್‌ಗೆ ವಿಸ್ತರಿಸಲಾಯಿತು.

ಮಂಗಳೂರು, ದಾವಣಗೆರೆ, ಹುಬ್ಬಳ್ಳಿ ಮತ್ತು ವಿಜಯಪುರದ ಪ್ರಯಾಣಿಕರ ಸಂಘಗಳು, ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್, ಹಾಲಿ ಸಂಸದ ಬ್ರಿಜೇಶ್ ಚೌಟ ಮತ್ತು ವಿಜಯಪುರ ಸಂಸದ ರಮೇಶ್ ಸಿ.ಜಿಗಜಿಣಗಿ ಈ ರೈಲು ಸೇವೆಯನ್ನು ಖಾಯಂಗೊಳಿಸುವಂತೆ ಸಚಿವಾಲಯವನ್ನು ಒತ್ತಾಯಿಸಿದ್ದರು.

ಭಾರತೀಯ ರೈಲ್ವೆ ವೇಳಾಪಟ್ಟಿ ಸಮಿತಿ (ಐಆರ್‌ಟಿಟಿಸಿ) ಕೂಡ 2022ರಲ್ಲಿ ರೈಲು ಸೇವೆಯನ್ನು ಖಾಯಂಗೊಳಿಸುವಂತೆ ಶಿಫಾರಸು ಮಾಡಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News