×
Ad

ಕೊಣಾಜೆ: ಗದ್ದೆಗಿಳಿದ ಶಾಲಾ ವಿದ್ಯಾರ್ಥಿಗಳಿಗೆ ಕೃಷಿ ಪಾಠ

Update: 2025-07-01 22:36 IST

ಕೊಣಾಜೆ: ದಿನಾ ಶಾಲೆಯ ನಾಲ್ಕು ಗೋಡೆಗಳ‌ ಮಧ್ಯೆ ಪಾಠ ಕೇಳುತ್ತಿದ್ದ ವಿದ್ಯಾರ್ಥಿಗಳು ಮಂಗಳವಾರ ಕೊಣಾಜೆಯ ಕೆಸರು ಗದ್ದೆಗಿಳಿದು ಕೃಷಿ ಪಾಠದೊಂದಿಗೆ ವಿಶೇಷವಾದ ಅರಿವಿನ ಅನುಭವವನ್ನು ಪಡೆದುಕೊಂಡರು.

ಕೊಣಾಜೆ‌ ಪದವು ಶಾಲೆಯ ಪ್ರಾಥಮಿಕ ಹಾಗೂ ಪ್ರೌಢಶಾಲಾ ವಿದ್ಯಾರ್ಥಿಗಳಿಗಾಗಿ ಮಂಗಳವಾರ 'ಕೆಸರು ಗದ್ದೆಯಲ್ಲೊಂದು ದಿನ ಹಾಗೂ ಕೃಷಿ ಖುಷಿ' ಎಂಬ ವಿಶೇಷ ಮಾಹಿತಿ ಕಾರ್ಯಕ್ರಮವನ್ನು ಶ್ರೀ ಬ್ರಹ್ಮ ಸನ್ನಿಧಿ ನಾಗಪರಿವಾರ ಕ್ಷೇತ್ರದ ಬಳಿಯ ಗದ್ದೆಯ ಬಳಿ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.

ಮಂಗಳ ಗ್ರಾಮೀಣ ಯುವಕ ಸಂಘ(ರಿ) ಕೊಣಾಜೆ, ನಾಗ ಬ್ರಹ್ಮ ಸ್ವಸಹಾಯ ಸಂಘ ಕೆಳಗಿನ ಮನೆ, ಬ್ಯಾಂಕ್ ಆಫ್ ಬರೋಡ ಪ್ರವರ್ತಿತ ವಿಜಯ ಗ್ರಾಮೀಣ ಅಭಿವೃದ್ಧಿ ಪ್ರತಿಷ್ಠಾನ ಹಾಗೂ ಕೊಣಾಜೆ ಪದವು ಶಾಲಾಭಿವೃದ್ಧಿ ಸಮಿತಿ ಕೊಣಾಜೆ ಪ್ರೌಢಶಾಲಾ ರಾಷ್ಟ್ರೀಯ ಸೇವಾ ಯೋಜನೆಯ ಜಂಟಿ ಆಶ್ರಯದಲ್ಲಿ ಕಾರ್ಯಕ್ರಮ‌ ನಡೆಯಿತು.

ಪ್ರಾಥಮಿ‌ಕ ಶಾಲೆಯ 173 ಹಾಗೂ ಪ್ರೌಢಶಾಲೆಯ 130 ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಉತ್ಸಾಹ ದಿಂದ ಪಾಲ್ಗೊಂಡರು. ವಿದ್ಯಾರ್ಥಿಗಳೊಂದಿಗೆ ಶಿಕ್ಷಕರು ಹಾಗೂ ವಿದ್ಯಾರ್ಥಿಗಳ ಪೋಷಕರು ಕೂಡಾ ಭಾಗವಹಿಸಿದ್ದರು.

ಕಾರ್ಯಕ್ರಮವನ್ನು ವಿಜಯ ಗ್ರಾಮೀಣ ಪ್ರತಿಷ್ಠಾನದ ಪ್ರಸಾದ್ ರೈ ಕಲ್ಲಿಮಾರ್ ಅವರು ಉದ್ಘಾಟಿಸಿ, ಆಧುನಿಕತೆಯ ಭರಾಟೆಯಲ್ಲಿ ಬದುಕನ್ನು ಕಳೆದುಕೊಳ್ಳದೆ ಪಾರಂಪರಿಕ ಜೀವನದ ಮಹತ್ವವನ್ನು ಅರಿತುಕೊಳ್ಳಬೇಕು. ನಗರ ಜೀವನಕ್ಕೂ ಗ್ರಾಮೀಣ ಜೀವನಕ್ಕೂ ವ್ಯತ್ಯಾಸ ಇದೆ. ವಿದ್ಯಾರ್ಥಿಗಳು ಮೊಬೈಲ್ ನಿಂದ ದೂರವಿದ್ದು, ಪರಿಸರ ಹಾಗೂ ಕೃಷಿಯ ಬಗ್ಗೆ ಅರಿವು ಹೆಚ್ಚಿಸಿಕೊಳ್ಳಲು ಇಂತಹ ಕಾರ್ಯಕ್ರಮ ಪೂರಕವಾಗಿದೆ ಎಂದರು.

ನಿವೃತ್ತ ಮುಖ್ಯೋಪಾಧ್ಯಾಯರಾದ ರವೀಂದ್ರ ರೈ ಕಲ್ಲಿಮಾರ್ ಮಾತನಾಡಿ, ಒಂದು ಅರ್ಥಪೂರ್ಣ ಕಾರ್ಯಕ್ರಮ. ಮಾನವ ಸಂಸ್ಕಾರದೊಂದಿಗೆ ಪ್ರಕೃತಿ ಸಂಸ್ಕಾರದ ಮೌಲ್ಯವನ್ನು ನಾವು ಬೆಳೆಸಿಕೊಳ್ಳ ಬೇಕು. ನಾವು ಎಷ್ಟು ಜಾಣರಾದರೂ ಪ್ರಕೃತಿಯ ವಿಷಯದಲ್ಲಿ ದಡ್ಡರಾಗುತ್ತಿದ್ದೇವೆ. ಇದರಿಂದಾಗಿಯೇ ಇಂದು ಪ್ರಕೃತಿ ವಿಕೋಪಗಳು ಹೆಚ್ಚು ನಡೆಯುತ್ತಿವೆ. ಇಂತಹ ಕಾರ್ಯಕ್ರಮ ಹೆಚ್ಚೆಚ್ಚು ನಡೆಯಬೇಕು ಎಂದರು.

ಸಮಾಜ ಸೇವಕ ಸುರೇಂದ್ರ ರೈ, ಅಬ್ದುಲ್ ರಹಿಮಾನ್ ಎ.ಕೆ., ಪಂಚಾಯತ್ ಸದಸ್ಯೆ ಶಶಿಕಲಾ,‌ ಕಾರ್ತಿಕ್, ಪಂಚಾಯಿತಿ ಮಾಜಿ ಸದಸ್ಯ ಹಸನ್ ಕುಂಞಿ, ಶಾಲಾಭಿವೃದ್ಧಿ ಸಮಿತಿಯ, ಅಬ್ದುಲ್ ಖಾದರ್, ಅಬ್ದುಲ್ ಲತೀಫ್ , ಅಶ್ರಫ್, ಕೃಷಿಕರಾದ ದಯಾನಂದ ಗಟ್ಟಿ,‌ಶಾಲಾ‌ ಮುಖ್ಯ ಶಿಕ್ಷಕಿ ಗಾಯತ್ರಿ ಎಂ, ಸಿಲ್ಪಿಯಾ ಮಿನೇಜಸ್ ಹಾಗೂ ಶಿಕ್ಷಕರು, ವಿದ್ಯಾರ್ಥಿ ಪೋಷಕರು ಉಪಸ್ಥಿತರಿದ್ದರು.

ಮಂಗಳೂರು ವಿವಿ ಸಿಂಡಿಕೇಟ್ ಸದಸ್ಯರಾದ ಅಚ್ಯುತ ಗಟ್ಟಿ ಅವರು ಸ್ವಾಗತಿಸಿದರು. ಮಂಗಳ ಗ್ರಾಮೀಣ ಯುವಕ‌ ಸಂಘದ ಅಧ್ಯಕ್ಷರಾದ ಅಬ್ದುಲ್ ರಹಿಮಾನ್ ಎ.ಕೆ.ವಂದಿಸಿದರು.

ಗದ್ದೆಯ ಬಳಿ ವಿದ್ಯಾರ್ಥಿಗಳಿಗೆ ಕೃಷಿಕ ಹಾಗೂ ಮಂಗಳೂರು ವಿವಿ ಸಿಂಡಿಕೇಟ್ ಸದಸ್ಯರಾದ ಅಚ್ಯುತ ಗಟ್ಟಿ ಅವರು, ಸುಮಾರು 150 ಕ್ಕೂ ಹೆಚ್ಚು ಗಿಡಮರಗಳ ಪರಿಚಯ ಮಾಡಿ ಅವುಗಳ ಉಪಯೋಗ ಗಳನ್ನು ತಿಳಿಸಿದರು. ಜೊತೆಗೆ ಔಷಧಿ ಸದಸ್ಯಗಳು ಮತ್ತು ಅದರ ಮಹತ್ವವನ್ನು ವಿವರಿಸಿದರು.‌

ಗದ್ದೆಗಿಳಿದ ಮಕ್ಕಳಿಗೆ ನೇಜಿಯ ಬಗ್ಗೆ ಪಾಠ ಮಾಡಿದ ಅಚ್ಯುತ ಗಟ್ಟಿ ಹಾಗೂ ಹಿರಿಯ ಕೃಷಿಕರು ನೇಜಿ ನೆಡುವುದು ಹೇಗೆ, ಬಿತ್ತುವುದು ಹೇಗೆ ಹಾಗೂ ಉಳುಮೆ ಮಾಡಿ 21 ದಿನದಲ್ಲಿ ಮೊಳಕೆ ಬರುವ ಕ್ರಮ ಹಾಗೂ ಭತ್ತದ ಬೆಳೆಯ ಬಗ್ಗೆ ಸಮಗ್ರ ಮಾಹಿತಿ ನೀಡಿದರು.‌ ಅಲ್ಲದೆ ಮಕ್ಕಳು ಕೂಡಾ ಕುತೂಹಲದಿಂದ ಭತ್ತ ಕೃಷಿಯ ಬಗ್ಗೆ ಅರಿತುಕೊಂಡರು.

ಕೆಸರು ಗದ್ದೆಯಲ್ಲಿ ಮಕ್ಕಳಿಗೆ ಕೆಸರು‌ಗದ್ದೆ ಓಟ, ರಿಲೇ, ಹಗ್ಗ ಜಗ್ಗಾಟ ಸೇರಿದಂತೆ ವಿವಿಧ ಕ್ರೀಡಾಕೂಟ ಗಳನ್ನು ಏರ್ಪಡಿಸಲಾಗಿತ್ತು ಹಾಗೂ ಮಕ್ಕಳು ಸಂಭ್ರಮದಿಂದ ಪಾಲ್ಗೊಂಡರು.

"ಮಣ್ಣಿನಿಂದಲೇ ಬದುಕು ರೂಪುಗೊಳ್ಳುತ್ತದೆ. ಇಂದಿನ ವಿದ್ಯಾರ್ಥಿಗಳಿಗೆ ಈ ಮಣ್ಣಿನ ಮಹತ್ವ ಹಾಗೂ ಕೃಷಿ ಬದುಕಿನ ಜ್ಞಾನವನ್ನು ಒದಗಿಸಿಕೊಡುತ್ತಿರುವುದು ಉತ್ತಮ ಕೆಲಸವಾಗಿದೆ. ಇಂತಹ ಕಾರ್ಯಕ್ರಮ ವಿದ್ಯಾರ್ಥಿಗಳ ಉತ್ತಮ ಬದುಕಿಗೆ ಪ್ರೇರಣೆ ನೀಡುತ್ತದೆ".

ಅಬ್ದುಲ್ ನಾಸೀರ್ ಕೆ.ಕೆ, ಶಿಕ್ಷಣ ಪ್ರೇಮಿ









Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News